ಕೊಟ್ಟೂರು: ಚಿರಬಿ ಮೂಗಬಸವೇಶ್ವರಸ್ವಾಮಿ ರಥೋತ್ಸವ ಜರುಗಿಸುವ ಬಗ್ಗೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹರಪನಹಳ್ಳಿ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ ಹೇಳಿದರು.
‘ತಾಲ್ಲೂಕಿನ ಚಿರಬಿ ಗ್ರಾಮದ ಮೂಗಬಸವೇಶ್ವರಸ್ವಾಮಿ ರಥೋತ್ಸವ ಜರುಗಿಸುವ ಬಗ್ಗೆ ಸೋಮವಾರ ಚಿರಬಿಯಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿ ದೇವಸ್ಥಾನವು ಚಿರಬಿ ಗ್ರಾಮಕ್ಕೆ ಸೇರಿದೆ ಎಂಬುದಕ್ಕೆ ನಮ್ಮಲ್ಲಿ ದಾಖಲೆಗಳು ಇವೆ. ಆದರೆ ದೇವಸ್ಥಾನದಲ್ಲಿರುವ ನಾಮಫಲಕದಲ್ಲಿ ರಾಂಪುರ ಗ್ರಾಮದ ಹೆಸರು ಇರುವುದಕ್ಕೆ ನಮ್ಮ ಆಕ್ಷೇಪವಿದೆ. ಇದಕ್ಕೆ ಧಾರ್ಮಿಕ ಇಲಾಖೆ ಅಧಿಕಾರಿಗಳು ಸ್ಪಷ್ಟತೆ ನೀಡದ ಕಾರಣ ಗೊಂದಲ ಉಂಟಾಗಿದೆ’ ಎಂದು ಗ್ರಾಮಸ್ಥರು ವಾದ ಮಂಡಿಸಿದರು.
ಈ ವಾದಕ್ಕೆ ಸಹಾಯಕ ಆಯುಕ್ತ ಮಾತನಾಡಿ, ಮೊದಲಿನಿಂದಲೂ ದೇವಸ್ಥಾನದಲ್ಲಿ ನಡೆದುಕೊಂಡು ಬಂದ ಸಂಪ್ರದಾಯದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಲು ಅಡ್ಡಿಯಿಲ್ಲ. ಆದರೆ ರಥೋತ್ಸವ ಜರುಗಿಸುವ ಬಗ್ಗೆ ಎರಡು ಗ್ರಾಮಸ್ಥರು ಮಂಡಿಸಿದ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ನಂತರ ಜಿಲ್ಲಾಡಳಿತದ ನಿರ್ದೇಶನದಂತೆ ಭಕ್ತರು ಮುನ್ನಡೆಯಬೇಕು ಎಂದರು.
ಕೂಡ್ಲಿಗಿ ಡಿವೈಎಸ್ ಪಿ ಮಲ್ಲೇಶ ದೊಡ್ಡಮನಿ ಮಾತನಾಡಿ, ‘ರಥೋತ್ಸವದ ಬಗ್ಗೆ ಏಕ ಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಹಾಗಾಗಿ ಎರಡು ಗ್ರಾಮಸ್ಥರು ಗಾಳಿ ಸುದ್ಧಿಗೆ ಕಿವಿಗೊಡದೇ ಗೊಂದಲ ಕಂಡುಬಂದಲ್ಲಿ ನೇರವಾಗಿ ಪೊಲೀಸ್ ಇಲಾಖೆ ಗಮನಕ್ಕೆ ತಂದು ಸ್ಪಷ್ಟತೆ ಪಡೆಯಬೇಕೇ ವಿನಃ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವಂತಿಲ್ಲ’ ಎಂದು ಹೇಳಿದರು.
ಮುಖಂಡರಾದ ಸಿ.ಎಂ.ವೀರಯ್ಯ, ತಿಪ್ಪೇಶ್ ಹೊಸಮನಿ, ಮಂಜುನಾಥ್, ಪಿ.ನಾಗರಾಜ್, ಮೂಗಣ್ಣ, ಸುರೇಶ್, ಬೆಂಕಿ ರಮೇಶ್ ಮುಂತಾದವರು ಮಾತನಾಡಿದರು.
ತಹಶೀಲ್ದಾರ್ ಜಿ.ಕೆ.ಅಮರೀಶ್, ಸಿಪಿಐ ನಾರಾಯಣ, ಪಿಎಸ್ಐ ಗೀತಾಂಜಲಿ ಶಿಂಧೆ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಕಂದಾಯ ನಿರೀಕ್ಷಕ ಹರೀಶ್ ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.