ADVERTISEMENT

ಮಲ್ಲಿಗೆ ನಾಡಿನ ಕಲ್ಯಾಣಿಗಳ ಪುನಶ್ಚೇತನ; ನರೇಗಾ ಯೋಜನೆ ಅಡಿ ಕಾಯಕಲ್ಪ

ಕೆ.ಸೋಮಶೇಖರ
Published 4 ಜೂನ್ 2021, 19:30 IST
Last Updated 4 ಜೂನ್ 2021, 19:30 IST
ಹೂವಿನಹಡಗಲಿ ತಾಲ್ಲೂಕಿನ ತಳಕಲ್ಲು ಗ್ರಾಮದಲ್ಲಿ ದುರಸ್ತಿಗೊಂಡಿರುವ ಕಲ್ಯಾಣಿ
ಹೂವಿನಹಡಗಲಿ ತಾಲ್ಲೂಕಿನ ತಳಕಲ್ಲು ಗ್ರಾಮದಲ್ಲಿ ದುರಸ್ತಿಗೊಂಡಿರುವ ಕಲ್ಯಾಣಿ   

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಪಾಳು ಬಿದ್ದಿದ್ದ ಪುರಾತನ ಬಾವಿಗಳ (ಕಲ್ಯಾಣಿ) ಪುನಶ್ಚೇತನ ಕಾರ್ಯ ಭರದಿಂದ ಸಾಗಿದೆ. ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ಎಂಜಿಎನ್‌ಆರ್‌ಇಜಿ) ಯೋಜನೆ ಅಡಿ ಅವುಗಳಿಗೆ ಹೊಸ ರೂಪ ನೀಡಲಾಗುತ್ತಿದೆ.

ನೂರಾರು ವರ್ಷ ಇತಿಹಾಸ ಹೊಂದಿರುವ ನಂದಿಹಳ್ಳಿ, ತಳಕಲ್ಲು, ಕೆಂಚಮ್ಮನಹಳ್ಳಿ, ಶಿವಲಿಂಗನಹಳ್ಳಿ, ಹೊಳಲು ಗ್ರಾಮಗಳಲ್ಲಿನ ಕಲ್ಯಾಣಿಗಳ ಸಂರಕ್ಷಣೆಗೆ ಕಾಯಕಲ್ಪ ದೊರೆತಿದೆ. ಇವುಗಳಲ್ಲಿ ಕೆಲವು ವಿಜಯನಗರ ಅರಸರ ಕಾಲದಲ್ಲಿ ಚಪ್ಪಡಿ ಕಲ್ಲುಗಳಿಂದ ನಿರ್ಮಾಣವಾಗಿರುವ ವಿಶಿಷ್ಟ ವಿನ್ಯಾಸದ ಕಲ್ಯಾಣಿಗಳು ಆಕರ್ಷಣೀಯವಾಗಿವೆ.

ಶತಮಾನಗಳ ಹಿಂದೆ ವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಕಲ್ಯಾಣಿಗಳಲ್ಲಿ ಇಂದಿಗೂ ನೀರ ಸೆಲೆ ಉಕ್ಕುತ್ತಿದೆ. ನಿರ್ವಹಣೆ ಕೊರತೆಯಿಂದ ಎಲ್ಲವೂ ಪಾಳು ಬಿದ್ದಿದ್ದವು. ಹೂಳು ತುಂಬಿಕೊಂಡು ಶಿಥಿಲಾವಸ್ಥೆಯಲ್ಲಿದ್ದ ಬಾವಿಗಳಲ್ಲಿ ಗಿಡ ಗಂಟೆ, ಪೊದೆಗಳು ಬೆಳೆದು ಬಿಕೋ ಎನ್ನುತ್ತಿದ್ದವು. ಇದೀಗ ನರೇಗಾ ಯೋಜನೆ ಅಡಿ ಪುರಾತನ ಬಾವಿಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವ ಮೂಲಕ ಜಲಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ.

ADVERTISEMENT

ನಂದಿಹಳ್ಳಿಯಲ್ಲಿ ಹಿಂದಿನ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ₹9 ಲಕ್ಷ ವೆಚ್ಚದಲ್ಲಿ ಕಲ್ಯಾಣಿಯನ್ನು ಜೀರ್ಣೋದ್ಧಾರಗೊಳಿಸಿದೆ. ನೂರು ಅಡಿಗಳ ಆಳವಿರುವ ಕಲ್ಯಾಣಿ ಮರುಜೀವ ಪಡೆದಿದೆ. ಕಳೆದ ನಾಲ್ಕೈದು ವರ್ಷದಿಂದ ಮುದೇನೂರು ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಸುತ್ತಿರುವುದರಿಂದ ಕಲ್ಯಾಣಿಯಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ. ಗ್ರಾಮದ ಜನರು ಈಗ ಮತ್ತೆ ಬಾವಿ ನೀರಿನ ಬಳಕೆಗೆ ಮುಂದಾಗಿದ್ದಾರೆ.

ಕಲ್ಯಾಣಿಗಳಿಗೆ ಮಳೆಯ ನೀರು ಹರಿದು ಬರುವ ಮಾರ್ಗಗಳನ್ನು ತೋಡಲಾಗುತ್ತಿದೆ. ಬಾವಿಗಳ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸಿ, ಗಿಡಮರ ಬೆಳೆಸಲಾಗುತ್ತಿದೆ. ಇಲ್ಲಿಗೆ ಬರುವ ಜನರು ವಿಶ್ರಾಂತಿ ಪಡೆಯಲು ಆಸನಗಳನ್ನು ಅಳವಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.