ADVERTISEMENT

ಬಳ್ಳಾರಿ:ರಾಷ್ಟ್ರೀಯ ಹೆದ್ದಾರಿ-167ಕ್ಕೆ ಭೂಸ್ವಾಧೀನ;ಅವೈಜ್ಞಾನಿಕ ಭೂಪರಿಹಾರ ರದ್ದು

₹113 ಕೋಟಿ ಪರಿಹಾರ ನಿಗದಿ ಮಾಡಿದ್ದ ಎಸ್‌ಎಲ್‌ಎಒ: ಸರ್ಕಾರಕ್ಕೆ ಎದುರಾಗಿದ್ದ ಭಾರೀ ಆರ್ಥಿಕ ಹೊರೆ ತಡೆದ ಎಡಿಸಿ

ಆರ್. ಹರಿಶಂಕರ್
Published 24 ಅಕ್ಟೋಬರ್ 2025, 5:46 IST
Last Updated 24 ಅಕ್ಟೋಬರ್ 2025, 5:46 IST
ಮೊಹಮದ್‌ ಝುಬೇರ
ಮೊಹಮದ್‌ ಝುಬೇರ   

ಬಳ್ಳಾರಿ: ಬಳ್ಳಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ-167 ಯೋಜನೆಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ವಿಶೇಷ ಭೂಸ್ವಾಧೀನ ಅಧಿಕಾರಿ (ಎಸ್‌ಎಲ್‌ಎಒ) ನಿಗದಿ ಮಾಡಿದ್ದ ಅವೈಜ್ಞಾನಿಕ ಪರಿಹಾರ ಆದೇಶವನ್ನು ಹೆಚ್ಚುವರಿ ಜಿಲ್ಲಾಧಿಕಾರಿಯೂ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಮಧ್ಯಸ್ಥಗಾರರು ಆದ ಮೊಹಮ್ಮದ್ ಜುಬೈರ್ ಅವರು ಮಹತ್ವದ ತೀರ್ಪಿನಲ್ಲಿ ರದ್ದುಗೊಳಿಸಿದ್ದಾರೆ.

ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಎದುರಾಗಿದ್ದ ಭಾರಿ ಪ್ರಮಾಣದ ಆರ್ಥಿಕ ಹೊರಯನ್ನು ಅವರು ತಡೆದಿದ್ದಾರೆ. 

ಎನ್‌ಎಚ್‌-167 ವಿಸ್ತರಣೆಗಾಗಿ ಬಳ್ಳಾರಿ ತಾಲೂಕಿನ ಬಳ್ಳಾರಿ ಗ್ರಾಮದ ಸರ್ವೆ ಸಂಖ್ಯೆ 13/1, 14/ಬಿ/2, ಮತ್ತು 14/ಬಿ/3ರಲ್ಲಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಸಂಬಂಧಿಸಿದ ವಿವಾದ ಇದಾಗಿದೆ.

ADVERTISEMENT

10.26 ಎಕರೆಯ ಈ ಭೂಮಿಗೆ ಭೂಸ್ವಾಧೀನಾಧಿಕಾರಿಯು ಊಹಾತ್ಮಕವಾಗಿ, ಕಾನೂನು ಮೀರಿ, ಅವೈಜ್ಞಾನಿಕವಾಗಿ ₹113 ಕೋಟಿ ಪರಿಹಾರ ನಿಗದಿ ಮಾಡಿದ್ದರು. ಆದೇಶದ ಬಳಿಕ ಈ ಪರಿಹಾರ ಮೊತ್ತ ಸುಮಾರು ₹3.70 ಕೋಟಿಗೆ ಇಳಿಕೆಯಾಗಿದೆ ಎಂದು ಹೇಳಲಾಗಿದೆ. 

