ADVERTISEMENT

ಜಿಂದಾಲ್‌: ಕಾಂಗ್ರೆಸ್‌ನಲ್ಲೇ ಕಿತ್ತಾಟ ಶುರು; ಸಚಿವ–ಶಾಸಕ ಎದುರು ಬದುರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ಜೂನ್ 2019, 19:30 IST
Last Updated 18 ಜೂನ್ 2019, 19:30 IST
ಸಚಿವ ಈ. ತುಕಾರಾಂ
ಸಚಿವ ಈ. ತುಕಾರಾಂ   

ಹೊಸಪೇಟೆ: ಜಿಂದಾಲ್‌ ಕಂಪನಿಗೆ ಭೂ ಪರಭಾರೆ ಮಾಡಬೇಕೇ ಅಥವಾ ಮಾಡಬಾರದೇ ಎಂಬ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರಲ್ಲೇ ಭಿನ್ನಾಭಿಪ್ರಾಯ ಉಂಟಾಗಿದೆ. ಇದು ಒಂದು ಹೆಜ್ಜೆ ಮುಂದೆ ಹೋಗಿ ಪರಸ್ಪರ ಕಿತ್ತಾಟಕ್ಕೂ ಕಾರಣವಾಗಿದೆ.

ಸಂಡೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಿಂದಾಲ್‌ ಪರ ಸಚಿವ ಈ. ತುಕಾರಾಂ ಬಹಿರಂಗವಾಗಿಯೇ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಮೊದಲಿನಿಂದಲೂ ಜಿಂದಾಲ್‌ಗೆ ಜಮೀನು ನೀಡಬೇಕೆಂದು ವಕಾಲತ್ತು ಮಾಡುತ್ತಿದ್ದಾರೆ. ಆದರೆ, ಶಾಸಕ ಆನಂದ್‌ ಸಿಂಗ್‌, ಜಿಂದಾಲ್‌ ವಿರುದ್ಧ ಧ್ವನಿ ಎತ್ತಿದ್ದಾರೆ. ಅವರ ಮಾತಿಗೆ ಕಾಂಗ್ರೆಸ್‌ ಮುಖಂಡ ಅನಿಲ್‌ ಲಾಡ್‌ ಕೂಡ ದನಿಗೂಡಿಸಿದ್ದಾರೆ.

ಒಂದೇ ಪಕ್ಷಕ್ಕೆ ಸೇರಿದ ಈ ಮುಖಂಡರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದಾರೆ. ಜನರಿಗೆ ಪುಕ್ಕಟ್ಟೆ ಮನರಂಜನೆ ಸಿಗುತ್ತಿದೆ. ಅದರಲ್ಲೂ ತುಕಾರಾಂ ಹಾಗೂ ಆನಂದ್‌ ಸಿಂಗ್‌ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ADVERTISEMENT

’ಜಿಂದಾಲ್‌ನಿಂದ ಸ್ಥಳೀಯರಿಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ತಮಗೆ ಬೇಕಾದ ಕೆಲವರಿಗೆ ಗುತ್ತಿಗೆ ಕೆಲಸ ಕೊಟ್ಟು, ಅವರನ್ನು ಗೂಂಡಾಗಳಂತೆ ಬೆಳೆಸಿದೆ. ಕಂಪನಿ ವಿರುದ್ಧ ಧ್ವನಿ ಎತ್ತಿದರೆ ಅವರ ಮೂಲಕ ದೌರ್ಜನ್ಯ ನಡೆಸುತ್ತದೆ. ಮೂರು ಅವಧಿಯಿಂದ ನಾನು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಕನಿಷ್ಠ ಏನಿಲ್ಲವೆಂದರೂ ಐದರಿಂದ ಆರು ಸಾವಿರ ಜನರ ಪರವಾಗಿ, ವೈಯಕ್ತಿಕವಾಗಿ ಶಿಫಾರಸು ಪತ್ರ ಬರೆದು ಕೊಟ್ಟು ನೌಕರಿ ಕೊಡುವಂತೆ ಕೋರಿದ್ದೆ. ಒಬ್ಬರಿಗೂ ನೌಕರಿ ಕೊಟ್ಟಿಲ್ಲ. ಹೀಗಿರುವಾಗ ಇಂತಹ ಕಂಪೆನಿ ಜಿಲ್ಲೆಗೇಕೇ ಬೇಕು?‘ ಎಂದು ಆನಂದ್‌ ಸಿಂಗ್‌ ವಾದ ಮುಂದಿಟ್ಟಿದ್ದಾರೆ.

ಆದರೆ, ಸಿಂಗ್‌ ಅವರ ವಾದವನ್ನು ತುಕಾರಾಂ ಅಲ್ಲಗಳೆದಿದ್ದಾರೆ. ’ಸಿಂಗ್‌ ಆರೋಪ ಸತ್ಯಕ್ಕೆ ದೂರವಾದುದು. ಜಿಂದಾಲ್‌ನಿಂದ ಗೂಂಡಾಗಿರಿ ನಡೆದಿಲ್ಲ. ಒಂದುವೇಳೆ ಗೂಂಡಾಗಿರಿ ಮಾಡಿದರೆ ಆ ಕಂಪನಿ ವಿರುದ್ಧ ಒಂದಾದರೂ ಪ್ರಕರಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗುತ್ತಿತ್ತು. ಕೇವಲ ಲೆಟರ್‌ ಹೆಡ್‌ ಕೊಟ್ಟರೆ ಕೆಲಸ ಆಗದು. ಖುದ್ದು ಭೇಟಿ ಮಾಡಿ ಹೇಳಬೇಕು. ನಾನು ಈವರೆಗೆ ಸುಮಾರು ಐದುನೂರು ಸಲ ಜಿಂದಾಲ್‌ಗೆ ಹೋಗಿದ್ದೇನೆ. ಸೂಕ್ತ ಕಾರಣ ಕೊಟ್ಟರೆ ತಕ್ಷಣವೇ ಸ್ಪಂದಿಸಿ ಜಿಂದಾಲ್‌ನವರು ಕೆಲಸ ಮಾಡಿಕೊಡುತ್ತಾರೆ‘ ಎಂದು ಜಿಂದಾಲ್‌ ಅನ್ನು ಸಮರ್ಥಿಸಿಕೊಂಡು, ಸಿಂಗ್‌ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

’ಜಿಂದಾಲ್‌ಗೆ ಕಾನೂನು ಪ್ರಕಾರವಾಗಿಯೇ ಭೂಮಿ ನೀಡಲಾಗುತ್ತಿದೆ. ಕೈಗಾರಿಕೆಗಳು ಉಳಿಯಬೇಕಾದರೆ ಅಗತ್ಯ ನೆರವು–ಸಹಕಾರ ಕೊಡಬೇಕಾಗುತ್ತದೆ. ಆದರೆ, ಆನಂದ್‌ ಸಿಂಗ್‌ ಯಾವ ಕಾರಣಕ್ಕೆ ಜಿಂದಾಲ್‌ ವಿರುದ್ಧ ಮಾತನಾಡುತ್ತಿದ್ದಾರೋ ಗೊತ್ತಿಲ್ಲ‘ ಎಂದಿದ್ದಾರೆ ತುಕಾರಾಂ.

ಮುಖಂಡರ ವಾಕ್ಸಮರದಿಂದ ಜಿಲ್ಲೆಯಾದ್ಯಂತ ಜಿಂದಾಲ್‌ ವಿಷಯವಾಗಿ ಗುಸುಗುಸು ಚರ್ಚೆ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.