ADVERTISEMENT

ಬಳ್ಳಾರಿ | ಅಂಕುಶಕ್ಕೆ ಸಿಗದ ಮಟ್ಕಾ, ಜೂಜು: ಬಡವರನ್ನು ಹೀರುತ್ತಿರುವ ದಂಧೆಕೋರರು

ಆರ್. ಹರಿಶಂಕರ್
Published 27 ಏಪ್ರಿಲ್ 2025, 7:04 IST
Last Updated 27 ಏಪ್ರಿಲ್ 2025, 7:04 IST
ಡಾ. ಶೋಭಾರಾಣಿ ವಿ.ಜೆ 
ಡಾ. ಶೋಭಾರಾಣಿ ವಿ.ಜೆ    

ಬಳ್ಳಾರಿ: ರಾಜ್ಯದ ಇಂದಿನ ಹಲವು ಜಿಲ್ಲೆಗಳು ಇನ್ನೂ ಜಿಲ್ಲೆಗಳಾಗಿ ರಚನೆಯಾಗುವುದಕ್ಕೂ ಮೊದಲೇ ವಿಜೃಂಭಿಸಿದ್ದ, ಬೆಳೆದು ನಿಲ್ಲುವ ಎಲ್ಲ ಸಾಧ್ಯತೆಗಳನ್ನು ತನ್ನಲ್ಲಿಟ್ಟುಕೊಂಡಿದ್ದ ಜಿಲ್ಲೆ ಬಳ್ಳಾರಿ. ಕಾಲಾಂತರದಲ್ಲಿ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಬಳ್ಳಾರಿ ಈಗ ಹಲವು ಪಿಡುಗುಗಳಿಂದ ಸೊರಗುತ್ತಿದೆ. 

ಮಟ್ಕಾ, ಜೂಜುಗಳು ಸದ್ಯ ಬಳ್ಳಾರಿ ಜಿಲ್ಲೆಯನ್ನು ಪಿಡುಗಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿವೆ. ಇದು ಜಿಲ್ಲೆಯ ಅಭಿವೃದ್ಧಿ ಮೇಲೆ ಪ್ರತ್ಯಕ್ಷ, ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ. ಜನ ಹಣ ಕಳೆದುಕೊಂಡು ಸೊರಗುತ್ತಿದ್ದಾರೆ. ಹೀಗಿದ್ದಾಗ ಜಿಲ್ಲೆ ಸಾಧನೆ ಹಾದಿಯಲ್ಲಿ ಸಾಗಬಹುದೇ?

ಸಾಂಕ್ರಾಮಿಕವಾಗಿ ಹರಡುತ್ತಿರುವ ಮಟ್ಕಾ, ಜೂಜುಗಳು ಜನರನ್ನು ಹಿಂಡುತ್ತಿದೆ. ಈ ದಂಧೆಯ ಪರಿಣಾಮವಾಗಿ ಬಡವರು ಕಡು ಬಡತದ ದವಡೆಗೆ ಸಿಲುಕಿತ್ತಿದ್ದರೆ, ದಂಧೆ ನಡೆಸುವ ಪ್ರಭಾವಿಗಳು ಇನ್ನಷ್ಟು ಹಣ ಗಳಿಸುತ್ತಾ ಕೊಬ್ಬುತ್ತಿದ್ದಾರೆ. ಮಹಡಿ ಮೇಲೆ ಮಹಡಿ, ಕಾರುಗಳ ಹಿಂದೆ ಕಾರುಗಳನ್ನು ಸಂಪಾದಿಸುತ್ತಾ ಬಡವರನ್ನು, ಬಡತನವನ್ನು ಅಣಕಿಸಿ ಮೆರೆಯುತ್ತಿದ್ದಾರೆ. 

ADVERTISEMENT

ಪ್ರತಿದಿನ ಜನ ಲಕ್ಷ ಲಕ್ಷ ಹಣವನ್ನು ಮಟ್ಕಾಕ್ಕೆ ಸುರಿತ್ತಿದ್ದಾರೆ. ಚಟಕ್ಕೆ ಬಿದ್ದವರು ಮನೆ, ಮಠ ಮಾರಿಕೊಂಡು ಬೀದಿ ಪಾಲಾಗಿದ್ದಾರೆ. ಆಟ ನಿಯಂತ್ರಿಸುವ ಬುಕ್ಕಿಗಳು ಎಲ್ಲ ಊರುಗಳಲ್ಲು ತುಂಬಿದ್ದಾರೆ. ಪೊಲೀಸರು, ರಾಜಕಾರಣಿಗಳೂ ಇವುಗಳ ಹಿಂದಿದ್ದಾರೆ ಎಂಬ ಆರೋಪಗಳು ಜನರಿಂದ ಕೇಳಿ ಬರುತ್ತಿದೆ.

