ಕುರುಗೋಡು: ತುತ್ತಿನಚೀಲ ತುಂಬಿಸಿಕೊಳ್ಳುವ ಉದ್ದೇಶದಿಂದ ಕೊಪ್ಪಳ ಜಿಲ್ಲೆಯ ನೂರಾರು ಕುಟುಂಬಗಳು ಪ್ರತಿವರ್ಷ ತಾಲ್ಲೂಕಿಗೆ ಗುಳೆ ಬಂದು, ಮೆಣಸಿನಕಾಯಿ ಬೆಳೆದ ಜಮೀನುಗಳ ಸುತ್ತ ಇರುವ ಖಾಲಿ ಜಾಗದಲ್ಲಿ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡು ಬೀಡು ಬಿಡುತ್ತವೆ.
ಕೊಪ್ಪಳ ಜಿಲ್ಲೆಯ ಇಳಕಲ್‌ಗಡ, ಕನಕಗಿರಿ, ಚಿಕ್ಕಯಡೇವು, ಹುಲಿಹೈದರ್, ರಗಡೇವು, ಬುತ್ನಪೆನ್ನ, ಉಂಬಳಿರಾಂಪುರ, ನಾರಿನಾಳ, ಗರ್ಜನಾಳ ಗ್ರಾಮಗಳಿಂದ ಒಣಮೆಣಸಿನಕಾಯಿ ಒಕ್ಕಣೆ ಕೆಲಸಕ್ಕಾಗಿಯೇ ಪ್ರತಿವರ್ಷ ತಾಲ್ಲೂಕಿನ ಸಿದ್ದಮ್ಮನಹಳ್ಳಿ, ಸೋಮಸಮುದ್ರ, ಯರಿಂಗಳಿಗಿ, ವದ್ದಟ್ಟಿ, ಏಳುಬೆಂಚಿ, ಮಾರುತಿ ಕ್ಯಾಂಪ್, ಬಾದನಹಟ್ಟಿ, ದಮ್ಮೂರು ಗ್ರಾಮಗಳಿಂದ ಕುಟುಂಬ ಸಮೇತರಾಗಿ ವಲಸೆ ಬರುತ್ತಾರೆ.
ಈ ಸ್ಥಳಗಳಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ, ರಸ್ತೆ, ಚರಂಡಿ ಮುಂತಾದ ಮೂಲ ಸೌಲಭ್ಯಗಳು ಇಲ್ಲ. ಜನವರಿಯಿಂದ ಏಪ್ರಿಲ್‌ವರೆಗೆ ಒಕ್ಕಣೆ ಕಾರ್ಯ ಮುಗಿಸಿ, ತಮ್ಮ ಊರುಗಳಿಗೆ ಮರಳುತ್ತಾರೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಕುರುಗೋಡು, ಸಿಂಧಿಗೇರಿ, ದಮ್ಮೂರು, ಕೋಳೂರು, ಸೋಮಸಮುದ್ರ, ಮದಿರೆ, ಬಾದನಹಟ್ಟಿ, ಸಿದ್ದಮ್ಮನಗಳ್ಳಿ, ಏಳುಬೆಂಚಿ, ಯರಿಂಗಳಿಗಿ, ಕಲ್ಲುಕಂಭ, ಎಚ್.ವೀರಾಪುರ, ಕೃಷ್ಣಾನಗರ ಕ್ಯಾಂಪ್ ಮತ್ತು ಬಳ್ಳಾರಿ ತಾಲ್ಲೂಕಿನ ಹಂದ್ಯಾಳು, ಹಡ್ಲಿಗಿ, ಚಾನಾಳು, ಮೋಕಾ, ಸಿಡಿಗಿನಮೊಳ, ಕಪ್ಪಗಲ್ಲು, ಸಿರಿವಾರ, ಬಸರಕೋಡು ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಣಮೆಣಸಿನಕಾಯಿ ಬೆಳೆಯುತ್ತಾರೆ.
