ಸಿರುಗುಪ್ಪ: ತಾಲ್ಲೂಕಿನ ಅಗಸನೂರು ಗ್ರಾಮದಲ್ಲಿ ಮೊಹರಂ ಅಂಗವಾಗಿ ಕಠಿಣ ನಿಯಮ ಪಾಲಿಸಿ ಹಿಂದೂ–ಮುಸ್ಲಿಮರು ಸೇರಿ ಭಾನುವಾರ ಏಳನೇ ದಿನದ ಹಗಲು ಸರಗಸ್ತಿಯಲ್ಲಿ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಮುದಗಲ್‌ನಲ್ಲಿ ಕಾಣಿಕೆ, ಸಿಂಧನೂರು ತಾಲ್ಲೂಕಿನ ಆಯನೂರಿನಲ್ಲಿ ಸಕ್ಕರೆಯಾದರೆ ಸಿರುಗುಪ್ಪ ತಾಲ್ಲೂಕಿನ ಅಗಸನೂರು ಗ್ರಾಮದಲ್ಲಿ ಏಳನೇ ದಿನದ ಹಗಲು ಸರಗಸ್ತಿಯಲ್ಲಿ ತೆಂಗಿನಕಾಯಿ ಹರಕೆ ಅರ್ಪಿಸಿ ಸಂಭ್ರಮಿಸಿದರು.
ಮೊಹರಂ ಹಬ್ಬ ಪ್ರಾರಂಭವು ಚಂದ್ರ ದರ್ಶನದ ನಂತರ ಅಲಾಯಿ ಕುಣಿಗೆ ಗುದ್ದಲಿ ಹಾಕಿದ ದಿನದಿಂದ ದೇವರ ವಿಸರ್ಜನೆವರೆಗೆ ನಾನಾ ಮಡಿವಂತಿಕೆಯ ನಿಯಮಗಳನ್ನು ಪಾಲಿಸುವ ಮಹಿಳೆಯರು ಹೂವು ಮುಡಿಯುವುದಿಲ್ಲ, ಚಪ್ಪಲಿ ಧರಿಸುವುದಿಲ್ಲ, ಬಾಗಿಲು ಮುಚ್ಚುವುದಿಲ್ಲ, ಮನೆಯಲ್ಲಿ ಮಂಚ ಹಾಕುವಂತಿಲ್ಲ, ಸಂತಾನ ಭಾಗ್ಯವಿಲ್ಲದವರಿಗೆ ಉಡಿ ತುಂಬುವ ಪದ್ಧತಿ, ಮದ್ಯಮಾಂಸ ತ್ಯಜಿಸಿರುತ್ತಾರೆ. ಮೊಹರಂನೋಡಲು ಬರುವ ಭಕ್ತರು ಬರಿಗಾಲಿನಲ್ಲಿ ಬರುತ್ತಾರೆ.
ಏಳನೇ ದಿನದ ಹಗಲು ಸರಗಸ್ತಿಯಲ್ಲಿ ಬೆಳಗಿನಿಂದ ಪುರುಷರು ರಿವಾಯತ್ ಹಾಡುಗಳಿಗೆ ತಕ್ಕಂತೆ ಬಿಂದಿಗೆ ಹಿಡಿದು ಕುಣಿಯುವುದು ಗ್ರಾಮೀಣ ಸೊಗಡಿನ ಆಕರ್ಷಣೆಯನ್ನು ಜೀವಂತಗೊಳಿಸಿದರು.
ಲಿಂಗಾಯತರ ಮನೆತನದ ಶರಬಣ್ಣತಾತ ಮುಖ್ಯ ದೇವರನ್ನು ಹೊತ್ತು ಮಳೆ ಬೆಳೆ ಕುರಿತು ಭವಿಷ್ಯ ನುಡಿದರು. ಹಲಗೆಯ ನಾದ ಝೆಂಕಾರ ಮುಗಿಲು ಮುಟ್ಟಿತ್ತು.
ಎಂಟನೇ ದಿನವಾದ ಸೋಮವಾರ ರಾತ್ರಿ ಗ್ರಾಮದ ಹಿಂದೂ ದೇವಸ್ಥಾನಗಳಿಗೆ ಈ ದೇವರುಗಳು ತೆರಳಿ ಪೂಜೆ ಸಲ್ಲಿಸುವುದು ಕೋಮು ಸೌಹಾರ್ದತೆ ಸಾಕ್ಷಿಯಾಗುತ್ತದೆ ಎಂದು ಗ್ರಾಮಸ್ಥರ ನಂಬಿಕೆಯಾಗಿದೆ.
‘ಭಕ್ತಾದಿಗಳು ಜೋಳ ಅನ್ನದ ಕಿಚಿಡಿ, ಬೆಲ್ಲದ ಪಾನಕ ನೈವೇದ್ಯ ಸಮರ್ಪಿಸುತ್ತಾರೆ. ಗ್ರಾಮದಲ್ಲಿ 400 ವರ್ಷಗಳಿಂದ ಒಂದೇ ಕುಟುಂಬದವರು ಪೀರಲ ದೇವರನ್ನು ಹಿಡಿಯುತ್ತಾ ಬಂದಿರುವುದು ವಿಶೇಷ. ಇದರಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿ ತಂದಿದೆ’ ಎಂದು ಗ್ರಾಮಸ್ಥರಾದ ಗೋಪಾಲ ರೆಡ್ಡಿ, ನರಸಿಂಹ, ಆಟೋ ಮಂಜು, ನಾಗ, ಶಿವರಾಜ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.