ಇಸ್ಪೀಟ್‌ ಅಂತೂ ಇತ್ತೀಚೆಗೆ ಮಟ್ಕಾವನ್ನೂ ಮೀರುವ ಹಂತಕ್ಕೆ ಬೆಳೆಯಲು ಕಾತರಿಸುತ್ತಿರುವಂತೆ ಕಾಣುತ್ತಿದೆ. ವಿಪರ್ಯಾಸವೆಂದರೆ, ಪ್ರಭಾವಿಗಳೇ ಇದರ ಹಿಂದೆ ಇದ್ದಾರೆ. ಊರ ಹೊರಗಿನ ತೋಟಗಳು, ಹೋಟೆಲ್‌, ಲಾಡ್ಜ್‌ಗಳ ಕೊಠಡಿಗಳು, ಕೆಲ ಪ್ರಭಾವಿಗಳ ಕಚೇರಿಗಳು ಅಡ್ಡೆಗಳಾಗಿ ಮಾರ್ಪಟ್ಟಿವೆ. 

ಜನ ಹೀಗೆ ಮಟ್ಕಾ, ಜೂಜುಗಳಲ್ಲಿ ಹಣ ಕಳೆದುಕೊಳ್ಳುತ್ತಿದ್ದರೆ, ಅದಕ್ಕೆ ಪರ್ಯಾಯವಾಗಿ ಫೈನಾನ್ಸ್‌ ದಂಧೆಯೂ ಬೆಳೆಯುತ್ತಿದೆ. ಹಣ ಖಾಲಿ ಮಾಡಿಕೊಂಡವರಿಗೆ ಹೆಚ್ಚಿನ ಬಡ್ಡಿಗೆ ಹಣ ಕೊಡುತ್ತಿರುವ ಫೈನಾನ್ಸರ್‌ಗಳು ಮತ್ತೊಂದು ಬಗೆಯಲ್ಲಿ ಜನರನ್ನು ಹಿಂಸಿಸುತ್ತಿದ್ದಾರೆ. 

ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಪೊಲೀಸ್‌ ಠಾಣೆಗಳಿವೆ. ಇದರಲ್ಲಿ ಸೈಬರ್‌, ಮಹಿಳಾ ಠಾಣೆಗಳನ್ನು ಹೊರತುಪಡಿಸಿದರೆ, ಮಿಕ್ಕುಳಿದ ಎಲ್ಲ ಠಾಣೆಗಳಲ್ಲೂ ನಿತ್ಯ ಮಟ್ಕಾ, ಜೂಜಿಗೆ ಸಂಬಂಧಿಸಿದ ಒಂದಿಲ್ಲೊಂದು ಪ್ರಕರಣಗಳು ದಾಖಲಾಗುತ್ತಲೇ ಇವೆ. ಆದರೂ ನಿಯಂತ್ರಣಕ್ಕೆ ಬಂದಿಲ್ಲ  ಎಂಬುದು ಕೆಲ ಪೊಲೀಸ್‌ ಅಧಿಕಾರಿಗಳ ಮಾತು. ಇದರಲ್ಲಿ ಕೆಲ ಪೊಲೀಸರೂ ಇದ್ದಾರೆ ಎಂದು ಇಲಾಖೆಯ ಮೂಲಗಳೇ ಒಪ್ಪಿಕೊಳ್ಳುತ್ತವೆ. 

ಈಗ ದಂಧೆ ಹೈಟೆಕ್‌ ಆಗಿದೆ. ಆನ್‌ಲೈನ್‌ ವ್ಯವಹಾರ ನಡೆಯುತ್ತಿದೆ. ವಾಟ್ಸ್‌ಆ್ಯಪ್‌,  ಮೆಸೇಜ್‌ಗಳಲ್ಲಿ ಮಟ್ಕಾ ನಂಬರ್‌ ಬರೆಯಲಾಗುತ್ತದೆ. ಹಣ ಸಂದಾಯವೂ ಆನ್‌ಲೈನ್‌ನಲ್ಲೇ ಆಗುತ್ತಿದೆ ಎನ್ನಲಾಗಿದೆ. ಹವಾಲಾ ಮಾರ್ಗವೂ ಬಳಕೆಯಾಗುತ್ತಿರುವ ಮಾಹಿತಿ ಇದೆ. 