‘ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಒಟ್ಟು 41,531 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯುತ್ತಾರೆ. ವಾರ್ಷಿಕ 50 ಸಾವಿರ ಟನ್ ಒಣಮೆಣಸಿನಕಾಯಿ ಉತ್ಪಾದನೆಯಾಗುತ್ತದೆ. ಒಣಮೆಣಸಿನಕಾಯಿ ಒಕ್ಕಣೆ ಕಾರ್ಯಕ್ಕೆ ಕೂಲಿ ಕಾರ್ಮಿಕರ ಕೊರತೆ ಇರುವುದರಿಂದ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳಿಗೆ ರೈತರೇ ತೆರಳಿ ಮುಂಗಡ ಹಣ ನೀಡಿ ಕೂಲಿ ಕಾರ್ಮಿಕರನ್ನು ಕರೆತರುತ್ತಾರೆ’ ಎನ್ನುತ್ತಾರೆ ಸಿದ್ದಮ್ಮನಹಳ್ಳಿಯ ರೈತ ಮೈಲಾಪುರ ವೀರೇಶ.
‘ಈ ಸಮಯದಲ್ಲಿ ನಮ್ಮಲ್ಲಿ ಕೆಲಸ ಇರುವುದಿಲ್ಲ. ವಯಸ್ಸಾದವರನ್ನು ಮನೆಗಳಲ್ಲಿ ಬಿಟ್ಟು, ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ವಲಸೆ ಬರುತ್ತೇವೆ. ಪ್ರತಿವರ್ಷ ಫೆಬ್ರವರಿ ತಿಂಗಳು ಬರುತ್ತಿದ್ದೆವು. ಆದರೆ ಈ ವರ್ಷ ಒಣಮೆಣಸಿನಕಾಯಿ ಬಿಡಿಸಲೆಂದು ಎಕರೆಗೆ ₹20 ಸಾವಿರ ಕೂಲಿ ಸಿಗುವುದರಿಂದ ಜನವರಿ ತಿಂಗಳಲ್ಲಿಯೇ ಬಂದಿದ್ದೇವೆ. ನಾಲ್ಕು ತಿಂಗಳಲ್ಲಿ ಒಂದರಿಂದ ಒಂದುವರೆ ಲಕ್ಷ ದುಡಿಯುತ್ತೇವೆ’ ಎಂದು ಉಂಬಳಿರಾಂಪುರ ಗ್ರಾಮದ ಗೌಡಪ್ಪ ತಿಳಿಸಿದರು.
‘ಕಳೆದ 10 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇವೆ. ದುಡಿದ ಹಣದ ಜತೆಯಲ್ಲಿ ಗ್ರಾಮಗಳಲ್ಲಿರುವ ಅಲ್ಪಸ್ವಲ್ಪ ಜಮೀನಿನಲ್ಲಿ ಜೋಳ, ಸಜ್ಜೆ, ನವಣೆ ಬೆಳೆಯುತ್ತೇವೆ. ದುಡಿದ ಹಣದಲ್ಲಿ ಮಕ್ಕಳ ಶಿಕ್ಷಣ, ಅನಾರೋಗ್ಯ ವೆಚ್ಚ, ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಬಳಸಿಕೊಳ್ಳುತ್ತೇವೆ. ಸುಗ್ಗಿ ನಂತರ ನಮ್ಮ ಗ್ರಾಮಗಳಲ್ಲಿ ಕೆಲಸ, ಇಲ್ಲದ ಕಾರಣ ವಲಸೆ ಬರುತ್ತೇವೆ’ ಎಂದು ಸಂಗಪ್ಪ ದನಿಗೂಡಿಸಿದರು.
ನಮ್ಮ ಊರುಗಳಲ್ಲಿ ಉದ್ಯೋಗ ಖಾತ್ರಿ ಅಡಿ ಕೂಲಿ ಸಿಕ್ಕರೂ ಜೀವನ ನಿರ್ವಹಣೆಗೆ ಹಣ ಸಾಲುವುದಿಲ್ಲ. ಹಾಗಾಗಿ ಒಣಮೆಣಸಿನಕಾಯಿ ಒಕ್ಕಣೆ ಮಾಡಲು ಪ್ರತಿವರ್ಷ ಗುಳೇ ಹೋಗುವುದು ಅನಿವಾರ್ಯಸಂಜೀವ ಗರ್ಜನಾಳ ಗ್ರಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.