
ಕಂಪ್ಲಿ: ‘ತಾಲ್ಲೂಕಿನ ದೇವಸಮುದ್ರ ಕ್ರಾಸ್‍ನಲ್ಲಿ ಆರಂಭಗೊಂಡಿರುವ ಶ್ರೀಕಲ್ಯಾಣಚೌಕಿಮಠ ಕಾಮಧೇನು ಗೋಶಾಲಾ ಅಭಿವೃದ್ಧಿಗೆ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‍ಆರ್) ಬಳಸಿಕೊಳ್ಳಲು ಪ್ರಯತ್ನಿಸಲಾಗುವುದು’ ಎಂದು ಸಂಸದ ಈ. ತುಕಾರಾಂ ತಿಳಿಸಿದರು.
ತಾಲ್ಲೂಕಿನ ದೇವಸಮುದ್ರ ಕ್ರಾಸ್‍ನಲ್ಲಿ ಶ್ರೀಕಲ್ಯಾಣಚೌಕಿಮಠ ಕಾಮಧೇನು ಗೋಶಾಲಾ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಗೋಶಾಲೆ, ಕಲ್ಯಾಣ ಕೃಷಿ ಆಶ್ರಮ, ಗುರುಕುಲ ಶಿಕ್ಷಣ ಉದ್ಘಾಟನಾ ಕಾರ್ಯಕ್ರಮ ಪ್ರಯುಕ್ತ ಭಾನುವಾರ ನಡೆದ ಇಷ್ಟಾರ್ಥ ಸಿದ್ಧಿ ಹೋಮ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಗಂಗಾವತಿ– ಕಂಪ್ಲಿ– ದರೋಜಿ ರೈಲು ಮಾರ್ಗ ಕಾಮಗಾರಿ ಆರಂಭಕ್ಕೆ ಅನುದಾನ ಪಡೆಯಲಾಗುವುದು. ಅಖಂಡ ಬಳ್ಳಾರಿ ಜಿಲ್ಲೆಗೆ ₹2,372 ಕೋಟಿ ವೆಚ್ಚದಲ್ಲಿ ಎರಡು ರೈಲು ಮಾರ್ಗ ನಿರ್ಮಾಣಗೊಳ್ಳಲಿವೆ. ತೋರಣಗಲ್ಲು, ಪಾಪಿನಾಯಕನಹಳ್ಳಿ, ಕುಡಿತಿನಿ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಸಂಸದರ ಅನುದಾನದಡಿ ಕಂಪ್ಲಿ ಸೇರಿ ಎಂಟು ಕ್ಷೇತ್ರಗಳಿಗೆ ತಲಾ ₹80 ಲಕ್ಷ ಮಂಜೂರು ಮಾಡಲಾಗಿದೆ’ ಎಂದು ವಿವರಿಸಿದರು.
ಲೋಕಾಯುಕ್ತ ದಾಳಿಗೆ ಸಿಲುಕಿದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಪ್ರಕರಣ ಕಾನೂನು ಪ್ರಕಾರ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡರು.
ನಂದೀಪುರ ಮಹೇಶ್ವರಸ್ವಾಮೀಜಿ, ಅಜಾತ ಶಂಭುಲಿಂಗಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಗೋಶಾಲೆ ಸಂಸ್ಥಾಪಕ ಕೆ.ಎಂ. ಬಸವರಾಜಶಾಸ್ತ್ರಿ, ಪ್ರಮುಖರಾದ ಪಿ. ಮೂಕಯ್ಯಸ್ವಾಮಿ, ಎಂ.ಸುಧೀರ್, ಹೊನ್ನಳ್ಳಿ ಗಂಗಾಧರ, ಎಚ್.ಹನುಮಂತಪ್ಪ, ಕೆ. ಬಸವರಾಜ, ಅಕ್ಕಿ ಜಿಲಾನ್, ಬಿ. ನಾರಾಯಣಪ್ಪ ಇದ್ದರು.
ಸಾವಯುವ ಕೃಷಿ ಮತ್ತು ರೈತರಿಗಾಗಿ ನಡೆದ ಚರ್ಚಾಗೋಷ್ಠಿಯಲ್ಲಿ ಕೃಷಿ ಕೀಟ ಶಾಸ್ತ್ರ ವಿಭಾಗದ ಪಿ.ಆರ್. ಬದರಿಪ್ರಸಾದ್, ಸಾವಯವ ಕೃಷಿಕರಾದ ಬಸಯ್ಯ ಹಿರೇಮಠ, ಎಸ್.ವಿ. ಸಜ್ಜನ್, ಬಿ.ಎಂ. ವೀರಪ್ಪಯ್ಯ, ಕೆ. ತಿಮ್ಮಣ್ಣ ಪಡಿಯಪ್ಪ ಉಳಸದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.