ADVERTISEMENT

ಹೂವಿನಹಡಗಲಿ: ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವ ಇಂದು

ಸ್ವಾಮಿಯ ಭವಿಷ್ಯವಾಣಿ ಆಲಿಸಲು ವಿವಿಧೆಡೆಯಿಂದ ಸುಕ್ಷೇತ್ರಕ್ಕೆ ಭಕ್ತರ ಆಗಮನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 6:46 IST
Last Updated 14 ಫೆಬ್ರುವರಿ 2025, 6:46 IST
ಮೈಲಾರಲಿಂಗೇಶ್ವರ ಸ್ವಾಮಿ
ಮೈಲಾರಲಿಂಗೇಶ್ವರ ಸ್ವಾಮಿ   

ಹೂವಿನಹಡಗಲಿ: ತುಂಗಭದ್ರೆಯ ತಟದಲ್ಲಿರುವ ಐತಿಹಾಸಿಕ ಸುಪ್ರಸಿದ್ಧ ಮೈಲಾರ ಸುಕ್ಷೇತ್ರದಲ್ಲಿ ಶುಕ್ರವಾರ ಸಂಜೆ 5.30ಕ್ಕೆ ಮೈಲಾರಲಿಂಗೇಶ್ವರ ಸ್ವಾಮಿ ಕಾರಣಿಕ ಮಹೋತ್ಸವ ಜರುಗಲಿದೆ. ಸ್ವಾಮಿಯ ಭವಿಷ್ಯವಾಣಿ ಆಲಿಸಲು ನಾಡಿನ ನಾನಾ ಭಾಗಗಳಿಂದ ಭಕ್ತರ ದಂಡೇ ಸುಕ್ಷೇತ್ರಕ್ಕೆ ಹರಿದು ಬರುತ್ತಿದೆ.

ಮೈಲಾರ ಜಾತ್ರಾ ಮೈದಾನದಲ್ಲಿ ಗ್ರಾಮೀಣ ಸೊಗಡು ಮೇಳೈಸಿದೆ. ರೈತರು ತಮ್ಮ ಪರಿವಾರದೊಂದಿಗೆ ಎತ್ತಿನ ಬಂಡಿ, ಟ್ರ್ಯಾಕ್ಟರ್, ಟಂಟಂ ವಾಹನಗಳಲ್ಲಿ ಬಂದು ಸುಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಯಲಲ್ಲೇ ಅಡುಗೆ ತಯಾರಿಸಿ, ಗೊರವ ಸಮೂಹಕ್ಕೆ ಅನ್ನಪ್ರಸಾದ ನೈವೇದ್ಯವನ್ನು ದೋಣಿ ತುಂಬಿಸುವ ಸೇವೆಯನ್ನು ಶ್ರದ್ದಾಭಕ್ತಿಯಿಂದ ನಡೆಸುತ್ತಿದ್ದಾರೆ. ಕಾರಣಿಕ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವಂತೆ ಸುಕ್ಷೇತ್ರದೆಲ್ಲೆಡೆ ಏಳು ಕೋಟಿ ಏಳು ಕೋಟಿ ಚಾಂಗ್ ಬಲೋ… ಎಂಬ ಉದ್ಘೋಷ ಮಾರ್ದನಿಸುತ್ತಿದೆ.

ಸಕಲ ಸಿದ್ಧತೆ : ಪುರಾಣ ಪ್ರಸಿದ್ಧ ಡೆಂಕನಮರಡಿಯಲ್ಲಿ ಕಾರಣಿಕ ಮಹೋತ್ಸವಕ್ಕಾಗಿ 150 ಅಡಿ ಸುತ್ತಳತೆಯ ವೃತ್ತಾಕಾರದ ಮೈದಾನ ಸಿದ್ಧಪಡಿಸಿ, ಭದ್ರತೆಗಾಗಿ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಕಾರಣಿಕದ ನುಡಿ ಸ್ಪಷ್ಟವಾಗಿ ಕೇಳಿಸುವಂತೆ ಸೂಕ್ಷ್ಮ ತಂತ್ರಜ್ಞಾನ ಆಧಾರಿತ ಧ್ವನಿ ಮುದ್ರಿಕೆ, ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.

ADVERTISEMENT

ಪೌರಾಣಿಕ ಹಿನ್ನೆಲೆ:

ಮೈಲಾರ ಕಾರಣಿಕ ಮಹೋತ್ಸವಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಹಿಂದೆ ಭೂಲೋಕದಲ್ಲಿ ರಾಕ್ಷಸರ ಉಪಟಳ ಹೆಚ್ಚಾದಾಗ ಸಾಕ್ಷತ್ ಶಿವ ಮೈಲಾರಲಿಂಗನ ಅವತಾರವೆತ್ತಿ ಇಲ್ಲಿನ ಡೆಂಕನ ಮರಡಿಯಲ್ಲಿ ರಾಕ್ಷಸರ ಮರ್ದನ ಮಾಡಿದ್ದನೆಂಬ ಪ್ರತೀತಿ ಇದೆ. ಅದರ ವಿಜಯೋತ್ಸವದ ಸಂಕೇತವಾಗಿ ಪ್ರತೀ ವರ್ಷ ಕಾರಣಿಕ ಮಹೋತ್ಸವ ಆಚರಿಸಲಾಗುತ್ತಿದೆ ಎಂದು ಹಿರಿಯರು ಹೇಳುತ್ತಾರೆ. ಗೂಡಾರ್ಥದಿಂದ ಕೂಡಿದ ಸ್ವಾಮಿಯ ನುಡಿಯು ಆಯಾ ವರ್ಷದ ಭವಿಷ್ಯವಾಣಿ ಆಗಿರಲಿದೆ ಎಂಬುದು ಭಕ್ತರ ನಂಬಿಕೆ.

