
ಹೂವಿನಹಡಗಲಿ: ‘ಕ್ಷೇತ್ರ ವ್ಯಾಪ್ತಿಯಲ್ಲಿ 650 ಶಾಲಾ ಕೊಠಡಿಗಳು ಸೋರುತ್ತಿವೆ. 158 ಕಿ.ಮೀ. ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ಮೂಲ ಸೌಕರ್ಯಗಳಿಲ್ಲ. ಕೃಷಿ ಅವಲಂಬಿತ ಕ್ಷೇತ್ರವಾದರೂ ನೀರಾವರಿ ಸೌಲಭ್ಯವಿಲ್ಲ. ಅಭಿವೃದ್ಧಿ ಕೆಲಸಗಳಿಗೆ ತಕ್ಷಣ ಅನುದಾನ ಬಿಡುಗಡೆಗೊಳಿಸಬೇಕು’ ಎಂದು ಶಾಸಕ ಎಲ್.ಕೃಷ್ಣನಾಯ್ಕ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
‘ಕ್ಷೇತ್ರದ 189 ಶಾಲೆಗಳಲ್ಲಿ 25 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹೊಸದಾಗಿ 237 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿದರೆ ಸರ್ಕಾರ ಬರೀ ಒಂದು ಕೊಠಡಿ ಮಂಜೂರು ಮಾಡಿದೆ. 198 ಶಿಕ್ಷಕರ ಕೊರತೆ ಇದೆ. ಶಾಲೆಗಳಿಗೆ ಕಾಂಪೌಂಡ್ ಇಲ್ಲ, ಶೌಚಾಲಯ ಇಲ್ಲ. ಸೌಲಭ್ಯಗಳಿಲ್ಲದೇ ಮಕ್ಕಳು ಹೇಗೆ ಕಲಿಯಬೇಕು’ ಎಂದು ಪ್ರಶ್ನಿಸಿದರು.
84 ಸಾವಿರ ಹೆಕ್ಟೇರ್ ಕೃಷಿ ಭೂಮಿಯ ಪೈಕಿ 32 ಸಾವಿರ ಎಕರೆ ಮಾತ್ರ ನೀರಾವರಿ ಸೌಲಭ್ಯ ಸಿಕ್ಕಿದೆ. ಸಣ್ಣ ನೀರಾವರಿ ಇಲಾಖೆಯ ಏತ ನೀರಾವರಿ ಯೋಜನೆಗಳಿಂದ 2,685 ಹೆ. ಅಚ್ಚುಕಟ್ಟು ಪ್ರದೇಶ ಹೊಂದಿದ್ದರೂ 355 ಹೆ. ಮಾತ್ರ ನೀರು ಹರಿಯುತ್ತಿದೆ. ನಿರ್ವಹಣೆಗೆ ಅನುದಾನ ನೀಡದೇ ಇರುವುದರಿಂದ ನೀರಾವರಿ ಸೌಲಭ್ಯ ಮರೀಚಿಕೆಯಾಗಿದೆ. ಕುಡುಗೋಲ ಮಟ್ಟಿ ಏತ ನೀರಾವರಿ ಯೋಜನೆಗೆ ದಶಕದಿಂದ ಗ್ರಹಣ ಹಿಡಿದಿದೆ. ತಳಕಲ್ಲು, ಹಿರೇಮಲ್ಲನಕೆರೆ, ಬನ್ನಿಕಲ್ಲು ಕೆರೆಗಳಿಗೆ ನದಿಯಿಂದ ಪ್ರತ್ಯೇಕ ಪೈಪ್ ಲೈನ್ ಅಳವಡಿಕೆಗೆ ಪ್ರಸ್ತಾವ ಸಲ್ಲಿಸಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಹೇಳಿದರು.
