ADVERTISEMENT

ತೆಕ್ಕಲಕೋಟೆ | ನಡವಿ ಗ್ರಾಮ: ನಿವೇಶನ ಹಂಚಿಕೆ ಮರೀಚಿಕೆ, ಹುಸಿಯಾದ ಡಿಸಿ ಭರವಸೆ

ದಶಕ ಕಳೆದರೂ ಪ್ರವಾಹ ಸಂತ್ರಸ್ತರಿಗೆ ದೊರಕದ ಹಕ್ಕುಪತ್ರ

ಪ್ರಜಾವಾಣಿ ವಿಶೇಷ
Published 28 ಜುಲೈ 2025, 4:46 IST
Last Updated 28 ಜುಲೈ 2025, 4:46 IST
ನಡವಿ ಗ್ರಾಮಸ್ಥರು ಈಚೆಗೆ ನಡವಿ ನವಗ್ರಾಮದ ನೆರೆ ಸಂತ್ರಸ್ತರಿಗೆ ನಿನೇಶನ 'ಹಕ್ಕುಪತ್ರ' ನೀಡುವಂತೆ ಸಿರುಗುಪ್ಪ ತಹಶೀಲ್ದಾರ್ ಗೌಸಿಯಾಬೇಗಂ ಅವರಿಗೆ ಮನವಿ ಸಲ್ಲಿಸಿದರು
ನಡವಿ ಗ್ರಾಮಸ್ಥರು ಈಚೆಗೆ ನಡವಿ ನವಗ್ರಾಮದ ನೆರೆ ಸಂತ್ರಸ್ತರಿಗೆ ನಿನೇಶನ 'ಹಕ್ಕುಪತ್ರ' ನೀಡುವಂತೆ ಸಿರುಗುಪ್ಪ ತಹಶೀಲ್ದಾರ್ ಗೌಸಿಯಾಬೇಗಂ ಅವರಿಗೆ ಮನವಿ ಸಲ್ಲಿಸಿದರು   

ತೆಕ್ಕಲಕೋಟೆ: ನಡವಿ ಗ್ರಾಮದಲ್ಲಿ ದಶಕದಿಂದ ನೆನೆಗುದಿಗೆ ಬಿದ್ದಿದ್ದ ನವಗ್ರಾಮದ ನಿವೇಶನ ಹಾಗೂ ಮನೆ ಹಂಚಿಕೆಗೆ ಸರ್ವೇಕಾರ್ಯ ಮುಕ್ತಾಯಗೊಂಡು ವರ್ಷಗಳೇ ಉರುಳಿದರೂ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮರೀಚಿಕೆ ಎಂಬಂತಾಗಿದೆ. ಇದರಿಂದ ಗ್ರಾಮಸ್ಥರು ಇತ್ತ ಹೊಳೆದಂಡೆಯ ಮನೆಗಳಲ್ಲಿ ವಾಸಿಸಲೂ ಆಗದೆ ಅತ್ತ ನವಗ್ರಾಮಕ್ಕೆ ತೆರಳಲೂ ಆಗದೆ ಪರದಾಡುವಂತಾಗಿದೆ.

2009ರ ಪ್ರವಾಹದಿಂದಾಗಿ ಮನೆ ಕಳೆದು ಕೊಂಡವರಿಗೆ ನವಗ್ರಾಮದಲ್ಲಿ 374 ನಿವೇಶನ ಮಂಜೂರಾಗಿ, ಅದರಲ್ಲಿ 168 ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗಿತ್ತು. ಉಳಿದವರಿಗೆ ನಿವೇಶನ ಅಥವಾ ಮನೆ ಹಂಚಿಕೆ ಕಾರ್ಯ ನಡೆದಿರಲಿಲ್ಲ.

2023ರ ನವೆಂಬರ್ 20 ರಂದು ಗ್ರಾಮದಲ್ಲಿ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ’ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಆಗಿನ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ 2023 ಫೆ.20ರ ಒಳಗಾಗಿ ನಿವೇಶನ ಹಾಗೂ ಮನೆ ಹಂಚಿಕೆಗೆ ಅರ್ಹರ ಆಯ್ಕೆ ಪೂರ್ಣಗೊಳಿಸಿ ಅಂದೇ ಹಕ್ಕುಪತ್ರ ವಿತರಿಸುವುದಾಗಿ ಘೋಷಿಸಿದ್ದರೂ ಈ ವರೆಗೆ ಹಕ್ಕುಪತ್ರ ದೊರೆತಿಲ್ಲ.

ADVERTISEMENT

ಆರಂಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಹೇಮಂತ್, ಪ್ರೊಬೇಷನರಿ ಜಿಲ್ಲಾಧಿಕಾರಿ ರುಪೇಂದ್ರಕೌರ್ ನೇತೃತ್ವದಲ್ಲಿ ವಿಶೇಷ ಗ್ರಾಮಸಭೆ ಆಯೋಜಿಸಿ ನಿವೇಶನ ಹಂಚಿಕೆಗೆ ಸಂಬoಧಿಸಿದಂತೆ ಫಲಾನುಭವಿಗಳ ಆಯ್ಕೆಗಾಗಿ ಅಹವಾಲು ಸ್ವೀಕಾರ ಹಾಗೂ ವೈಯುಕ್ತಿಕವಾಗಿ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಆಯೋಜಿಸಿ 211 ಆರ್ಹರನ್ನು ಆಯ್ಕೆ ಮಾಡಲಾಯಿತು. ಇದರಿಂದ ನಿವೇಶನ ಹಾಗೂ ಮನೆಯ ಹಕ್ಕುಪತ್ರ ಪಡೆಯುವ ಗ್ರಾಮಸ್ಥರ ಆಸೆ ಚಿಗುರೊಡೆದಿತ್ತು.

ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಮಿತಿ ನೀಡಿದ್ದ ವರದಿ ಕಾರ್ಯರೂಪಕ್ಕೆ ಬಾರದೇ ಇಂದಿಗೂ ಗ್ರಾಮಸ್ಥರು ಹಕ್ಕುಪತ್ರಗಳಿಗೆ ಕಾಯುವಂತಾಗಿದೆ. ಅಲ್ಲದೆ ಈಗಿನ ಜಿಲ್ಲಾಧಿಕಾರಿಗಳು ಶೀಘ್ರವೇ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜುಲೈ 7ರಂದು ಗ್ರಾಮಸ್ಥರು ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಪಟ್ಟಭದ್ರರು ನಿವೇಶನಗಳನ್ನು ಒತ್ತುವರಿ ಮಾಡುತ್ತಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ವಿನಂತಿಸಿದ್ದರು.

ಅತಂತ್ರ ಸ್ಥಿತಿ 

2023ರಲ್ಲಿ ನಡೆದ ಸರ್ವೆ ಕಾರ್ಯದಲ್ಲಿ ಒಟ್ಟು 36.49 ಎಕರೆ ಸರ್ಕಾರಿ ಜಮೀನು ಗುರುತಿಸಿ 558 ಮನೆಗಳ ಹಂಚಿಕೆಗೆ ನಿಗದಿಪಡಿಸಲಾಯಿತು. ಈ ಮುಂಚೆಯೇ 168 ಮನೆ ನಿರ್ಮಿಸಿ ಹಂಚಿಕೆ ಮಾಡಲಾಗಿದ್ದು ಉಳಿದ 390 ನಿವೇಶನ ಗಳಿಗೆ ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರ ನೀಡಲು ಅಂತಿಮ ಸಿದ್ಧತೆಯೂ ಆಗಿತ್ತು. ಆದರೆ ಈ ವರೆಗೆ ಯಾವುದೇ ಹಕ್ಕುಪತ್ರ ಹಂಚಿಕೆ ಆಗದೆ ಇರುವುದರಿಂದ ಫಲಾನುಭವಿಗಳು ಇತ್ತ ನೆರೆ ಪೀಡಿತ ಮನೆಗಳಲ್ಲಿ ವಾಸಿಸಲು ಆಗದೇ ಅತ್ತ ನಿವೇಶನದ ಹಕ್ಕುಪತ್ರ ದೊರೆಯದೆ ಅತಂತ್ರ ಸ್ಥಿತಿಯಲ್ಲಿದ್ದಾರೆ

ನಡವಿ ಗ್ರಾಮಸ್ಥರು ನವಗ್ರಾಮದ ನೆರೆ ಸಂತ್ರಸ್ತರಿಗೆ ನಿನೇಶನ
ನಿವೇಶನ ಹಂಚಿಕೆ ಆಗದೆ ಇರುವುದರಿಂದ ಕೆಲವರು ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ. ಆದ್ದರಿಂದ ಶೀಘ್ರವಾಗಿ ಮೊದಲಿನ ಸರ್ವೇ ಪ್ರಕಾರ ಹಂಚಿಕೆ ಮಾಡಬೇಕು
–ಪಕ್ಕೀರಪ್ಪ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ
ಈಗಾಗಲೇ 163 ಮನೆಗಳಿಗೆ ಹಕ್ಕುಪತ್ರ ನೀಡಲಾಗಿದ್ದರು ಗ್ರಾಮ ಪಂಚಾಯಿತಿಯ ಡಿಮ್ಯಾಂಡ್ ನೋಟಿಸ್‌ನಲ್ಲಿ ಸೇರಿಸಿಲ್ಲ ಎಂದು ಹೇಳಿ ಸರ್ಕಾರದ ಯಾವುದೇ ಯೋಜನೆಗೆ ಪರಿಗಣಿಸುತ್ತಿಲ್ಲ.
–ಬಿ ವೆಂಕಟೇಶ ಗ್ರಾಮ ಪಂಚಾಯಿತಿ ಸದಸ್ಯ
ಬಡವರು ಅದರಲ್ಲೂ ಹೆಚ್ಚಾಗಿ ಪರಿಶಿಷ್ಟ ಜಾತಿಯವರಿಗೆ ಹಕ್ಕುಪತ್ರ ನೀಡುವಲ್ಲಿ ಅಧಿಕಾರಿಗಳು ಬೇಕೆಂದೇ ವಿಳಂಬ ಮಾಡುತ್ತಿದ್ದಾರೆ
–ಶರಣ ಗ್ರಾಮಸ್ಥ
ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಅನುಮೋದನೆ ದೊರೆತ ಬಳಿಕ ನೆರೆ ಸಂತ್ರಸ್ತ ಫಲಾನುಭವಗಳಿಗೆ ಹಕ್ಕುಪತ್ರ ನೀಡಲಾಗುವುದು
–ಗೌಸಿಯಾಬೇಗಂ ತಹಶೀಲ್ದಾರ್ ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.