ಜಾತ್ಯತೀತ ದೈವ:

ಮೈಲಾರಲಿಂಗ ಸ್ವಾಮಿಯನ್ನು ಹಿಂದುಳಿದ ಸಮುದಾಯಗಳು ಸೇರಿದಂತೆ ವೀರಶೈವರು, ಬ್ರಾಹ್ಮಣರು ಮನೆದೇವರಾಗಿ ಪೂಜಿಸುತ್ತಾರೆ. ಮುಸ್ಲಿಮರು, ಲಂಬಾಣಿಗರು ಸ್ವಾಮಿಯ ಭಕ್ತರಾಗಿರುವುದರಿಂದ ಮೈಲಾರಲಿಂಗ ಸ್ವಾಮಿಯನ್ನು ‘ಜಾತ್ಯತೀತ ದೈವ’ ಎಂದೂ ಕರೆಯುತ್ತಾರೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿಯೂ ಸ್ವಾಮಿಯ ಭಕ್ತರಿದ್ದಾರೆ.

ರಾಜ್ಯದ ಅನೇಕ ಕಡೆ ಮೈಲಾರಲಿಂಗೇಶ್ವರ ದೇವಾಲಯಗಳಿದ್ದರೂ ಮೈಲಾರ ಸುಕ್ಷೇತ್ರವೇ ಸ್ವಾಮಿಯ ಮೂಲ ನೆಲೆಯಾಗಿದೆ. ಕೋರಿ ಅಂಗಿ, ಕುಂಚಿಗೆ ಧರಿಸಿ, ಕೈಯಲ್ಲಿ ಡಮರುಗ ಭಂಡಾರದ ಬಟ್ಟಲು ಹಿಡಿದು ಧಾರ್ಮಿಕ ನೆಲೆಗಳನ್ನು ಹೊತ್ತು ತಿರುಗುವ ಗೊರವ ಪರಿವಾರ ಮೈಲಾರ ಜಾತ್ರೆಯ ಪ್ರಮುಖ ಆಕರ್ಷಣೆ. ಗೊರವ ಪರಿವಾರ ಇಲ್ಲದೇ ಧಾರ್ಮಿಕ ಆಚರಣೆಗಳು ಪೂರ್ಣಗೊಳ್ಳುವುದಿಲ್ಲ.

ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಭಕ್ತರು ಕುದುರೆಕಾರ ಸೇವೆ ಮೂಲಕ ಹರಕೆ ತೀರಿಸಿದರು
ಭಂಡಾರ ಪ್ರಿಯ ಮೈಲಾರಲಿಂಗ
ಏಳುಕೋಟಿ ಭಕ್ತರ ಆರಾಧ್ಯ ದೈವ ಮೈಲಾರಲಿಂಗಸ್ವಾಮಿ ಭಂಡಾರ ಪ್ರಿಯ. ಹಾಗಾಗಿ ಮೈಲಾರ ಸುಕ್ಷೇತ್ರದಲ್ಲಿ ಭಂಡಾರವೇ ಪ್ರಧಾನವಾಗಿದೆ. ಸ್ವಾಮಿಗೆ ಭಕ್ತರು ಹಣ್ಣು ಕಾಯಿ ಹೂ ಜತೆಗೆ ಭಂಡಾರದ ಅರ್ಚನೆ ನೆರವೇರಿಸಿ ಭಕ್ತಿಭಾವ ಮೆರೆಯುತ್ತಾರೆ. ಈ ನೆಲ ಸ್ಪರ್ಶಿಸುವ ಭಕ್ತರೆಲ್ಲ ಹಣೆಗೆ ಭಂಡಾರ ಧರಿಸಿ ಮನದಲ್ಲಿ ಸ್ವಾಮಿ ನೆನೆಯುತ್ತಾರೆ. ನಾನಾ ಬಗೆಯ ಹರಕೆ : ಹರಕೆ ಹೊತ್ತ ಭಕ್ತರು ದೇವಸ್ಥಾನ ಮುಂಭಾಗದಲ್ಲಿ ಮತ್ತು ಕಾರಣಿಕದ ಸ್ಥಳದಲ್ಲಿ ಸ್ವಾಮಿಯನ್ನು ಮನದಲ್ಲಿ ನೆನೆಯುತ್ತಾ ಚಡಿ ಏಟಿನಿಂದ ತಮ್ಮನ್ನು ತಾವು ಹೊಡೆದುಕೊಂಡು ದೇಹ ದಂಡಿಸಿಕೊಳ್ಳುವ ಮೂಲಕ ಸ್ವಾಮಿಗೆ ಹರಕೆ ತೀರಿಸುತ್ತಾರೆ. ಇಷ್ಟಾರ್ಥಿ ಸಿದ್ದಿಗಾಗಿ ಪ್ರಾರ್ಥಿಸಿ ದೀವಟಿಗೆ  ಉರಿಸಿ ಭಕ್ತರು ಹರಕೆ ತೀರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.