
ಬಳ್ಳಾರಿ: ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರಿ ಸಮಯ, ಹಣ ವ್ಯರ್ಥವಾಗುವುದನ್ನು ತಡೆಯುವುದು ಮತ್ತು ಯಾವುದೇ ಅಲೆದಾಟವಿಲ್ಲದೇ ಆರಂಭದಲ್ಲೇ ವಿವಾದವನ್ನು ಸುಖಾಂತ್ಯಗೊಳಿಸುವ ಉದ್ದೇಶ ಹೊಂದಿರುವ ‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0’ ಜ.2ರಿಂದ 90 ದಿನಗಳ ವರೆಗೆ ನಡೆಯಲಿದೆ.
ಕಳೆದ ವರ್ಷ ಜುಲೈ 1ರಿಂದ ಅಕ್ಟೋಬರ್ 7 ವರೆಗೆ ಈ ಅಭಿಯಾನ ನಡೆದಿತ್ತು. ಆಗ 117 ಪ್ರಕರಣಗಳು ಇತ್ಯರ್ಥವಾಗಿದ್ದವು. ಈ ವರ್ಷದ ಆರಂಭದಲ್ಲೇ ಎರಡನೇ ಹಂತದ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಯಾವ ಪ್ರಕರಣಗಳ ಮಧ್ಯಸ್ಥಿಕೆ: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು, ವೈವಾಹಿಕ ಹಾಗೂ ಕೌಟುಂಬಿಕ, ಮೋಟಾರು ಅಪಘಾತ ನ್ಯಾಯಾಧೀಕರಣದ ಪ್ರಕರಣಗಳು, ಚೆಕ್ ಅಮಾನ್ಯ, ವಾಣಿಜ್ಯ, ಸೇವಾ ಪ್ರಕರಣಗಳು, ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಗ್ರಾಹಕ ವ್ಯಾಜ್ಯ ಪ್ರಕರಣಗಳು, ಡಿ.ಆರ್.ಟಿ., ಪಾಲುದಾರಿಕೆ, ಭೂ-ಸ್ವಾಧೀನ ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ಈ ಅಭಿಯಾನದಲ್ಲಿ ಇತ್ಯರ್ಥ ಮಾಡಲಾಗುತ್ತದೆ.
ಹೇಗೆ ನಡೆಯುತ್ತದೆ?: ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರುವ ಮೊದಲು, ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಲು ಸಾಧ್ಯವೇ ಎಂಬ ಪ್ರಯತ್ನವು ಕಡ್ಡಾಯವಾಗಿ ನಡೆಯುವಂತಾಗಬೇಕು ಎಂದು ಕಾನೂನಿನಲ್ಲಿ ಹೇಳಿದೆ. ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಮಧ್ಯಸ್ಥಿಕೆಯು ಕಡಿಮೆ ವೆಚ್ಚದ ಹಾಗೂ ಪರಿಣಾಮಕಾರಿಯಾದ ವ್ಯವಸ್ಥೆ ಹೀಗಾಗಿಯೇ ನ್ಯಾಯಾಲಯಗಳಲ್ಲಿ ಮಧ್ಯಸ್ಥಿಕೆ ಎಂಬುದು ನಿರಂತರ ಪ್ರಕ್ರಿಯೆ ಎಂಬಂತೆ ನಡೆಯುತ್ತದೆ. ಆದರೂ, ‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ’ ಎಂಬುದು ವಿಶೇಷ ಅಭಿಯಾನವಾಗಿದ್ದು, ಜ. 2ರಿಂದ ಪ್ರತಿದಿನ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ಮಧ್ಯಸ್ಥಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಅಭಿಯಾನದ ಮೊದಲ 30 ದಿನ ಪ್ರಕರಣಗಳನ್ನು ಅಧ್ಯಯನ ಮಾಡಿ ರಾಜೀಸಂಧಾನಕ್ಕೆ ರವಾನಿಸಲಾಗುತ್ತದೆ. ನಂತರದ 60 ದಿನಗಳಲ್ಲಿ ಮಧ್ಯಸ್ಥಗಾರರ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ ಎನ್ನಲಾಗಿದೆ.
ವಿವಾದಗಳು ಕೋರ್ಟ್ ಮೆಟ್ಟಿಲು ಏರುವುದಕ್ಕೂ ಮುನ್ನ ಪ್ರಕರಣಗಳನ್ನು ಸುಖಾಂತ್ಯಗೊಳಿಸಲು ಇದು ಸದವಕಾಶ. ಮಧ್ಯಸ್ಥಗಾರರ ಮೂಲಕ ಪ್ರಕರಣಗಳ ರಾಜೀಸಂಧಾನ ನಡೆಸಲಾಗುತ್ತದೆ. ಜನ ಈ ಅಭಿಯಾನದ ಸದುಪಯೋಗ ಪಡೆಯಬೇಕು.– ರಾಜೇಶ ಹೊಸಮನೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.