
ಬಳ್ಳಾರಿ: ‘ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್‌ಎಂಡಿಸಿ)’ ಒಡೆತನದ ಸಂಡೂರಿನ ಗಣಿಯಿಂದ 20 ಟನ್ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಶನಿವಾರ ಸಂಡೂರು ಠಾಣೆಗೆ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿದೆ.
ಅಕ್ರಮ ಗಣಿಗಾರಿಕೆ ಕೊನೆಯಾದ ಬಳಿಕ 2011ರಿಂದ ರಾಜ್ಯದಲ್ಲಿ ಸುಪ್ರೀಂ ಕೋರ್ಟ್‌ನ ಪರಿವೀಕ್ಷಣೆ ಮತ್ತು ಮೇಲುಸ್ತುವಾರಿ ಪ್ರಾಧಿಕಾರದ ಕಣ್ಗಾವಲಿನಲ್ಲಿ ಗಣಿ ಚಟುವಟಿಕೆಗಳು ನಡೆಯುತ್ತಿವೆ. ಒಂದು ಬಾಣಲೆ ಅದಿರು, ಗಣಿಯಿಂದ ಹೊರಬರಬೇಕಿದ್ದರೂ ಹಲವು ಪ್ರಕ್ರಿಯೆಗಳಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆ ನಡೆಸಲಾಗುತ್ತದೆ.
ತಪಾಸಣೆ ಹಂತ ಮೀರಿ 20 ಟನ್ ಅದಿರಿದ್ದ ಲಾರಿ ಟ್ರಿಪ್‌ಶೀಟ್, ಪರವಾನಗಿ ಇಲ್ಲದೆ, ಗಣಿ ದಾಟಿ ಹೋಗಿದ್ದು ಹೇಗೆ ಎಂಬ ಪ್ರಶ್ನೆ ಗಣಿ ಇಲಾಖೆ, ಪೊಲೀಸ್ ಅಧಿಕಾರಿಗಳನ್ನು ಕಾಡುತ್ತಿದೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಭದ್ರತೆ ಇರುವ ಎನ್‌ಎಂಡಿಸಿಯ ಗಣಿಯಲ್ಲಿ ಅಕ್ರಮವಾಗಿ ಅದಿರು ಸಾಗಿಸಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸಿದೆ.
ಸಂಡೂರಿನಲ್ಲಿರುವ ಎನ್‌ಎಂಡಿಸಿ ಗಣಿ ಸಂಖ್ಯೆ 1111ರ ‘ಸಿ’ ಬ್ಲಾಕ್‌ನಿಂದ ಉತ್ಕೃಷ್ಟ (60–62 ಗ್ರೇಡ್) ಗುಣಮಟ್ಟದ 20 ಟನ್ ಕಬ್ಬಿಣದ ಅದಿರನ್ನು ಹೊತ್ತ ಲಾರಿಯೊಂದು ಜ. 16ರಂದು ಬೆಳಿಗ್ಗೆ 10 ಗಂಟೆಗೆ ಹೊರಬಂದಿತ್ತು.
ಸಂಡೂರಿನ ಬಾಬಯ್ಯ ಕ್ರಾಸ್ ಬಳಿ ಪೊಲೀಸರು ಲಾರಿ ತಡೆದಿದ್ದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದ್ದರು. ಅದಿರು ಸಾಗಿಸಲು ಲಾರಿಗೆ ಪರವಾನಗಿ ಇಲ್ಲದಿರುವುದು ಆಗ ಪತ್ತೆಯಾಗಿದೆ.
ಆಂಧ್ರಪ್ರದೇಶದ ನೇಮಕಲ್‌ನಲ್ಲಿರುವ ಸ್ಪಾಂಜ್ ಐರನ್ (ಮೃದು ಕಬ್ಬಿಣ) ಕಾರ್ಖಾನೆಗೆ ಅದಿರನ್ನು ಸಾಗಿಸಲಾಗುತ್ತಿತ್ತು ಎಂದು ಲಾರಿ ಚಾಲಕ ಚಾಲಕ ತಿಪ್ಪೇಸ್ವಾಮಿ ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪ್ರಕರಣದಲ್ಲಿ ಹಲವರ ಪಾತ್ರ ಇರುವ ಬಗ್ಗೆ ಗಣಿ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತ
ಪಡಿಸಿದ್ದಾರೆ. ‘ಈಗ ಒಂದು ಲಾರಿ ಸಿಕ್ಕಿದೆ. ಹಲವು ದಿನಗಳಿಂದ ಅಕ್ರಮ ಸಾಗಣೆ ಮಾಡಿರುವ ಸಾಧ್ಯತೆಗಳಿವೆ. ತನಿಖೆ ನಡೆದಿದೆ’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಎನ್‌ಎಂಡಿಸಿ ಗಣಿ ಚಟುವಟಿಕೆಯಲ್ಲಿ ನ್ಯೂನತೆಗಳಿರುವ ಬಗ್ಗೆ ಸಂಸದ ಇ. ತುಕಾರಾಂ ಅವರು ಕೇಂದ್ರದ ಉನ್ನತಾಧಿಕಾರ ಸಮಿತಿ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಗಣಿಯಿಂದ ಸಾಗಣೆ ಆಗುತ್ತಿರುವ ಅದಿರಿನ ಪ್ರಮಾಣ, ಗುಣಮಟ್ಟಕ್ಕೂ, ಗಮ್ಯ ಸ್ಥಾನಕ್ಕೆ ತಲುಪುವ ಪ್ರಮಾಣ ಮತ್ತು ಗುಣಮಟ್ಟಕ್ಕೂ ವ್ಯತ್ಯಾಸವಾಗುತ್ತಿದೆ ಎಂದು ಅವರು ತಿಳಿಸಿದ್ದರು.
‘ಸ್ಥಳೀಯರಿಗೆ ಕೆಲಸ ನೀಡಬೇಕು ಎಂಬ ಕಾರಣಕ್ಕೆ ಪ್ರತಿ ಕೆಲಸವನ್ನೂ ಎನ್‌ಎಂಡಿಸಿ ಖಾಸಗಿಯವರಿಗೆ ಗುತ್ತಿಗೆ ನೀಡುತ್ತಿದೆ. ಈ ಮೂಲಕ ಕನ್ನಡಿಗರಿಗೆ ವಂಚಿಸುತ್ತಿದೆ’ ಎಂದು ಈಚೆಗೆ ಆರೋಪಿಸಿದ್ದರು.
ಗಣಿ ಎನ್‌ಎಂಡಿಸಿಯದ್ದಾದರೂ, ಗಣಿ ಚಟುವಟಿಕೆಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ. ಇದು ಅಕ್ರಮಕ್ಕೆ ದಾರಿ ಮಾಡಿಕೊಡುತ್ತಿದೆ. ಘಟನೆಯ ಸಮಗ್ರ ತನಿಖೆ ಆಗಬೇಕುಶ್ರೀಶೈಲ ಆಲದಹಳ್ಳಿ, ಜನಸಂಗ್ರಾಮ ಪರಿಷತ್
ಅದಿರನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಪ್ರಕರಣ ದಾಖಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆದ್ವಿತೀಯಾ ಇ.ಸಿ, ಉಪ ನಿರ್ದೇಶಕಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.