ADVERTISEMENT

ಬಳ್ಳಾರಿ: ಹಣ ಠೇವಣಿ ಇಟ್ಟರೆ ಮೋತಿ ಬ್ರಿಡ್ಜ್‌!

ಬಳ್ಳಾರಿ ನಗರದ ಬಹುಕಾಲದ ಬೇಡಿಕೆಯ ಕುರಿತು ರೈಲ್ವೆ ಇಲಾಖೆಯ ಉತ್ತರ

ಆರ್. ಹರಿಶಂಕರ್
Published 6 ಡಿಸೆಂಬರ್ 2025, 3:11 IST
Last Updated 6 ಡಿಸೆಂಬರ್ 2025, 3:11 IST
ಬಳ್ಳಾರಿ ನಗರದ ಮೋದಿ (ಎಚ್‌.ಆರ್‌ ಗವಿಯಪ್ಪ) ವೃತ್ತದ ಬಳಿ ಇರುವ ರೈಲ್ವೆ ಸೇತುವೆ.
ಬಳ್ಳಾರಿ ನಗರದ ಮೋದಿ (ಎಚ್‌.ಆರ್‌ ಗವಿಯಪ್ಪ) ವೃತ್ತದ ಬಳಿ ಇರುವ ರೈಲ್ವೆ ಸೇತುವೆ.   

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಪ್ರಮುಖ ರೈಲ್ವೆ ಸೇತುವೆ (ಆರ್‌ಒಬಿ) ಮತ್ತು ಅಂಡರ್‌ಪಾಸ್‌ (ಆರ್‌ಯುಬಿ) ಯೋಜನೆಗಳು ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ.

ಲೆವೆಲ್ ಕ್ರಾಸಿಂಗ್‌ಗಳ ಸುತ್ತ ಸುರಕ್ಷತೆ ಮತ್ತು ಸರಾಗ ಸಂಚಾರಕ್ಕೆ ಅನುವು ಮಾಡಿಕೊಡುವ ಭಾರತೀಯ ರೈಲ್ವೆಯ ಇಲಾಖೆಯ ಪ್ರಯತ್ನದ ಭಾಗವಾಗಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಳ್ಳಾರಿ ಲೋಕಸಭಾ ಸದಸ್ಯ ಇ. ತುಕಾರಾಂ ಅವರಿಗೆ ನೀಡಿರುವ ಲಿಖಿತ ಉತ್ತರದಲ್ಲಿ ರೈಲ್ವೆ ಇಲಾಖೆ ಹೇಳಿದೆ. 

ರಾಷ್ಟ್ರದಾದ್ಯಂತ 2025ರ ನವೆಂಬರ್ ಹೊತ್ತಿಗೆ ₹1.11 ಲಕ್ಷ ಕೋಟಿ ಮೊತ್ತದ 4,689 ಆರ್‌ಒಬಿ/ಆರ್‌ಯುಬಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಲ್ಲಿ ₹3,920 ಕೋಟಿ ಮೌಲ್ಯದ 127 ಯೋಜನೆಗಳು ಕರ್ನಾಟಕದಲ್ಲಿಯೇ ಕೈಗೊಳ್ಳಲಾಗುತ್ತಿದ್ದು, ಈ ಪೈಕಿ ಏಳು ಯೋಜನೆಗಳು ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಜೂರಾಗಿರುವುದಾಗಿ ಸರ್ಕಾರ ಹೇಳಿದೆ. 

ADVERTISEMENT

ಹಣ ಠೇವಣಿ ಇಟ್ಟರೆ ಮೋತಿ ಬ್ರಿಡ್ಜ್‌: ಬಳ್ಳಾರಿ ನಗರದ ಮೋತಿ ವೃತ್ತದಲ್ಲಿರುವ ಸೇತುವೆ ಸಂಖ್ಯೆ 262ಎ/265ಎ ಅಗಲೀಕರಣವು ಬಾಕಿ ಉಳಿದಿರುವ ಪ್ರಮುಖ ಯೋಜನೆಯಾಗಿದೆ. ದೀರ್ಘಕಾಲದ ತೀವ್ರ ಸಂಚಾರ ಅಡಚಣೆಗೆ ಇದು ಕಾರಣವಾಗಿದೆ. ಬಳ್ಳಾರಿ ಮಹಾನಗರ ಪಾಲಿಕೆಯು ಈಗಿರುವ ಆರ್‌ಒಬಿ ಅಗಲೀಕರಣಕ್ಕಾಗಿ ‘ಯೋಜನಾ ಪರಿಕಲ್ಪನೆ’ ಸಲ್ಲಿಸಿದೆ, ಇದನ್ನು ರೈಲ್ವೆ ಈಗಾಗಲೇ ಪರಿಶೀಲಿಸಿದೆ. ರಾಜ್ಯ ಸರ್ಕಾರವು ಯೋಜನೆ ಮತ್ತು ಅಂದಾಜು ಶುಲ್ಕಗಳನ್ನು ಠೇವಣಿ ಇಡಬೇಕು ಎಂದು 2025ರ ಮಾರ್ಚ್‌ನಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರದಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿರುವುದಾಗಿ ಸಚಿವಾಲಯ ತಿಳಿಸಿದೆ. ಹಣ ಠೇವಣಿ ಇಡುವ ವರೆಗೆ ಯೋಜನೆ ಅನುಷ್ಠಾನವಾಗಲಾರದು ಎಂದು ಕೇಂದ್ರ ಖಂಡ ತುಂಡವಾಗಿ ತಿಳಿಸಿದೆ. 

