ADVERTISEMENT

ಉದ್ಯೋಗ ಸೃಷ್ಟಿಸಲು ಮೋದಿ ವಿಫಲ: ಎಐಡಿವೈಒ

ದುಡಿಯುವ ಕೈಗಳಿಗೆ ಕೆಲಸಕ್ಕೆ ಆಗ್ರಹಿಸಿ ಎಐಡಿವೈಒ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 11:36 IST
Last Updated 18 ಡಿಸೆಂಬರ್ 2018, 11:36 IST
‘ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯುತ್‌ ಆರ್ಗನೈಸೇಷನ್‌’ (ಎ.ಐ.ಡಿ.ವೈ.ಒ.) ಕಾರ್ಯಕರ್ತರು ಮಂಗಳವಾರ ಹೊಸಪೇಟೆಯ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
‘ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯುತ್‌ ಆರ್ಗನೈಸೇಷನ್‌’ (ಎ.ಐ.ಡಿ.ವೈ.ಒ.) ಕಾರ್ಯಕರ್ತರು ಮಂಗಳವಾರ ಹೊಸಪೇಟೆಯ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ದುಡಿಯುವ ಕೈಗಳಿಗೆ ಕೆಲಸ ಕೊಡಬೇಕೆಂದು ಒತ್ತಾಯಿಸಿ ‘ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯುತ್‌ ಆರ್ಗನೈಸೇಷನ್‌’ (ಎ.ಐ.ಡಿ.ವೈ.ಒ.) ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ರ್‍ಯಾಲಿ ನಡೆಸಿದ ಕಾರ್ಯಕರ್ತರು, ಬಳಿಕ ತಾಲ್ಲೂಕು ಕಚೇರಿಗೆ ತೆರಳಿ ಅಲ್ಲಿ ಧರಣಿ ನಡೆಸಿದರು. ನಂತರ ತಹಶೀಲ್ದಾರ್‌ ಎಚ್. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಪ್ರತಿ ವರ್ಷ ಎರಡು ಕೋಟಿ ಯುವಕರಿಗೆ ಉದ್ಯೋಗ ಕೊಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಭರವಸೆ ಕೊಟ್ಟಿದ್ದರು. ಆದರೆ, ಅದು ಹುಸಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ತಿಣುಕಾಡುತ್ತಿವೆ’ ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶರಣಪ್ಪ ಉದ್ಬಾಳ್‌ ಹೇಳಿದರು.

ADVERTISEMENT

‘ಉದ್ಯೋಗ ಕೊಡುವವರೆಗೆ ನಿರುದ್ಯೋಗ ಭತ್ಯೆ ನೀಡಬೇಕೆಂದು ಆಗ್ರಹಿಸಿ ಇದೇ 27ರಂದು ನವದೆಹಲಿಯಲ್ಲಿ ‘ಉದ್ಯೋಗ ನಮ್ಮ ಹಕ್ಕು’ ಘೋಷಣೆ ಅಡಿಯಲ್ಲಿ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿ ವರ್ಷ ದೇಶದಲ್ಲಿ 1.35 ಕೋಟಿ ಯುವಜನರು ನಿರುದ್ಯೋಗಿಗಳ ಸಾಲಿಗೆ ಹೊಸದಾಗಿ ಸೇರುತ್ತಿದ್ದಾರೆ. ಉದ್ಯೋಗವಿಲ್ಲದೆ ಯುವಜನರು ಹತಾಶರಾಗಿದ್ದಾರೆ. ಉದ್ಯೋಗ ರಹಿತ ಬೆಳವಣಿಗೆ ಯಾವ ದೇಶಕ್ಕೂ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.

‘2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೋದಿಯವರು ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇನೆ ಎಂದು ಭರವಸೆ ನೀಡಿದ್ದರು. ಯುವಕರು ಹೊಸ ಆಶಾಕಿರಣದೊಂದಿಗೆ ಮೋದಿಯವರನ್ನು ಬೆಂಬಲಿಸಿದ್ದರು. ಆದರೆ, ಮೋದಿ ಆ ನಿಟ್ಟಿನಲ್ಲಿ ಕೆಲಸ ಮಾಡಿಲ್ಲ. ಅದರ ಬಗ್ಗೆ ಎಲ್ಲೂ ಚಕಾರ ಎತ್ತುತ್ತಿಲ್ಲ. ಉದ್ಯೋಗದಂತಹ ಮೂಲಭೂತ ಸಮಸ್ಯೆಯನ್ನು ಬಗೆಹರಿಸುವುದರ ಬದಲಾಗಿ ಜಾತಿ, ಧರ್ಮದ ಹೆಸರಿನಲ್ಲಿ ಯುವಜನರನ್ನು ಒಡೆಯಲಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಉಪಾಧ್ಯಕ್ಷ ಪಂಪಾಪತಿ ಕೋಳೂರು ಮಾತನಾಡಿ, ‘ರಾಜ್ಯದ ವಿವಿಧ ಇಲಾಖೆಗಳಲ್ಲಿ ಎರಡು ಲಕ್ಷಕ್ಕೂ ಮೀರಿ ಹುದ್ದೆ ಖಾಲಿ ಉಳಿದಿವೆ. ಆದರೆ, ರಾಜ್ಯ ಸರ್ಕಾರ ಏನೂ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

ಜಿಲ್ಲಾ ಕಾರ್ಯದರ್ಶಿ ಎಚ್. ಎರ್ರಿಸ್ವಾಮಿ, ಮುಖಂಡರಾದ ರವಿ, ಹುಲುಗಪ್ಪ, ಅಭಿಷೇಕ್‌, ಉಮೇಶ್‌, ವಿದ್ಯಾರ್ಥಿ ಮುಖಂಡರಾದ ತಿಪ್ಪೇಸ್ವಾಮಿ, ಕೃಷ್ಣ, ಕನಕೇಶ್‌, ಚಿರಂಜೀವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.