ADVERTISEMENT

ಬಳ್ಳಾರಿ: ಮನರೇಗಾ ಕಾಮಗಾರಿ ಕಣ್ಗಾವಲಿಗೆ ಆ್ಯಪ್

ಪ್ರತ್ಯೇಕ ಆ್ಯಪ್‌ ರೂಪಿಸಿರುವ ಬಳ್ಳಾರಿ ಜಿಲ್ಲಾ ಪಂಚಾಯಿತಿ | ಕೇಂದ್ರ ತಂಡದ ಮೆಚ್ಚುಗೆ

ಆರ್. ಹರಿಶಂಕರ್
Published 4 ಆಗಸ್ಟ್ 2025, 0:07 IST
Last Updated 4 ಆಗಸ್ಟ್ 2025, 0:07 IST
‘ಮನರೇಗಾ’ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಸ್ಥಳವೊಂದಕ್ಕೆ ಭೇಟಿ ನೀಡಿರುವ ಅಧಿಕಾರಿಯೊಬ್ಬರು ಆ್ಯಪ್‌ಗೆ ಅಪ್ಲೋಡ್‌ ಮಾಡಿರುವ ಜಿಪಿಎಸ್‌ ಸಹಿತ ಚಿತ್ರ 
‘ಮನರೇಗಾ’ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಸ್ಥಳವೊಂದಕ್ಕೆ ಭೇಟಿ ನೀಡಿರುವ ಅಧಿಕಾರಿಯೊಬ್ಬರು ಆ್ಯಪ್‌ಗೆ ಅಪ್ಲೋಡ್‌ ಮಾಡಿರುವ ಜಿಪಿಎಸ್‌ ಸಹಿತ ಚಿತ್ರ    

ಬಳ್ಳಾರಿ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ ಜಾರಿಯಲ್ಲಿ ಪಾರದರ್ಶಕತೆ ಹೆಚ್ಚಿಸಿ, ದೋಷಗಳನ್ನು ಸರಿಪಡಿಸಲು ಬಳ್ಳಾರಿ ಜಿಲ್ಲಾ ಪಂಚಾಯಿತಿಯು ಪ್ರತ್ಯೇಕ ಆ್ಯಪ್‌ ರೂಪಿಸಿ ಗಮನ ಸೆಳೆದಿದೆ.

ಯೋಜನೆಯಡಿ ಕಾಮಗಾರಿಗಳಲ್ಲಿ ನುಸುಳುವ ಅಕ್ರಮಗಳನ್ನು ಮನಗಂಡ ಬಳ್ಳಾರಿ ಜಿಲ್ಲಾ ಪಂಚಾಯಿತಿಯು, ಮೇಲುಸ್ತುವಾರಿ ತಂಡದ ಕಾರ್ಯನಿರ್ವಹಣೆ ಮೇಲೆ ನಿಗಾ ವಹಿಸಲೆಂದೇ ಪ್ರತ್ಯೇಕ ಆ್ಯಪ್‌ ಪರಿಚಯಿಸಿತು. ಮನರೇಗಾ ಯೋಜನೆಯ ಅಧಿಕಾರಿ, ಸಿಬ್ಬಂದಿ ಈ ಆ್ಯಪ್‌ ಬಳಸುವುದನ್ನು ಕಳೆದ ಮೂರು ತಿಂಗಳಿಂದ ಕಡ್ಡಾಯಗೊಳಿಸಿದೆ. 

ಪ್ರತಿ ಅಧಿಕಾರಿ, ಸಿಬ್ಬಂದಿ ಆಯಾ ದಿನ ಕೆಲಸಕ್ಕೆ ಹಾಜರಾಗುತ್ತಲೇ ಮೊದಲಿಗೆ ಆ್ಯಪ್‌ನಲ್ಲಿ ಹಾಜರಾತಿ ಹಾಕಬೇಕು, ಬಳಿಕ ಅಂದು ನಿರ್ವಹಿಸಿದ ಕೆಲಸಗಳನ್ನು ನಮೂದು ಮಾಡಬೇಕು. ಕ್ಷೇತ್ರ ಪರಿಶೀಲನೆ, ಕಚೇರಿ ಕೆಲಸ, ಹೀಗೆ ಯಾವ ಕೆಲಸ ಮಾಡಲಾಗಿದೆ ಎಂಬುದನ್ನು ಜಿಪಿಎಸ್‌ ಫೋಟೊ ಸಹಿತ ಮೊಬೈಲ್‌ ಆ್ಯಪ್‌ಗೆ ಅಪ್ಲೋಡ್‌ ಮಾಡಬೇಕು. ಗ್ಯಾಲರಿಯಿಂದ  ಹಳೆಯ ಫೋಟೊ ಅಪ್ಲೋಡ್‌ಗೆ ಅವಕಾಶವನ್ನೇ ಕೊಡಲಾಗಿಲ್ಲ. ಆ ಕ್ಷಣವೇ ಜಿಪಿಎಸ್ ಫೋಟೊ ತೆಗೆದು ಅಪ್ಲೋಡ್‌ ಮಾಡಬೇಕಾದ ವ್ಯವಸ್ಥೆಯನ್ನು ಆ್ಯಪ್‌ನಲ್ಲಿ ರೂಪಿಸಲಾಗಿದೆ. 

