ADVERTISEMENT

ಆಸ್ತಿ ವಿಷಯಕ್ಕೆ ಅಣ್ಣನ ಕೊಲೆತಮ್ಮನಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 13:01 IST
Last Updated 5 ಏಪ್ರಿಲ್ 2022, 13:01 IST

ಹೊಸಪೇಟೆ (ವಿಜಯನಗರ): ಆಸ್ತಿ ವಿಚಾರವಾಗಿ ಅಣ್ಣನ ಕೊಲೆ ಮಾಡಿರುವುದು ಸಾಬೀತಾಗಿರುವುದರಿಂದ ಕೊಟ್ಟೂರು ತಾಲ್ಲೂಕಿನ ಕೋಗಳಿ ಗ್ರಾಮದ ಸಿದ್ದನಗೌಡ ಎಂಬುವರಿಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶುಭವೀರ್‌ ಜೈನ್‌ ಬಿ. ಅವರು ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.

₹1 ಲಕ್ಷ ದಂಡ, ದಂಡ ಕಟ್ಟಲಾಗದಿದ್ದಲ್ಲಿ ಮೂರು ವರ್ಷ ಸಾದಾ ಶಿಕ್ಷೆ, ಮೃತ ಬಸವನಗೌಡ ಅವರ ಪತ್ನಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ₹4 ಲಕ್ಷ ಪರಿಹಾರ ನೀಡಬೇಕೆಂದು ಸೂಚಿಸಿದ್ದಾರೆ.

ಸಿದ್ದನಗೌಡ ಹಾಗೂ ಆರ್‌. ಬಸವನಗೌಡ ಅವರ ತಂದೆ ಕೆಂಚನಗೌಡ ತೀರಿಕೊಂಡ ನಂತರ ಇಬ್ಬರೂ ಸಹೋದರರ ನಡುವೆ ಆಸ್ತಿ ಹಂಚಿಕೆ ಸಂಬಂಧ ಜಗಳವಾಗಿದೆ. 2016ನೇ ಇಸ್ವಿ ಏಪ್ರಿಲ್‌ 28ರಂದು ಸಂಜೆ 7.30ರ ಸುಮಾರಿಗೆ ಬಸವನಗೌಡ ತನ್ನ ಮನೆಯ ಅಂಗಳದಲ್ಲಿ ನಿಂತಿದ್ದಾಗ, ಸಿದ್ದನಗೌಡ ಹಿಂದಿನಿಂದ ಬಂದು ಜಾಲಿ ಕಟ್ಟಿಗೆಯಿಂದ ಕಿವಿಯ ಎಡಭಾಗಕ್ಕೆ ಬಲವಾಗಿ ಹೊಡೆದಿದ್ದರು. ಬಳಿಕ ಬಸವನಗೌಡ ಕಲ್ಲುಗಳು ಮೇಲೆ ಬಿದ್ದು, ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಟಿ. ಅಂಬಣ್ಣ ನ್ಯಾಯಾಲಯದಲ್ಲಿ ವಾದ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.