ಗಣರಾಜ್ಯೋತ್ಸವದ ಮುನ್ನಾ ದಿನ ಬೆಳಗಿನ ಜಾವ ನಡೆದಿದ್ದ ಅಪಹರಣ ಕೃತ್ಯ ಇಡೀ ಬಳ್ಳಾರಿ ಜನರಲ್ಲಿ ಆತಂಕ ಮೂಡಿಸಿತ್ತು. ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಸುನೀಲ್ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ರಾತ್ರಿ ಹೊತ್ತಿಗೆ ಅವರನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು. ಸದ್ಯ ಪ್ರಕರಣದಲ್ಲಿ ಪೊಲೀಸರು ಏಳು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ತಪ್ಪಿಸಿಕೊಳ್ಳಲು ಯತ್ನಿಸಿದ ಒಬ್ಬನ ಕಾಲಿಗೆ ಗುಂಡಿನೇಟು ಹೊಡೆದಿದ್ದಾರೆ. ಜನವರಿ 25ರಂದು ಬಳ್ಳಾರಿಯ ಸತ್ಯನಾರಾಯಣಪೇಟೆ ಬಳಿ ವೈದ್ಯ ಸುನಿಲ್ ಕುಮಾರ್ ಅವರನ್ನು ಅಪಹರಣ ಮಾಡಲಾಗಿತ್ತು. ₹2 ಕೋಟಿ ಹಣ, ₹3 ಕೋಟಿ ಮೌಲ್ಯದ ಚಿನ್ನದ ಗಟ್ಟಿ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಆದರೆ, ಅದೇ ದಿನ ರಾತ್ರಿ 8ರ ಸುಮಾರಿನಲ್ಲಿ ಕುರುಗೋಡು ಬಳಿಯ ಸೋಮಸಮುದ್ರದ ಬಳಿ ಸುನಿಲ್ ಕುಮಾರ್ ಅವರನ್ನು ಬಿಟ್ಟಿದ್ದ ದುಷ್ಕರ್ಮಿಗಳು, ₹300 ನೀಡಿ ಮನೆಗೆ ಹೋಗುವಂತೆ ಹೇಳಿ ಹೋಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.