ಬಳ್ಳಾರಿ: ಬಳ್ಳಾರಿಯಲ್ಲಿ, ವಿಶೇಷವಾಗಿ ಸಂಡೂರು ಭಾಗದಲ್ಲಿ ಕಬ್ಬಿಣದ ಅದಿರಿನ ಗಣಿಗಳಿಂದ ಹೊಮ್ಮುತ್ತಿರುವ ದೂಳಿನ ನಿಯಂತ್ರಣ ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳ್ಳಾರಿ ನಗರದಲ್ಲಿ ಶುಕ್ರವಾರ ನಡೆದ ಕರ್ನಾಟಕ ಮಾಲಿನ್ಯ ನಿಯಂತ್ರಣಾ ಮಂಡಳಿ (ಕೆಎಸ್‌ಪಿಸಿಬಿ) ಸುವರ್ಣಮಹೋತ್ಸವದಲ್ಲಿ ಅವರು ಮಾತನಾಡಿದರು.
‘ಗಣಿಗಳಿಂದ ಹೊಮ್ಮುತ್ತಿರುವ ದೂಳಿನಿಂದಾಗಿ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಉಸಿರಾಟದ ತೊಂದರೆ, ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇದರ ವಿರುದ್ಧ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮರು ಅರಣ್ಯೀಕರಣ, ಪರಿಸರ ಪುನಶ್ಚೇತನ ಕಾರ್ಯಗಳು ಆಗಬೇಕು’ ಎಂದು ವೇದಿಕೆಯಲ್ಲಿದ್ದ ಬಳ್ಳಾರಿ ವಲಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ. ಬಸವರಾಜು ಅವರಿಗೆ ಸೂಚನೆ ನೀಡಿದರು.
ಕೆಎಸ್‌ಪಿಸಿಬಿ ಅಧ್ಯಕ್ಷ, ಶಾಸಕ ನರೇಂದ್ರಸ್ವಾಮಿ ಮಾತನಾಡಿ, ‘ಕೆಎಸ್‌ಪಿಸಿಬಿ ಸ್ಥಾಪನೆಯಾಗಿ 50 ವರ್ಷಗಳಾಗಿವೆ. ಇದರ ಭಾಗವಾಗಿ ನ. 10 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದರು.
‘ಬಳ್ಳಾರಿಯಲ್ಲಿ ಗಣಿಗಾರಿಕೆಯಿಂದ ಪರಿಸರ ಹಾನಿಯಾಗಿದೆ. ಪರಿಸರ ಪುನಶ್ಚೇತನಕ್ಕೆ ಐದು ಗುಣಮಟ್ಟದ ಕೇಂದ್ರಗಳನ್ನು ಆರಂಭಿಸಲಾಗುವುದು. ಜೀನ್ಸ್ ತ್ಯಾಜ್ಯ ನಿರ್ವಹಣೆಗೆ ನಾವು ಸಿದ್ಧರಿದ್ದೇವೆ. ಜಿಲ್ಲೆಯಲ್ಲಿರುವ ಸ್ಪಾಂಜ್ ಐರನ್ ಕಂಪನಿಗಳ ಮೇಲೆ ನಿಗಾ ವಹಿಸಲಾಗುತ್ತದೆ. ಕೃಷ್ಣ, ತುಂಗಾಭದ್ರ ನದಿಗಳ ಮಾಲಿನ್ಯ ಕೇಂದ್ರ ತೆರೆಯಲಾಗುವುದು’ ಎಂದು ತಿಳಿಸಿದರು.
ಸುಸ್ಥಿರ ಗಣಿಗಾರಿಕೆ ಅಗತ್ಯ: ‘ಬಳ್ಳಾರಿಯಲ್ಲಿ ವೈಜ್ಞಾನಿಕವಾಗಿ ಗಣಿ ಮತ್ತು ಉದ್ಯಮಗಳು ನಡೆಯಬೇಕು. ಇದಕ್ಕಾಗಿ ವೈಜ್ಞಾನಿಕ ಅಧ್ಯಯನಗಳು ನಡೆಯಬೇಕು’ ಎಂದು ಬಳ್ಳಾರಿ–ವಿಜಯನಗರ ಸಂಸದ ಇ. ತುಕಾರಾಂ ಒತ್ತಾಯಿಸಿದರು.
‘ಬಳ್ಳಾರಿಯ ಸಂಪತ್ತು ಮುಂದಿನ ಪೀಳಿಗೆಗೆ ಉಳಿಯಬೇಕು. ಸದ್ಯ 1020 ಮಿಲಿಯನ್ ಟನ್ ಕಬ್ಬಿಣದ ಅದಿರಿನ ಸಂಪತ್ತು ಮಾತ್ರ ಉಳಿದಿದೆ’ ಎಂದರು.
ಪರಿಸರ ಹೋರಾಟಗಾರರಾದ ಶ್ರೀಶೈಲ ಆಲದಹಳ್ಳಿ (ಸಂಡೂರು), ಡಾ.ಜಿ.ಮನೋಹರ (ಬಳ್ಳಾರಿ) ಮತ್ತು ರಾಯಚೂರಿನ ಕುಂದಾ ಆಮರೇಶ, ಅಮರೇಶಗೌಡ, ಸಲಾವುದ್ದೀನ್ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೇಯರ್ ಮುಲ್ಲಂಗಿ ನಂದೀಶ್, ಶಾಸಕಿ ಅನ್ನಪೂರ್ಣ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ., ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್ ಹ್ಯಾರಿಸ್ ಸುಮೇರ್, ಡಿಸಿಎಫ್ ಬಸವರಾಜ, ಪಾಲಿಕೆ ಆಯುಕ್ತ ಮಂಜುನಾಥ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಾನಂದಪ್ಪ, ಕೆಎಸ್‌ಪಿಸಿಬಿ ಅಧಿಕಾರಿಗಳು ಇದ್ದರು.
ಸರ್ಕಾರಿ ವೇದಿಕೆ: ರಾಜಕೀಯ ಸಮಾವೇಶ ಜಿಲ್ಲೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳು ಆಡಳಿತಾರೂಢ ಪಕ್ಷದ ಸ್ಥಳೀಯ ಕಾರ್ಯಕರ್ತರಿಗೆ ವೇದಿಕೆಯಾಗುವುದು ಈ ಬಾರಿಯೂ ಮುಂದುವರಿಯಿತು. ವೇದಿಕೆಯ ಮೊದಲ ಸಾಲಿನಲ್ಲಿ ಸಚಿವರು ಸಂಸದರು ಶಾಸಕರು ಅಧಿಕಾರಿಗಳು ಕುಳಿತಿದ್ದರೆ ಹಿಂದಿನ ಸಾಲಿನಲ್ಲಿ ಸ್ಥಳೀಯ ಕಾರ್ಪೊರೇಟರ್‌ಗಳ ಜತೆಗೆ ಕಾಂಗ್ರೆಸ್‌ನ ಗಲ್ಲಿ ನಾಯಕರು ಆಸೀನರಾಗಿದ್ದರು. ವೇದಿಕೆ ಮೇಲೇರಲು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಫೋನ್ ಕರೆಗಳನ್ನು ಮಾಡಿ ಪ್ರಭಾವ ಹೇರುತ್ತಿದ್ದದ್ದು ಕಂಡುಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.