ADVERTISEMENT

'ತಾಯಂದಿರು ಕೋವಿಡ್ ಹಗುರವಾಗಿ ಪರಿಗಣಿಸಬಾರದು'-ಆನಂದ್ ಸಿಂಗ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 10:34 IST
Last Updated 18 ಜನವರಿ 2022, 10:34 IST
ಹೊಸಪೇಟೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್ ಅವರು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ‘ಪುಷ್ಟಿ‘ ಪೌಷ್ಟಿಕಾಂಶ ವಿತರಿಸಿದರು
ಹೊಸಪೇಟೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್ ಅವರು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ‘ಪುಷ್ಟಿ‘ ಪೌಷ್ಟಿಕಾಂಶ ವಿತರಿಸಿದರು   

ಹೊಸಪೇಟೆ(ವಿಜಯನಗರ): 'ಕೋವಿಡ್-19 ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ತಾಯಂದಿರು ಇದರ ಬಗ್ಗೆ ನಿರ್ಲಕ್ಷ್ಯ ತೋರದೆ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಿಳಿಸಿದರು.

ನಗರದಲ್ಲಿ ಸೋಮವಾರ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಅಪೌಷ್ಟಿಕ ಮಕ್ಕಳಿಗೆ 'ಪುಷ್ಟಿ' ಆಹಾರ ಪದಾರ್ಥ ವಿತರಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ ಅವರು ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೆರವಾಗಿದ್ದಾರೆ. ವೇದಿಕೆಯಲ್ಲಿ ಬರಿ ಸ್ಫೂರ್ತಿ ತುಂಬುವ ಮಾತುಗಳನ್ನಾಡದೆ ಕೆಲಸ ಕೂಡ ಮಾಡುತ್ತಿದ್ದಾರೆ. ಅವರ ಮಾರ್ಗ ನಾವು ಅನುಸರಿಸಿದಾಗ ಸಮಾಜ ಸೇವೆ ಸಲ್ಲಿಸಲು ಸಾಧ್ಯ ಎಂದರು.

ADVERTISEMENT

ಮಕ್ಕಳ ಆರೋಗ್ಯ ವೃದ್ಧಿಗೆ ಈ ಯೋಜನೆ ಸಹಕಾರಿಯಾಗಿದೆ. ಜಿಲ್ಲೆಯಾದ್ಯಂತ ಹೆಚ್ಚಿನ ಪ್ರಚಾರ ಕೈಗೊಂಡು, ಎಲ್ಲ ಮಕ್ಕಳಿಗೂ ಇದು ತಲುಪಿಸುವ ಕೆಲಸವಾಗಬೇಕು ಎಂದು ಹೇಳಿದರು.

ಜಪಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳ ಅಪೌಷ್ಟಿಕತೆ ತೊಲಗಿಸಲು 8 ತಿಂಗಳ ಹಿಂದೆ ಕಾರ್ಯಕ್ರಮ ಆರಂಭಿಸಲಾಗಿತ್ತು. ಆರು ತಿಂಗಳು ‘ಪುಷ್ಟಿ‘ ಪೌಷ್ಟಿಕಾಂಶ ಮಕ್ಕಳಿಗೆ ಕೊಟ್ಟರೆ ಅವರು ಅಪೌಷ್ಟಿಕತೆಯಿಂದ ಹೊರಬರುತ್ತಾರೆ. ತಾಲ್ಲೂಕಿನಲ್ಲಿ ಕೆಂಪು ವಲಯದಲ್ಲಿರುವ 71 ಅಪೌಷ್ಟಿಕ ಮಕ್ಕಳಿಗೆ ವಿತರಿಸಲಾಗುತ್ತದೆ. ಮುಂದಿನ ಹಂತದಲ್ಲಿ ಜಿಲ್ಲೆಯ 243 ಮಕ್ಕಳಿಗೂ ವಿತರಿಸಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ ಯಲಿಗಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಜೀರೆ, ರೋಟರಿ ಕ್ಲಬ್‌ ಕಾರ್ಯದರ್ಶಿ ದೀಪಕ್ ಕೊಡಗದ್, ಆಯುಷ್ ವೈದ್ಯ ಮುನಿವಾಸುದೇವರೆಡ್ಡಿ, ದೊಡ್ಡಮನಿ ಪಾಂಡುರಂಗ ಶೆಟ್ಟಿ, ಅಶ್ವಿನ್ ಕೋತಂಬ್ರಿ, ನೀಲಕಂಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.