‘ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಅಭಿವೃದ್ಧಿಪಡಿಸಿದ ಕೈಗಾರಿಕಾ ಭೂಮಿ ಎಂದು  ಎಸ್‌ಎಲ್‌ಎಒ ತಪ್ಪಾಗಿ ನಿರ್ಣಯಿಸಿದ್ದಾರೆ. ಜತೆಗೆ, ಅತ್ಯಂತ ಹೆಚ್ಚಿನ ಮಾರ್ಗಸೂಚಿ ದರವನ್ನು ನಿಗದಿ ಮಾಡಿದ್ದಾರೆ. ಹೀಗಾಗಿ ಭೂಮಿಗೆ ವಿಪರೀತ ಎನಿಸುವಷ್ಟು ಪರಿಹಾರ ನಿಗದಿಯಾಗಿದೆ’ ಎಂದು ಎನ್‌ಎಚ್‌ಎಐನ ಹೊಸಪೇಟೆಯ ಯೋಜನಾ ನಿರ್ದೇಶಕರು ಪ್ರತಿಪಾದಿಸಿದ್ದರು. ಈ ಪ್ರಕರಣವನ್ನು ಎನ್‌ಎಚ್‌ಐಎನ ಮಧ್ಯಸ್ಥಗಾರರೂ ಆದ ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್‌ ಝುಬೇರ ವಿಚಾರಣೆ ನಡೆಸಿದ್ದರು. 

ಎರಡೂ ಕಡೆಗಳ ವಾದ ಆಲಿಸಿದ ಮೊಹಮದ್‌ ಝುಬೇರ,  ಭೂಸ್ವಾಧೀನಕ್ಕೆ ಸಂಬಂಧಿಸಿದ ಅಧಿಸೂಚನೆಯ ನಂತರದ ಮಾರುಕಟ್ಟೆ ಮೌಲ್ಯಗಳನ್ನು ಆಧರಿಸಿರುವ ಎಸ್‌ಎಲ್‌ಎಒ ಪರಿಹಾರ ನಿಗದಿ ಮಾಡಿದ್ದಾರೆ. ಭೂಮಿಯ ಸ್ವರೂಪವನ್ನು ತಪ್ಪಾಗಿ ವರ್ಗೀಕರಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಈ ಪ್ರಕರಣದಲ್ಲಿ ‘ಭೂಸ್ವಾಧೀನ, ಪುನರ್ವಸತಿ (‌ಆರ್‌ಎಫ್‌ಸಿಟಿಎಲ್‌ಎಆರ್‌ಆರ್ ಕಾಯ್ದೆ) 2013’ರ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ನಿಬಂಧನೆಗಳನ್ನು ಎಸ್‌ಎಲ್‌ಎಒ ಉಲ್ಲಂಘಿಸಿದ್ದಾರೆ’ ಎಂಬ ನಿಲುವು ತಳೆದಿದ್ದಾರೆ. 

‘ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದ ಭೂಮಿಯನ್ನು ಅಭಿವೃದ್ಧಿ ಹೊಂದಿದ ಕೈಗಾರಿಕಾ ಭೂಮಿಯಾಗಿ ವರ್ಗೀಕರಿಸಿರುವ ಎಸ್‌ಎಲ್‌ಎಒ ಅಕ್ರಮವೆಸಗಿದ್ದಾರೆ. ಪ್ರಾಥಮಿಕ ಅಧಿಸೂಚನೆಯ ದಿನಾಂಕದಂದು (ಡಿಸೆಂಬರ್ 8, 2021), ಭೂಮಿಯನ್ನು ಅಭಿವೃದ್ಧಿಪಡಿಸಿರಲಿಲ್ಲ. ಬದಲಾಗಿ ಪರಿವರ್ತನೆ ಮಾತ್ರ ಮಾಡಲಾಗಿತ್ತು’ ಎಂಬುದನ್ನು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. 

‘ಭೂಸ್ವಾಧೀನದ ಅಧಿಸೂಚನೆ ಹೊರಬಿದ್ದ ಸುಮಾರು ಎರಡು ವರ್ಷಗಳ ನಂತರ ಜಾರಿಗೆ ಬಂದ 2023–24ರ ಮಾರ್ಗಸೂಚಿ ದರವನ್ನು ಎಸ್‌ಎಲ್‌ಎಒ ತಪ್ಪಾಗಿ ಅನ್ವಯಿಸಿದ್ದಾರೆ. ಆದರೆ, ಅಧಿಸೂಚನೆ ಹೊರಬಿದ್ದ ಅವಧಿಯಲ್ಲಿ ಇದ್ದ 2018–19ರ ಮಾರ್ಗಸೂಚಿ ದರವನ್ನು ಮಾತ್ರವೇ ಭೂಮಿಗೆ ನಿಗದಿ ಮಾಡಬೇಕಾಗಿತ್ತು’ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. 