ಕಳೆದ ವರ್ಷ ಜೂಜು ಅಡ್ಡೆಗಳ ವಿರುದ್ಧ ಮುರಿದು ಬಿದ್ದಿದ್ದ ಪೊಲೀಸ್‌ ಇಲಾಖೆ ನಿರಂತರ ಮೂರ್ನಾಲ್ಕು ದಿನಗಳ ಕಾಲ ಅಡ್ಡೆಗಳ ಮೇಲೆ ದಾಳಿ ಮಾಡಿ  130 ಪ್ರಕರಣ ದಾಖಲಿಸಿತ್ತು. 810 ಮಂದಿಯನ್ನು ಬಂಧಿಸಿತ್ತು.  ಒಟ್ಟಾರೆ ₹16,64,135 ಮೌಲ್ಯದ ಹಣ, ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಜೂಜು, ಮಟ್ಕಾ ತಡೆಯಲು ಇಂಥ ದಿಟ್ಟ ನಿರ್ಧಾರಗಳು ಅಗತ್ಯ ಎನ್ನುತ್ತಾರೆ ನಾಗರಿಕರು.  

ಮಟ್ಕಾ ದಂಧೆ ನಡೆಸುವವರ ಮೂಲ ಮುಂಬೈ. ಪಟ್ಟಿ ಬರೆಯುವ ಮೂಲಕ ಅಥವಾ ಮೊಬೈಲ್‌ ಆ್ಯಪ್‌ಗಳ ಮೂಲಕ ಈಗ ದಂಧೆ ನಡೆಯುತ್ತಿದೆ. ಹೆಚ್ಚಿನ ಹಣದ ಕೊಡುವ ಆಕರ್ಷಣೆಯಲ್ಲಿ ಈ ದಂಧೆ ನಡೆಯುತ್ತಿದೆ. ಬಡವರೇ ಇದಕ್ಕೆ ಹೆಚ್ಚಾಗಿ ಮರುಳಾಗುತ್ತಾರಾದರೂ, ಶ್ರೀಮಂತರೂ ತಮ್ಮ ಶಕ್ತ್ಯಾನುಸಾರ ಹಣ ಹೂಡುತ್ತಾರೆ. ನೇರವಾಗಿ, ಆನ್‌ಲೈನ್‌ನಲ್ಲಿ, ಹವಾಲಾ ಮೂಲಕವೂ ಹಣ ಪಾವತಿ ಮಾಡಲಾಗುತ್ತಿದೆ. ನಿರೀಕ್ಷಿಸಿದ ನಂಬರ್‌ ಬಾರದೆ ಹೋದರೆ ಹಣವೆಲ್ಲ ಖೋತಾ.

ಮಟ್ಕಾ ದಂಧೆ ಜೂಜು ಅಡ್ಡೆಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲು ಮಾಡಲು ಸೂಚನೆ ನೀಡಿದ್ದೇನೆ
ಡಾ. ಶೋಭಾರಾಣಿ ವಿ.ಜೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಮಟ್ಕಾ 157, ಜೂಜು 61 ಪ್ರಕರಣ
ಜಿಲ್ಲೆಯಲ್ಲಿ ಈ ವರ್ಷದ ಇಲ್ಲಿಯ ವರೆಗೆ 157 ಮಟ್ಕಾ ಪ್ರಕರಣಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇದರಲ್ಲಿ 195 ಮಂದಿಯನ್ನು ಬಂಧಿಸಲಾಗಿದೆ. ಈ ಎಲ್ಲ ಪ್ರಕರಣಗಳಿಂದ ₹374186 ಮೌಲ್ಯದ ಹಣ ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.  ಇನ್ನು 61 ಜೂಜಾಟದ ಪ್ರಕರಣಗಳನ್ನು ಪತ್ತೆ ಮಾಡಲಾಗಿ 372 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ₹383445 ಮೌಲ್ಯದ ಹಣ ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಇಲಾಖೆಯ ಅಧಿಕೃತ ದಾಖಲೆಗಳು ಹೇಳುತ್ತಿವೆ.  ಆದರೆ ಕಣ್ಣಿಗೆ ಕಾಣದಂತೆ ಎಷ್ಟು ದಂಧೆ ನಡೆದಿರಬಹುದು ಎಷ್ಟು ಹಣ ಕೈಬದಲಾಗಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.