‘ಎಂಜಿನಿಯರಿಂಗ್ ಕಾಲೇಜು ಇರುವಲ್ಲಿ ಎರಡು ಹಾಸ್ಟೆಲ್ ತೆರೆಯಲು ಅವಕಾಶವಿದ್ದರೂ ನನ್ನ ಕ್ಷೇತ್ರದಲ್ಲಿ ತಾಂತ್ರಿಕ ಕಾಲೇಜು ಇಲ್ಲ ಎಂದು ತಪ್ಪು ಮಾಹಿತಿ ನೀಡಿ ಹಾಸ್ಟೆಲ್ ವರ್ಗಾಯಿಸಲಾಗಿದೆ. ಇದರಿಂದ 76 ಎಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ ತೊಂದರೆಯಾಗಿದೆ ಎಂದರು.
ಮಾಗಳ-ಕಲ್ಲಾಗನೂರು ಸೇತುವೆ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಬೇಕು. ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗಾಗಿ ಕಾರ್ಖಾನೆ ತೆರೆಯಬೇಕು. ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಾಶ್ ಅವರು ರೂಪಿಸಿದ್ದ ಪೊಲೀಸ್ ತರಬೇತಿ ಶಾಲೆ ತೆರೆಯುವ ಯೋಜನೆಗೆ ಚಾಲನೆ ನೀಡಬೇಕು. ಮುಖ್ಯಮಂತ್ರಿಗಳು ಸದನಕ್ಕೆ ಉತ್ತರ ನೀಡುವಾಗ ಕ್ಷೇತ್ರದ ಈ ಕುರಿತು ಪ್ರತಿಕ್ರಿಯಿಸಬೇಕು ಎಂದು ಮನವಿ ಮಾಡಿದರು.
ಕಂಪ್ಲಿ: ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಕಂಪ್ಲಿ ಇಲ್ಲವೇ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವಂತೆ ಶಾಸಕ ಜೆ.ಎನ್. ಗಣೇಶ್ ಒತ್ತಾಯಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿ, ಸಹಕಾರಿ ರಂಗದ ಕಂಪ್ಲಿ ಸಕ್ಕರೆ ಕಾರ್ಖಾನೆ, ಹೊಸಪೇಟೆಯಲ್ಲಿ ಐಎಸ್‍ಆರ್, ಹುಲಿಗಿ ಬಳಿಯ ಸಕ್ಕರೆ ಕಾರ್ಖಾನೆಗಳು ಸ್ಥಗಿತವಾಗಿರುವುದರಿಂದ ಕಬ್ಬು ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದು, ಸಕ್ಕರೆ ಕಾರ್ಖಾನೆ ಸ್ಥಾಪನೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳಿದ್ದರೂ ಸ್ಥಳೀಯ ಯುವಕರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ತುಂಗ, ಭದ್ರಾ ನದಿ ಮತ್ತು ತುಂಗಭದ್ರಾ ನದಿಗೆ ಕಾರ್ಖಾನೆ, ಕೃಷಿ, ಚರಂಡಿ, ರಾಸಾಯನಿಕ ತ್ಯಾಜ್ಯ ಸೇರಿ ನದಿ ಕಲುಷಿತಗೊಳ್ಳುವುದನ್ನು ತಡೆಯಲು ಮೂಲದಲ್ಲಿಯೇ ನೀರನ್ನು ಸಂಸ್ಕರಿಸಿ ನದಿಗೆ ಸೇರಿಸುವ ಯೋಜನೆ ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ತುಂಗಭದ್ರಾ ಜಲಾಶಯಕ್ಕೆ ಕ್ರೆಸ್ಟ್‍ಗೇಟ್ ಅಳವಡಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಎರಡನೇ ಬೆಳೆಗೆ ನೀರಿಲ್ಲದಿದ್ದರೂ, ಮುಂದಿನ ಬೆಳೆಗೆ ನೀರೊದಗಿಸುವಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಿಎಂ, ಡಿಸಿಎಂ ಜಾಗೃತಿ ತೋರುತ್ತಾರೆ ಎಂದರು.