‌‘ಆರ್‌ಎಫ್‌ಸಿಟಿಎಲ್‌ಎಆರ್‌ಆರ್ ಕಾಯ್ದೆ–2013’ರಂತೆ ಪರಿಷ್ಕೃತ ಪರಿಹಾರವನ್ನು ಮರು ನಿಗದಿ ಮಾಡಬೇಕು ಎಂದು ಮಧ್ಯಸ್ಥಗಾರರು ನಿರ್ದೇಶಿಸಿದರು.

‘ಭೂಮಾಲೀಕರ ವಕೀಲರ ಆಕ್ಷೇಪಗಳನ್ನು ತಿರಸ್ಕರಿಸಿದ ಮಧ್ಯಸ್ಥಗಾರರು, ಭೂಸ್ವಾಧೀನದ ಪರಿಹಾರ ಮೊತ್ತವು ಶಾಸನಬದ್ಧ ಮಾನದಂಡಗಳಿಗೆ ಒಳಪಟ್ಟಿರಬೇಕು. ಊಹಾತ್ಮಕ ಅಥವಾ ಅಧಿಸೂಚನೆಯ ನಂತರದ ಕಾನೂನುಗಳನ್ನು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಒತ್ತಿ ಹೇಳಿದರು.

‘ಎಸ್‌ಎಲ್‌ಎಒನ ಬೆಲೆ ನಿಗದಿಯು ಅಕ್ರಮ. ಕಾನೂನಿಗೆ ವಿರುದ್ಧವಾದದ್ದು ಮತ್ತು ದಾಖಲೆಗಳ ಬೆಂಬಲ ಇಲ್ಲ. ಸರ್ಕಾರದ ಖಜಾನೆಯ ಮೇಲೆ ಅನಗತ್ಯ ಆರ್ಥಿಕ ಹೊರೆಯನ್ನು ಹೊರಿಸುವ ಆದೇಶವನ್ನು ಪರಿಷ್ಕರಣೆ ಮಾಡುವುದು ಅತ್ಯಗತ್ಯ’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ದಂಧೆಯ ಮತ್ತೊಂದು ರೂಪ?

  ‘ಭಾರಿ ಪ್ರಮಾಣದ ಪರಿಹಾರ ಎಂಬ ಕಾರಣಕ್ಕೆ ಈ ಪ್ರಕರಣ ಎಲ್ಲರ ಗಮನ ಸೆಳೆದಿರಬಹುದು. ಆದರೆ ಸಣ್ಣಪುಟ್ಟ ಪ್ರಕರಣಗಳಲ್ಲೂ ಹೀಗೆಯೇ ಅವೈಜ್ಞಾನಿಕ ಬೆಲೆ ನಿಗದಿ ಮಾಡಿರುವ ಉದಾಹರಣೆಗಳು ಬಹಳಷ್ಟಿವೆ. ಇದು ಕೂಡ ದಂಧೆಯೇ. ಇಂಥ ಕೆಲಸಗಳನ್ನು ಮಾಡಿಸಿಕೊಳ್ಳಲು ಕೆಲ ಪಟ್ಟಭದ್ರರು ತಮಗೆ ಬೇಕಾದವರನ್ನು ಆಯಕಟ್ಟಿನ ಸ್ಥಾನಕ್ಕೆ ವರ್ಗಾವಣೆ ಮಾಡಿಸಿಕೊಂಡು ಬಂದ ಉದಾಹರಣೆಯೂ ಇದೆ. ಸದ್ಯ ಈ ಪ್ರಕರಣದಲ್ಲಿ ಎಸ್‌ಎಲ್‌ಎಒ ವಿರುದ್ಧ ಕಾನೂನು ಕ್ರಮ ಜರುಗಿಸಿದರೆ ಮುಂದೆ ಇಂಥ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತವೆ’  ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.