ADVERTISEMENT

ಧರ್ಮಸ್ಥಳ ಪ್ರಕರಣ: ಎನ್‌ಐಎ, ಸಿಬಿಐ ತನಿಖೆಗೆ ರೆಡ್ಡಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:16 IST
Last Updated 7 ಸೆಪ್ಟೆಂಬರ್ 2025, 7:16 IST
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ   

ಬಳ್ಳಾರಿ: ‘ಧರ್ಮಸ್ಥಳಕ್ಕೆ ಅಪಖ್ಯಾತಿ ತರುವಲ್ಲಿ ಸಂಸದ ಸಸಿಕಾಂತ್‌ ಸೆಂಥಿಲ್‌ ಅವರ ಕೈವಾಡವೂ ಇದೆ. ಇದನ್ನು ಬಯಲು ಮಾಡಬೇಕಿದ್ದರೆ ಧರ್ಮಸ್ಥಳ ಪ್ರಕರಣವನ್ನುರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಅಥವಾ ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ಒಪ್ಪಿಸಬೇಕು’ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆಗ್ರಹಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಧರ್ಮಸ್ಥಳದ ಪ್ರಕರಣಗಳ ವಿಚಾರಣೆಗೆ ಎಸ್‌ಐಟಿ ರಚನೆಯಾಗುವಂತೆ ಮಾಡಿದ್ದೇ ಸಸಿಕಾಂತ ಸೆಂಥಿಲ್‌. ಇದಕ್ಕಾಗಿ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಮೇಲೆ ಒತ್ತಡ ಹೇರಿದ್ದರು’ ಎಂದರು. 

‘ಯ್ಯೂಟೂಬರ್‌ ಸಮೀರ್‌ನಿಂದ ಆರಂಭವಾದ ಧರ್ಮಸ್ಥಳ ಕುರಿತ ಅಪಪ್ರಚಾಕ್ಕೆ ಎಡಪಂಥೀಯರು, ನಗರ ನಕ್ಸಲರು ಸೇರ್ಪಡೆಯಾದರು. ಚಿನ್ನಯ್ಯ, ಸುಜಾತಾ ಭಟ್‌ ಅವರನ್ನು ಕರೆತಂದು ಷಡ್ಯಂತ್ರ ರೂಪಿಸಲಾಯಿತು. ಈಗ ಅದು ಸುಳ್ಳು ಎಂದು ಬಯಲಾಗಿದೆ. ಇದರ ಹಿಂದೆ ಸೆಂಥಿಲ್‌ ಕೈವಾಡವಿದೆ. ಚಿನ್ನಯ್ಯ, ಸಮೀರ್‌, ಗಿರೀಶ್‌, ಮಹೇಶ್‌ ತಿಮರೋಡಿ ಅವರನ್ನು ವಿಚಾರಣೆ ಮಾಡಲಾಗುತ್ತಿದೆ.  ಸಸಿಕಾಂತ್‌ ಸೆಂಥಿಲ್‌ ಅವರನ್ನೂ ವಿಚಾರಣೆಗೆ ಕರೆಯಬೇಕು. ಆದರೆ, ಹಾಗೆ ಆಗುವ ಬಗ್ಗೆ ನನಗೆ ಸಂಶಯವಿದೆ. ಹೀಗಾಗಿ ಎನ್‌ಐಎ ಅಥವಾ ಸಿಬಿಐ ತನಿಖೆ ನಡೆಯಬೇಕು’ ಎಂದರು.  

ADVERTISEMENT

‘ಚಿನ್ನಯ್ಯನಿಗೂ ತಮಿಳುನಾಡಿಗೂ ನಂಟಿದೆ. ಸೆಂಥಿಲ್‌ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದರು. ಅಲ್ಲಿನ ಸಂಘಪರಿವಾರ, ಬಿಜೆಪಿ ವಿರುದ್ಧ ಟೀಕೆ ಮಾಡಿಯೇ ಅವರು ರಾಜೀನಾಮೆ ನೀಡಿ, ತಮಿಳುನಾಡಿನಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ್ದರು. ಧರ್ಮಸ್ಥಳದ ವಿರುದ್ಧ ತಮಿಳುನಾಡಿನಿಂದ ಸಂಚು ನಡೆಯುತ್ತಿದೆ. ದೇಶದ ಹೊರಗಿನ ಉಗ್ರಗಾಮಿ ಸಂಸ್ಥೆಗಳೂ ಸಂಚು ರೂಪಿಸುತ್ತಿವೆ. ಇವರಿಗೆಲ್ಲ ಹಣ ಎಲ್ಲಿಂದ ಬಂತು, ಹೇಗೆ ಬಂತು ಎಂಬುದು ಬಯಲಾಗಬೇಕು. ಆದ್ದರಿಂದ ಈ ಬಗ್ಗೆ ಎನ್‌ಐಎ, ಸಿಬಿಐ ತನಿಖೆಯಾಗಬೇಕು’ ಎಂದು ಅವರು ಆಗ್ರಹಿಸಿದರು. 

‘ಒಂದು ಬಾರಿ ತನಿಖೆಯಾದರೆ, ಭಾರತದ ತೀರ್ಥ ಕ್ಷೇತ್ರಗಳ ವಿರುದ್ಧದ ಷಡ್ಯಂತ್ರಗಳೆಲ್ಲವೂ ಬಯಲಾಗಲಿವೆ’ ಎಂದು ಅವರು ಹೇಳಿದರು. 

‘ಹೆಸರು ಹೇಳಿ ಆರೋಪಿಸಿದ್ದಕ್ಕೆ ಸೆಂಥಿಲ್‌ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಒಂದು ಬಾರಿ ಅನರ್ಹರಾಗಿ, ಮತ್ತೆ ಸಂಸತ್‌ಗೆ ಮರಳಿದ್ದಾರೆ ಎಂಬುದನ್ನು ಅವರು ಮರೆಯಬಾರದು. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್‌ ಗಾಂಧಿ ಇಬ್ಬರೂ ಜಾಮೀನಿನಲ್ಲಿದ್ದಾರೆ’ ಎಂದು ಅವರು ನೆನಪಿಸಿದರು 

‘ಧರ್ಮಸ್ಥಳ ಪ್ರಕರಣದಲ್ಲಿ ಶಶಿಕಾಂತ ಸೆಂಥಿಲ್‌ ಹೆಸರನ್ನು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರೂ ಹೇಳಿದ್ದರು. ಯಶಪಾಲ್‌ ಸುವರ್ಣ, ಸುಧಾಕರ್‌ ರೆಡ್ಡಿ, ರೇಣುಕಾಚಾರ್ಯ ಅವರೂ ಹೆಸರು ಪ್ರಸ್ತಾಪಿಸಿದ್ದಾರೆ’ ಎಂದು ಜನಾರ್ದನ ರೆಡ್ಡಿ ಹೇಳಿದರು.  

ಮಾನನಷ್ಟ ಮೊಕದ್ದಮ್ಮೆಗಳು ನನಗೆ ಹೊಸದಲ್ಲ. ಪತ್ರಿಕೆ ನಡೆಸುತ್ತಿದ್ದ ಕಾಲದಿಂದಲೂ ಕೇಸುಗಳು ದಾಖಲಾಗಿವೆ. ಸಸಿಕಾಂತ್‌ ಸೆಂಥಿಲ್‌ ದಾಖಲಿಸಿರುವ ಕೇಸನ್ನು ಸೂಕ್ತ ರೀತಿಯಲ್ಲಿ ಎದುರಿಸಲಿದ್ದೇನೆ. 
– ಜನಾರ್ದನ ರೆಡ್ಡಿ, ಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.