ADVERTISEMENT

ಬಲವಂತದಿಂದ ದೇಣಿಗೆ ವಸೂಲಿ

ಆಹಾರ ಇಲಾಖೆ ಜಂಟಿ ನಿರ್ದೇಶಕರ ವಿರುದ್ಧ ಪಡಿತರ ವಿತರಕರ ಆರೋಪ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 4:43 IST
Last Updated 31 ಅಕ್ಟೋಬರ್ 2019, 4:43 IST
ಕೆ.ರಾಮೇಶ್ವರಪ್ಪ
ಕೆ.ರಾಮೇಶ್ವರಪ್ಪ   

ಬಳ್ಳಾರಿ: ‘ಆಹಾರ ಇಲಾಖೆ ಜಂಟಿ ನಿರ್ದೇಶಕ ಕೆ.ರಾಮೇಶ್ವರಪ್ಪ ಅವರ ಕಲಾಬಳಗದ ಪರವಾಗಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಿಂದ ₹500ರಿಂದ ₹1ಸಾವಿರದವರೆಗೆ ಬಲವಂತದ ದೇಣಿಗೆ ವಸೂಲು ಮಾಡಲಾಗುತ್ತಿದೆ’ ಎಂದು ಪಡಿತರ ವಿತರಕರ ಸಂಘದ ಉಪಾಧ್ಯಕ್ಷ ಮೀನಳ್ಳಿ ತಾಯಣ್ಣ ಆರೋಪಿಸಿದರು.

‘ನ.1ರಂದು ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿರುವ ರಾಜ್ಯೋತ್ಸವದಲ್ಲಿ ಮೈಸೂರಿನ ಇನಿದನಿ ಮಣ್ಣ ಮಕ್ಕಳ ಹೊನ್ನಪದಗಳ ಬಳಗವು ಗಾಯನ ಪ್ರಸ್ತುತಪಡಿಸಲಿದ್ದು,ದೇಣಿಗೆ ಕೊಡದಿದ್ದರೆ ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡುವ ಬೆದರಿಕೆಯನ್ನೂ ಹಾಕಲಾಗಿದೆ’ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ನಗರ ವಲಯದ ಪ್ರಭಾರಿ ಆಹಾರ ನಿರೀಕ್ಷಕ ಆದಿಶೇಷ ಶಂಕರ ಅಂಬೇಡ್ಕರ್ ಹಣ ವಸೂಲಿ ಮಾಡುತ್ತಿದ್ದಾರೆ. ಆಕ್ಷೇಪಿಸಿದ ನಂತರ ಹಣ ವಾಪಸ್ ಕೊಡುವುದಾಗಿ ಹೇಳಿದ್ದಾರೆ. ನಮಗೆ ಈ ಹಣ ವಾಪಸ್‌ ಬೇಡ ಎಂದೂ ಅವರಿಗೆ ತಿಳಿಸಿದ್ದೇವೆ. ಈ ಕುರಿತು ಇಲಾಖೆ ಕಾರ್ಯದರ್ಶಿಗೆ ದೂರು ನೀಡಲಾಗಿದೆ’ ಎಂದರು.

ADVERTISEMENT

‘ಮೂರು ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದ ರಾಮೇಶ್ವರಪ್ಪ ಅವರು ತಮ್ಮ ವರ್ಗಾವಣೆಗೆ ನ್ಯಾಯಬೆಲೆ ಅಂಗಡಿ ಮಾಲೀಕರೇ ಕಾರಣ ಎಂದು ಆರೋಪಿಸಿ ವಿನಾಕಾರಣ ಕಿರುಕುಳ ಕೊಡುತ್ತಿದ್ದಾರೆ. ನಮಗೆ ವರ್ಗಾವಣೆ ಮಾಡಿಸುವಷ್ಟು ಶಕ್ತಿ ಇಲ್ಲ. ಇನ್ನು ಮುಂದೆ ಯಾವುದೇ ನ್ಯಾಯಬೆಲೆ ಅಂಗಡಿಯನ್ನು ಅಮಾನತು ಮಾಡಿದರೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

ವ್ಯವಸ್ಥಿತ ಸಂಚು: ರಾಮೇಶ್ವರಪ್ಪ

‘ರಾಜ್ಯೋತ್ಸವಕ್ಕೂ ಆಹಾರ ಇಲಾಖೆಗೂ ಸಂಬಂಧವಿಲ್ಲ. ವಿತರಕರ ಅಕ್ರಮವನ್ನು ತಡೆದಿದ್ದಕ್ಕೆ ನನ್ನ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ’ ಎಂದು ರಾಮೇಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.

‘ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಆಹಾರ ನಿರೀಕ್ಷಕ ಆದಿಶೇಷ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಇಂಥ ಆರೋಪಗಳ ಬಗ್ಗೆ ತನಿಖೆ ಮಾಡಲು ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೂ ಪತ್ರ ಬರೆಯಲಾಗಿದೆ.ನಾನು ಜಂಟಿ ನಿರ್ದೇಶಕನಾಗಿ ವರ್ಗವಾದಾಗಿನಿಂದಲೂ ಸಂಘದವರು ಮಾನಸಿಕ ಹಿಂಸೆ ನೀಡಿ ಅಪಪ್ರಚಾರ ಮಾಡುತ್ತಿದ್ದಾರೆ. ರಜೆ ಮೇಲೆ ತೆರಳುವಂತೆ ಒತ್ತಡ ಮತ್ತು ಬೆದರಿಕೆ ಹಾಕಲಾಗುತ್ತಿದೆ. ನನಗೆ ಪ್ರಾಣಭೀತಿಯೂ ಇದೆ’ ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.