ADVERTISEMENT

ದಕ್ಷತೆ ಆಧರಿಸಿ ವೇತನ: ಪ್ರತಿಯೊಬ್ಬರ ನಿತ್ಯದ ದಿನಚರಿ ಆ್ಯಪ್‌ನಲ್ಲಿ ದಾಖಲಾಗಿರುತ್ತದೆ. ಉಸ್ತುವಾರಿಗೆ ನಿಯೋಜಿತವಾದ ಗುತ್ತಿಗೆ ಆಧಾರದ ನೇಮಕವಾಗಿರುವ ಅಧಿಕಾರಿ, ಸಿಬ್ಬಂದಿ ಮಾಸಿಕ ಡೈರಿ ಆಧರಿಸಿ, ಕಾರ್ಯಕ್ಷಮತೆ ಆಧರಿಸಿ ವೇತನ ಪಾವತಿ ಮಾಡುವ ವ್ಯವಸ್ಥೆಯನ್ನು ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಳವಡಿಸಿಕೊಂಡಿದೆ. ಹೀಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ಮನರೇಗಾ ಮೇಲುಸ್ತುವಾರಿ ಸಮಿತಿಯು ಕ್ರಿಯಾಶೀಲವಾಗಿ ಕೆಲಸ ಮಾಡಲಾರಂಭಿಸಿದೆ. 

ಕಡಿಮೆ ಬೆಲೆಯ ಆ್ಯಪ್‌:  ಜಿಲ್ಲಾ ಪಂಚಾಯಿತಿಯ ಹಿಂದಿನ ಸಿಇಒ ರಾಹುಲ್‌ ಶರಣಪ್ಪ ಸಂಕನೂರ ಇಂತಹ ಆ್ಯಪ್‌ ರೂಪಿಸಲು ತಂಡವೊಂದಕ್ಕೆ ಕೆಲಸ ವಹಿಸಿದ್ದರು. ಅವರ ವರ್ಗಾವಣೆ ಬಳಿಕ ಸಿಇಒ ಆಗಿ ಬಂದ ಮೊಹಮದ್‌ ಹ್ಯಾರಿಸ್‌ ಸುಮೇರ್‌ ಆ್ಯಪ್‌ಗೆ ಅಂತಿಮ ರೂಪ ನೀಡಿದ್ದಾರೆ. ಕೇವಲ ₹2 ಲಕ್ಷದಲ್ಲಿ ಆ್ಯಪ್‌ ಅಭಿವೃದ್ಧಿಗೊಂಡಿದೆ. 

ಈ ಆ್ಯಪ್‌ ಅನ್ನು ಆಡಳಿತಾತ್ಮಕ ವೆಚ್ಚದಲ್ಲಿ ರೂಪಿಸಲು ತಿಳಿಸಲಾಗಿತ್ತು. ಆದರೆ, ಮನರೇಗಾ ಅಡಿ ಕೇಂದ್ರ ಯಾವುದೇ ರಾಜ್ಯಕ್ಕೂ ಆಡಳಿತಾತ್ಮಕ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಆ್ಯಪ್‌ ರೂಪಿಸಿದವರಿಗೆ ಹಣ ಪಾವತಿಸಲು ಜಿಲ್ಲಾ ಪಂಚಾಯಿತಿಗೆ ಸಾಧ್ಯವಾಗಿಲ್ಲ. ಅನ್ಯ ಅನುದಾನಗಳಲ್ಲಿ ಅವರಿಗೆ ಹಣ ಪಾವತಿಸಲು ಜಿಲ್ಲಾ ಪಂಚಾಯಿತಿ ಮಾರ್ಗ ಹುಡುಕುತ್ತಿದೆ. 

ಜಿಲ್ಲಾ ಪಂಚಾಯಿತಿಗೆ ಈಚೆಗೆ ಭೇಟಿ ನೀಡಿದ್ದ ಕೇಂದ್ರದ ಮನರೇಗಾ ತಂಡ, ಅ್ಯಪ್‌ನ ಕಾರ್ಯ ನಿರ್ವಹಣೆ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಆ್ಯಪ್‌ ಕುರಿತು ಮಾಹಿತಿ ಪಡೆದಿದೆ ಎನ್ನಲಾಗಿದೆ. 

ಮೊಹಮದ್‌ ಹ್ಯಾರಿಸ್‌ ಸುಮೇರ್‌
ಆ್ಯಪ್‌ ಬಳಕೆ ಆರಂಭವಾದ ಬಳಿಕ ಗುತ್ತಿಗೆ ಆಧಾರಿತ ಅಧಿಕಾರಿ ಸಿಬ್ಬಂದಿಯಲ್ಲಿ ನಿಗಾ ವ್ಯವಸ್ಥೆಯಿದೆ ಎಂಬ ಭಾವನೆ ಮೂಡಿದೆ. ಅಚ್ಚುಕಟ್ಟಾಗಿ ಕೆಲಸ ಮಾಡುವ ಅನಿವಾರ್ಯತೆ ಇದೆ. ಕಾರ್ಯಕ್ಷಮತೆ ಹೆಚ್ಚಲು ಕಾರಣ. 
ಮೊಹಮದ್‌ ಹ್ಯಾರಿಸ್‌ ಸುಮೇರ್‌ ಸಿಇಒ ಜಿಲ್ಲಾ ಪಂಚಾಯಿತಿ ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.