ADVERTISEMENT

ಬಹುಮುಖ ಪ್ರತಿಭೆ ನಾಗಲಾಪುರದ ಶಿವನಾಗಪ್ಪ

ಕಲಿಯುವ ಮನಸ್ಸಿದ್ದರೆ ಎಲ್ಲವೂ ಸಾಧ್ಯ ಎನ್ನುತ್ತಾರೆ ಪ್ರತಿಭಾನ್ವಿತ ಕಲಾವಿದ

ಎಚ್.ಎಸ್.ಶ್ರೀಹರಪ್ರಸಾದ್
Published 5 ಜನವರಿ 2019, 20:15 IST
Last Updated 5 ಜನವರಿ 2019, 20:15 IST
ತಂಬೂರಿ ತಯಾರಿಯಲ್ಲಿ ತೊಡಗಿಸಿಕೊಂಡಿರುವ ಶಿವನಾಗಪ್ಪ
ತಂಬೂರಿ ತಯಾರಿಯಲ್ಲಿ ತೊಡಗಿಸಿಕೊಂಡಿರುವ ಶಿವನಾಗಪ್ಪ   

ಮರಿಯಮ್ಮನಹಳ್ಳಿ ಸಮೀಪದ ಜಿ.ನಾಗಲಾಪುರ ಗ್ರಾಮದ ಎಂ.ಜಿ.ಶಿವನಾಗಪ್ಪ ಅವರು ವೃತ್ತಿಯಲ್ಲಿ ದರ್ಜಿ (ಟೈಲರಿಂಗ್‌) ಯಾದರೂ ಬಹುಮುಖ ಪ್ರತಿಭೆಯ ಕಲಾವಿದರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಶಿವನಾಗಪ್ಪ ಅವರ ಮೂಲ ವೃತ್ತಿಯ ಜೊತೆಗೆ ಹಲವಾರು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವೀರಗಾಸೆ ಕುಣಿತದಲ್ಲಿ ತಮ್ಮದೇ ಆದ ಹೆಸರು ಮಾಡಿರುವ ಅವರು ಕುದುರೆ ಕುಣಿತ, ಗೊಂಬೆಗಳ ಕುಣಿತ, ನಂದಿಕೋಲು, ಸಮಾಳ ನುಡಿಸುವುದರ ಜೊತೆಗೆ ಪುರಾಣ ಕಾರ್ಯಕ್ರಮಗಳಲ್ಲಿ ವಚನ ಗಾಯಕರಾಗಿಯೂ ಗಮನ ಸೆಳೆದಿದ್ದಾರೆ.

ಹಾರ್ಮೋನಿಯಂ, ತಂಬೂರಿ, ದಿಂಬಡಿ ವಾದ್ಯ ನುಡಿಸುವುದರೊಂದಿಗೆ ಸ್ವತಃ ಕೆಲ ಸಂಗೀತ ಪರಿಕರಗಳು ತಯಾರು ಮಾಡುವುದನ್ನು ಕಲಿತು, ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. 65ರ ಇಳಿ ವಯಸ್ಸಿನಲ್ಲಿಯೂ ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ಪೌರಾಣಿಕ ನಾಟಕಗಳಿಗೆ ಬೇಕಾದ ವೇಷಭೂಷಣಗಳಾದ ಕಿರೀಟ, ಬಿಲ್ಲು, ಬಾಣ, ಪೋಷಾಕುಗಳು, ಗದೆ ಸೇರಿದಂತೆ ಇತರೆ ಪರಿಕರಗಳನ್ನು ಸ್ವತಃ ತಾವೇ ತಯಾರಿಸಿ, ನಾಟಕಗಳಿಗೆ ಒದಗಿಸುತ್ತಾರೆ. ತಂಬೂರಿ, ನಾದಸ್ವರ, ಕೃಷ್ಣನ ಕೊಳಲು, ಬಾನ್ಸುರಿ ಕೊಳಲು, ಶಹನಾಯಿ, ದಿಂಬಡಿ, ಚೌಡಕಿ ಪರಿಕರಗಳನ್ನು ತಯಾರಿಸುವಲ್ಲಿ ನಿಸ್ಸೀಮರು. ಕುದುರೆ ಕುಣಿತ, ದೊಡ್ಡ ಗೊಂಬೆಗಳ ಕುಣಿತಕ್ಕೆ ಬೇಕಾದ ಗೊಂಬೆಗಳನ್ನು ಸ್ವತಃ ತಾವೇ ತಯಾರಿಸುತ್ತಾರೆ.

