
ಹಾಲು
ಹರಪನಹಳ್ಳಿ: ಪ್ರಾಕೃತ್ತಿಕ ವಿಕೋಪಗಳಿಂದ ಆಗುವ ನಷ್ಟ ತಪ್ಪಿಸಿಕೊಳ್ಳಲು ರೈತರು ವ್ಯವಸಾಯದ ಜೊತೆ ಹೈನುಗಾರಿಕೆ ಒಂದು ಭಾಗ ಮಾಡಿಕೊಂಡಿದ್ದಾರೆ, ಆದರೆ ಹಾಲು ಖರೀದಿಸುವ ಸಂಸ್ಥೆ 50 ದಿನದ ಹಾಲಿನ ಹಣ ಬಿಡುಗಡೆ ಮಾಡದ ಪರಿಣಾಮ ಹಾಲು ಉತ್ಪಾದಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟ (ರಾ.ಬ.ಕೊ.ವಿ)ವು ನಾಲ್ಕು ಜಿಲ್ಲೆಗಳಿಂದ ನಿತ್ಯ ಒಟ್ಟು 2.35 ಲಕ್ಷ ಹಾಲು ಖರೀದಿಸುತ್ತದೆ ನಾಲ್ಕು ಜಿಲ್ಲೆಗಳ ಪೈಕಿ ವಿಜಯನಗರ ಜಿಲ್ಲೆ ಮೊದಲ ಸಾಲಿನಲ್ಲಿದ್ದು 1,18,453 ಲೀಟರ ಹಾಲು ಖರೀದಿಸುತ್ತಾರೆ. ಉಳಿದ ಕೊಪ್ಪಳ ಜಿಲ್ಲೆ 73,889, ಬಳ್ಳಾರಿ ಜಿಲ್ಲೆ 13,559, ರಾಯಚೂರು ಜಿಲ್ಲೆ 30,045 ಒಟ್ಟು 2.35,956 ಲೀಟರ್ ಹಾಲು ಒಂದು ದಿನಕ್ಕೆ ಶೇಖರಣೆ ಆಗುತ್ತದೆ.
ವಿಜಯನಗರ ಜಿಲ್ಲೆಯ ಪೈಕಿ ಹರಪನಹಳ್ಳಿಯಿಂದ ಪ್ರತಿ ದಿವಸ 37 ಸಾವಿರ ಲೀಟರ್ ಹಾಲು ರಾಬಕೊವಿಗೆ ಹೋಗುತ್ತದೆ. ಈ ಪೈಕಿ ಅತೀ ಹೆಚ್ಚು ರಾಮಘಟ್ಟ ಗ್ರಾಮದಿಂದ ಪ್ರತಿದಿನ 7 ಸಾವಿರ ಲೀಟರ್, ಕಮತ್ತಹಳ್ಳಿ 6 ಸಾವಿರ ಲೀಟರ್ ಉತ್ಪಾದನೆ ಇದ್ದು, ಎರಡು ಗ್ರಾಮಗಳು ಗಮನ ಸೆಳೆಯುತ್ತಿವೆ.
ರಾಬಕೊವಿ ಸಂಸ್ಥೆ ಗ್ರಾಹಕರಿಗೆ ಪ್ರತಿ ಲೀಟರ್ ಗೆ ಸರಾಸರಿ ₹ 34 ನಿಗಧಿಪಡಿಸಿದೆ. ಗುಣಮಟ್ಟದ ಹಾಲು ಆಗಿದ್ದರೆ, ಹೆಚ್ಚಿನ ಬೆಲೆ ಕೊಟ್ಟು ಖರೀದಿಸುತ್ತಾರೆ. ಅ.11 ರಿಂದ ಅ.20ರ ವರಗಿನ 10 ದಿನದ ₹ 8 ಕೋಟಿ ಹಣ ಅ.27ಕ್ಕೆ ಪಾವತಿಯಾಗಿದೆ. ಅ.21 ರಿಂದ ಡಿ.7ರ ವರೆಗೆ ಅಂದಾಜು ₹ 41ಕೋಟಿ ಹಣವನ್ನು ರಾಬಕೊವಿ ಬಾಕಿ ಉಳಿಸಿಕೊಂಡಿದೆ. ಇದಕ್ಕೆ ಜೊತೆಯಾಗಿ ಸರ್ಕಾರ ಪ್ರತಿ ಲೀಟರ್ ಗೆ ₹ 5 ರಂತೆ ಪಾವತಿಸುವ ಸಹಾಯಧನವೂ ಆಗಸ್ತ್ ತಿಂಗಳವರೆಗೆ ಗ್ರಾಹಕರಿಗೆ ಪಾವತಿಸಲಾಗಿದೆ. ಸೆಪ್ಟೆಂಬರ್, ಅಕ್ಟೊಬರ್ ಹಾಗೂ ನವೆಂಬರ್ ತಿಂಗಳವರೆಗೆ ಸರ್ಕಾರವೂ ಬಾಕಿ ಉಳಿಸಿಕೊಂಡಿದೆ. ಹಾಲು ಖರೀದಿ ಹಣ ಪ್ರತಿ 10 ದಿನಕ್ಕೊಮ್ಮೆ ಪಾವತಿಸುವ ನಿಯಮವಿತ್ತು, ಆದರೆ ಅದು ಸಹ ಈಗ ಪಾಲನೆ ಆಗದ ಪರಿಣಾಮ, ಬರೊಬ್ಬರಿ 50 ದಿನ ಹಣವನ್ನು ರಾಬಕೊವಿ ಬಾಕಿ ಉಳಿಸಿಕೊಂಡಿರುವುದನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಗಳು ಖಚಿತಪಡಿಸಿವೆ.
ಹರಪನಹಳ್ಳಿ ತಾಲ್ಲೂಕಿನಿಂದ ಪ್ರತಿನಿತ್ಯ 35 ಇರಂದ 37 ಸಾವಿರ ತನಕ ಹಾಲು ಮಾರಾಟ ಆಗುತ್ತದೆ. ಬಾಕಿ ಇರುವ ಹಣ ಪಾವತಿಗೆ ಕ್ರಮ ವಹಿಸಲಾಗಿದೆ.ಪರಮೇಶ್ವರಪ್ಪ, ತಾಲ್ಲೂಕು ವಿಸ್ತರಣಾಧಿಕಾರಿ, ರಾಬಕೊವಿ
ರಾಬಕೊವಿ ನಷ್ಟದಲ್ಲಿರುವ ಕಾರಣ ಹಾಲು ಖರೀದಿಸಿದ ಹಣ ಪಾವತಿಗೆ ವಿಳಂಬ ಆಗಿದೆ, ಹಾಗಾಗಿ ಸರ್ಕಾರ ಮದ್ಯ ಪ್ರವೇಶಿಸಿ ಬಾಕಿಯಿರುವ ಹಣ ಪಾವತಿಸಬೇಕು, ರೈತರ ನೆರವಿಗಿರುವ ರಾಬಕೊವಿ ಸಂಸ್ಥೆ ಉಳಿಸಬೇಕು. ನಿರ್ಲಕ್ಷಿಸಿದರೆ ಹಾಲು ಉತ್ಪಾದಕ ರೈತರು ಒಟ್ಟುಗೂಡಿ ಪ್ರತಿಭಟಿಸಲಾಗುವುದು.ಗುಡಿಹಳ್ಳಿ ಹಾಲೇಶ್, ಜಿಲ್ಲಾಧ್ಯಕ್ಷರು, ಅಖಿಲ ಭಾರತ ಕಿಸಾನ್ ಸಭಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.