ಟಿ.ಬಿ ಬೋರ್ಡ್ ಅಧ್ಯಕ್ಷ, ಕಾರ್ಯದರ್ಶಿ ಕಳೆದ ನಾಲ್ಕೈದು ವರ್ಷಗಳಿಂದ ಇದ್ದಾರೆ. ಇವರು ಆಗಸ್ಟ್-ಡಿಸೆಂಬರ್‍ನಲ್ಲಿ ತಮ್ಮ ಪಾಲಿನ ನೀರು ಪಡೆಯದೆ, ಫೆಬ್ರವರಿ ನಂತರ ಬೇಸಿಗೆ ಬೆಳೆಗೆ 4-5 ಟಿಎಂಸಿ ಪಡೆಯುತ್ತಾರೆ. ಅಲ್ಲದೆ ಮಳೆಗಾಲದಲ್ಲಿ ಸಾಕಷ್ಟು ಪ್ರಮಾಣದ ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತದೆ. ಹೀಗಾಗಿ 4 ಜಿಲ್ಲೆಗಳ ರೈತರಿಗೆ ಅನಾನುಕೂಲವಾಗುತ್ತದೆ. ಹೀಗಾಗಿ ಸಮಾನಾಂತರ ಜಲಾಶಯ ನಿರ್ಮಿಸಿದರೆ ನಮ್ಮ ಭಾಗದ ರೈತರಿಗೆ ಸಹಕಾರಿಯಾಗಲಿದೆ ಎಂದರು.
ಆಲಮಟ್ಟಿ ಜಲಾಶಯದಿಂದ ನೆಲಗಾಲುವೆ ಮೂಲಕ ನೀರು ತರುವಂತೆ ಸಲಹೆ ನೀಡಿದರು. ಅಲ್ಲದೆ, ವಿತರಣಾ ನಾಲೆಗಳಿಗೆ ಒದಗಿಸುವ ನೀರಿನ ಇಂಡೆಂಟ್‍ನ್ನು ಪರಿಷ್ಕರಿಸಿ ಹೆಚ್ಚಿನ ಪ್ರಮಾಣದ ನೀರು ಹರಿಸಬೇಕೆಂದು ಒತ್ತಾಯಿಸಿದರು. ಹೊಲಕ್ಕೊಂದು ಕೆರೆ ಯೋಜನೆ ಅನುಷ್ಠಾನಗೊಳಿಸಿ ರೈತರಿಗೆ ನೀರಿನ ಅನುಕೂಲ ಒದಗಿಸುವಂತೆ ಮನವಿ ಮಾಡಿದರು.
ಕಂಪ್ಲಿ ಗ್ರಾಮೀಣ ಭಾಗದಲ್ಲಿ ಬಡ ಕುಟುಂಬಗಳು ಕಡಿಮೆ ಬೆಲೆಗೆ ನಿವೇಶನಗಳು ಸಿಗುತ್ತದೆಂದು ಈ ಹಿಂದೆ ಕಂದಾಯ ಜಮೀನಿನಲ್ಲಿ ನಿವೇಶನಗಳನ್ನು ಖರೀದಿಸಿ ವಸತಿಗಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯಾ?. ಬಂದಿದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಅವರ ಹೆಸರುಗಳಿಗೆ ಖಾತೆಯನ್ನು ಹೊಂದಲು ಸಾಧ್ಯವಾಗದಿರು ಕಾರಣ ಏನು ಎಂದು ಪ್ರಶ್ನಿಸಿದರು.
‘ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮ/ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ಕರ್ನಾಟಕ ಭೂಸೂದಾರಣಾ ಕಾಯ್ದೆ 1961ರ ಕಲಂ 38ಎ ಮತ್ತು ನಿಯಮ 9ಸಿ ಅನ್ವಯ ಹಕ್ಕುಪತ್ರಗಳನ್ನು ಕಂದಾಯ ಇಲಾಖೆಯಿಂದ ವಿತರಣೆ ಮಾಡಲು ಅವಕಾಶಗಳನ್ನು ಕಲ್ಪಿಸಲಾಗಿರುತ್ತದೆ. ಅದರಂತೆ, ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನು ಒದಗಿಸಿದಲ್ಲಿ ಗ್ರಾಮ ಪಂಚಾಯಿತಿಗಳಿಂದ ಖಾತೆಯನ್ನು ವಿತರಣೆ ಮಾಡಬಹುದಾಗಿರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ ಖರ್ಗೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.