ADVERTISEMENT

’ಬಡ ರೈತರ ಜೀವನದ ಜೊತೆ ಕಂದಾಯ ಅಧಿಕಾರಿಗಳ ಚೆಲ್ಲಾಟ‘: ಜನರ ಆಕ್ರೋಶ

ಗಣಿ ಬಾಧಿತ ಪ್ರದೇಶಗಳಿಗೆ ಎಸ್.ಆರ್.ಹಿರೇಮಠ, ರವಿಕೃಷ್ಣಾ ರೆಡ್ಡಿ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 5:38 IST
Last Updated 20 ಜುಲೈ 2025, 5:38 IST
ಸಂಡೂರು ತಾಲ್ಲೂಕಿನ ನರಸಿಂಗಾಪುರ ಗ್ರಾಮದಲ್ಲಿ ಎಸ್.ಆರ್.ಹಿರೇಮಠ, ರವಿ ಕೃಷ್ಣಾರೆಡ್ಡಿ ಅವರು ಗಣಿ ಬಾಧಿತ ಗ್ರಾಮಗಳ ಭೇಟಿಯ ಸಮಯದಲ್ಲಿ ಸಸಿ ನೆಟ್ಟರು 
ಸಂಡೂರು ತಾಲ್ಲೂಕಿನ ನರಸಿಂಗಾಪುರ ಗ್ರಾಮದಲ್ಲಿ ಎಸ್.ಆರ್.ಹಿರೇಮಠ, ರವಿ ಕೃಷ್ಣಾರೆಡ್ಡಿ ಅವರು ಗಣಿ ಬಾಧಿತ ಗ್ರಾಮಗಳ ಭೇಟಿಯ ಸಮಯದಲ್ಲಿ ಸಸಿ ನೆಟ್ಟರು    

ಸಂಡೂರು: ತಾಲ್ಲೂಕಿನ ರಾಮಘಡ, ಕಮ್ಮತ್ತೂರು, ಜೈಸಿಂಗಪುರ, ಸಿದ್ದಾಪುರ, ಸುಶೀಲನಗರ, ನರಸಿಂಗಾಪುರ, ಭುಜಂಗನಗರ, ನಂದಿಹಳ್ಳಿ ಗ್ರಾಮಗಳು ಸೇರಿದಂತೆ ಇತರೆ ಗಣಿ ಬಾಧಿತ ಪ್ರದೇಶಗಳಿಗೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದ ತಂಡವು ಶುಕ್ರವಾರ, ಶನಿವಾರ  ಭೇಟಿ ನೀಡಿ, ಸ್ಥಳೀಯರೊಂದಿಗೆ ಚರ್ಚಿಸಿ ಸಮಸ್ಯೆಗಳ ಬಗ್ಗೆ ಆಲಿಸಿತು.

ಸುಶೀಲಾನಗರ ಗ್ರಾಮದ ರೈತರು ಮಾತನಾಡಿ, ‘ನಮ್ಮ ಗ್ರಾಮದ ಸುತ್ತಲೂ ನೂತನ ಗಣಿಗಾರಿಕೆಯ ಕಂಪನಿಗಳು ಆರಂಭವಾಗಿದ್ದರಿಂದ ವಿಪರೀತ ದೂಳು, ಸಂಚಾರ ದಟ್ಟಣೆಯಿಂದ ಜನರು ನಿತ್ಯ ಪರತಪಿಸುವಂತಾಗಿದೆ. ಹಲವಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ರೈತರ ಜಮೀನುಗಳನ್ನು ‘ಬ’ ಖರಾಬು ಎಂದು ದಾಖಲೆಗಳಲ್ಲಿ ನಮೂದಿಸಿ ಬಡ ರೈತರ ಜೀವನದ ಜೊತೆ ಕಂದಾಯ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ‘ ಎಂದು ದೂರಿದರು.

‘ನರಸಿಂಗಾಪುರ ಗ್ರಾಮದಲ್ಲಿ ಸಾರ್ವಜನಿಕ ಸಂಚಾರದ ಪ್ರಮುಖ ರಸ್ತೆಯಲ್ಲಿ ಅದಿರು ಲಾರಿಗಳು ನಿರಂತರವಾಗಿ ಸಂಚರಿಸುವುದರಿಂದ ಜನ ಜಾನುವಾರುಗಳ ಸಂಚಾರಕ್ಕೆ ಬಹಳ ತೊಂದರೆಯಾಗಿದ್ದು, ಲಾರಿಗಳಿಗೆ ಪ್ರತ್ಯೇಕ ಬೈಪಾಸ್ ರಸ್ತೆ ನಿರ್ಮಿಸಬೇಕು‌’ ಎಂದರು.

ADVERTISEMENT

ಭುಜಂಗನಗರ ಗ್ರಾಮದಲ್ಲಿ ಸಾರಿಗೆ ಬಸ್‍ಗಳ ಸಂಚಾರ ಕೊರತೆಯಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ನಿತ್ಯ ಸಂಚಾರಕ್ಕಾಗಿ ಪರದಾಡುತ್ತಿದ್ದು, ಸಾರಿಗೆ ಇಲಾಖೆಯಿಂದ ಹೆಚ್ಚುವರಿ ಬಸ್‍ಗಳನ್ನು ಸಕಾಲಕ್ಕೆ ಬಿಡಬೇಕು ಎಂದು ತಂಡದ ಸದಸ್ಯರ ಬಳಿ ಮನವಿ ಮಾಡಿದರು.

ಕಮ್ಮತ್ತೂರು ಗ್ರಾಮದ ಸುತ್ತಲೂ ಅತಿಯಾದ ಗಣಿಗಾರಿಕೆಯಿಂದ ಗ್ರಾಮಕ್ಕೆ ಲಾರಿಗಳ ಅಬ್ಬರದಿಂದ ದೂಳು, ಗಣಿ ಸ್ಫೋಟಕಗಳ ಶಬ್ದದಿಂದ ಗ್ರಾಮದ ಜನರ ಬದುಕು ಮೂರಾಬಟ್ಟೆಯಾಗಿದ್ದು, ಜನರು ವಿವಿಧ ರೋಗಗಳಿಗೆ ಒಳಗಾಗುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ, ಜಿಲ್ಲಾಡಳಿತವು ₹30ಸಾವಿರ ಕೋಟಿ ಅನುದಾನವನ್ನು ಗಣಿ ಬಾಧಿತ ಗ್ರಾಮಗಳ ಅಭಿವೃದ್ಧಿಗೆ ಬಳಕೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ’ ಎಂದು ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.

ತಂಡದ ಸದಸ್ಯರು ಜನರ ಸಮಸ್ಯೆಗಳ ಆಲಿಸಿ, ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳುವುದರ ಮೂಲಕ ಗಣಿ ಬಾಧಿತ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಕೆಆರ್‌ಎಸ್ ಪಕ್ಷದ ಸಂಚಾಲಕ ದೀಪಕ್ ಸಿ.ಎಸ್.ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಟಿ.ಎಂ.ಶಿವಕುಮಾರ್, ಪರಿಷತ್ ನ ಕಾರ್ಯದರ್ಶಿ ಶ್ರೀಶೈಲಾಆಲ್ದಳ್ಳಿ, ರೈತ ಸಂಘದ ಅಧ್ಯಕ್ಷ ಎಂ.ಎಲ್.ಕೆ.ನಾಯ್ಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.