ವರ್ಷಕ್ಕೆ ನಾಲ್ಕೈದು ಶಹನಾಯಿ, ನಾದಸ್ವರ ಸಂಗೀತ ಪರಿಕರ ಮಾರಾಟ ಮಾಡುತ್ತಾ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ತಾವೇ ಹುಟ್ಟು ಹಾಕಿದ ಶ್ರೀವೀರಭದ್ರೇಶ್ವರ ಸಂಘದ ಮೂಲಕ ಹಂಪಿ ಉತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮ, ವಾರ್ತ ಮತ್ತು ಪ್ರಸಾರ ಇಲಾಖೆ ಕಾರ್ಯಕ್ರಮಗಳಲ್ಲಿ ವೀರಗಾಸೆ ಕುಣಿತ, ಕುದುರೆ ಕುಣಿತ, ಗೊಂಬೆಗಳ ಕುಣಿತದಲ್ಲಿ ಭಾಗವಹಿಸಿ ಬಹುಮುಖ ಪ್ರತಿಭೆಯ ಕಲಾವಿದ ಎನಿಸಿಕೊಂಡಿದ್ದಾರೆ.

ಸಂಘದ ವತಿಯಿಂದ ಗ್ರಾಮದ ಯುವಕರಿಗೆ ನಾಟಕದ ಅಭಿನಯ, ಸಮಾಳ ನುಡಿಸುವುದು, ವೀರಗಾಸೆ, ನಂದಿಕೋಲು ಕುಣಿತ, ಒಡಪುಗಳನ್ನು ಹೇಳುವುದು, ಭಜನೆ ಪದಗಳನ್ನು ಹೇಳಿ ಕೊಡುತ್ತಾ ಸೈ ಎನಿಸಿಕೊಂಡಿದ್ದಾರೆ. ಆದರೆ ಕೆಲ ಸಂಘ ಸಂಸ್ಥೆಗಳು ಸನ್ಮಾನಿಸಿದ್ದನ್ನು ಬಿಟ್ಟರೇ ಅವರನ್ನು ಗುರುತಿಸುವಂತಹ ಕೆಲಸವಾಗಿಲ್ಲ.

‘ನೋಡ್ರಿ ನಮ್ಮದು ಮೂಲ ವೃತ್ತಿ ಟೈಲರಿಂಗ್, ಆದರೆ ಗ್ರಾಮಗಳಲ್ಲಿ ಆಗ ನಡೆಸುತ್ತಿದ್ದ ಸಂಗೀತ ಕಾರ್ಯಕ್ರಮ ನೋಡುತ್ತಾ ಅದರಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳುವ ಅವರು, ಕಲಾವಿದರಿಗೆ ಮುಖ್ಯವಾಗಿ ಕಲೆಯುವ ಆಸಕ್ತಿ, ಹುಮ್ಮಸ್ಸು ಬೇಕು, ಆಗ ಮಾತ್ರ ಏನು ಬೇಕಾದರೂ ಕಲೆತು ಸಾಧಿಸಬಹುದು. ಆದರೆ ಕಲಿಕೆಗೆ ವಯಸ್ಸಿನ ಹಂಗಿಲ್ಲ, ಮುಖ್ಯವಾಗಿ ಮನಸ್ಸಿರಬೇಕು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.