ಗಣಿಗಾರಿಕೆ, ಹಂಪಿಗೆ ಪ್ರವಾಸೋದ್ಯಮ ಮತ್ತು ಅಂತರ-ಜಿಲ್ಲಾ, ರಾಜ್ಯದ ಸಂಚಾರದ ಕಾರಣಕ್ಕೆ ಬಳ್ಳಾರಿಯಲ್ಲಿ ರಸ್ತೆ-ರೈಲು ಸಂಪರ್ಕ ಪ್ರಮುಖ್ಯತೆ ಪಡೆದಿದೆ. ಪ್ರಮುಖ ಜಾಗಗಳಲ್ಲಿ, ಅದರಲ್ಲಿಯೂ ಮೋತಿ ವೃತ್ತದ ಆರ್‌ಒಬಿ ವಿಳಂಬವು ದೈನಂದಿನ ಕಾರ್ಯಚಟುವಟಿಕೆ, ಸರಕು ಸಾಗಣೆ ಮೇಲೆ ತೀವ್ರವಾದ ಪರಿಣಾಮ ಬೀರುತ್ತಿದೆ. 

ಇತರ ಯೋಜನೆಗಳ ಸ್ಥಿತಿಗತಿ 

ತೋರಣಗಲ್ಲು-ರಣಜಿತ್‌ಪುರ ಮಾರ್ಗದಲ್ಲಿ ಡಬ್ಲಿಂಗ್‌ ಯೋಜನೆಯಡಿಯಲ್ಲಿ ಹೊಸ ಆರ್‌ಒಬಿಯನ್ನು ಈಗಾಗಲೇ ಮಂಜೂರು ಮಾಡಲಾಗಿದೆ.

ಪಾಪಿನಾಯಕನಹಳ್ಳಿ–ಬೈಲವದ್ದಿಗೇರಿ ನಡುವಿನ ಕಿ.ಮೀ 159/300-400 ಬಳಿ, ಆರ್‌ಒಬಿ ನಿರ್ಮಿಸಲು ವಿವರವಾದ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. 

ಹಗರಿಬೊಮ್ಮನಹಳ್ಳಿ–ಮರಿಯಮ್ಮನಹಳ್ಳಿ ನಡುವೆ (ಹಗರಿಬೊಮ್ಮನಹಳ್ಳಿಯಲ್ಲಿ) ₹45.24 ಕೋಟಿ ಅಂದಾಜು ವೆಚ್ಚದಲ್ಲಿ ಆರ್‌ಒಬಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಇದಕ್ಕೆ ಸಿದ್ಧತೆಗಳು ಆರಂಭವಾಗಿವೆ. 

ಯಶವಂತನಗರ–ರಾಮಗಡ ನಡುವಿನ ಜಲಮಾರ್ಗ ಸೇತುವೆಯ ಅಗಲೀಕರಣ ಅಗತ್ಯವಿಲ್ಲ ಎಂದು ಕೇಂದ್ರ ತಿಳಿಸಿದೆ. 

ಹೊಸಪೇಟೆ–ವ್ಯಾಸ ಕಾಲೋನಿ ನಡುವಿನ ಪ್ರಸ್ತಾವಿತ ಆರ್‌ಒಬಿ/ ಆರ್‌ಯುಬಿಗಾಗಿ ತಾಂತ್ರಿಕ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗುತ್ತಿದೆ.

ಹೊಸಪೇಟೆ–ವ್ಯಾಸ ಕಾಲೋನಿ ನಡುವಿನ  5 ಕಿ.ಮೀ 1/900-2/00 ಬಳಿ ಆರ್‌ಒಬಿ ನಿರ್ಮಿಸಲು ತಾಂತ್ರಿಕ ಕಾರ್ಯಸಾಧ್ಯತಾ ವರದಿ ಪೂರ್ಣಗೊಂಡಿದೆ. ಇದರ ನಿರ್ಮಾಣ ಸಕಾರಾತ್ಮಕವಾಗಿದ್ದು ರಾಜ್ಯ ಸರ್ಕಾರದೊಂದಿಗೆ ಜಂಟಿ ಪರಿಶೀಲನೆ ನಡೆಯುತ್ತಿದೆ.

ಮೋತಿ ವೃತ್ತದ ಆರ್‌ಒಬಿ ಅಗಲೀಕರಣ ಅತ್ಯಗತ್ಯ. ಇದರ ಬಗ್ಗೆ ರೈಲ್ವೆ ಹೋರಾಟಗಾರರು ಹಲವುಬಾರಿ ಮನವಿ ಮಾಡಿದ್ದೇವೆ. ಸರ್ಕಾರ ಅಗತ್ಯವಿರುವ ಹಣ ಠೇವಣಿ ಇಟ್ಟು ಆದಷ್ಟು ಬೇಗ ಸೇತುವೆ ನಿರ್ಮಿಸಲು ಮುಂದಡಿ ಇಡಬೇಕು. 
– ಮಹೇಶ್ವರ ಸ್ವಾಮಿ, ಮುಖಂಡರು, ರೈಲ್ವೆ ಕ್ರಿಯಾ ಸಮಿತಿ, ಬಳ್ಳಾರಿ 
ಈ ಬಗ್ಗೆ ನಾನು ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದೊಂದಿಗೆ ಮಾತನಾಡಿದ್ದೇನೆ. ಕೆಎಂಇಆರ್‌ಸಿ ಅನುದಾನದಲ್ಲಿ ಹಣ ಠೇವಣಿ ಇಡಲು ನಿರ್ಧರಿಸಲಾಗಿದೆ. ಶೀಘ್ರವೇ ಮೋತಿ ರೈಲ್ವೆ ಸೇತುವೆ ವಿಸ್ತರಣೆಯಾಗಲಿದೆ. 
ಇ. ತುಕಾರಾಂ, ಬಳ್ಳಾರಿ–ವಿಜಯನಗರ ಸಂಸದ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.