ಬಳ್ಳಾರಿ: 'ಕನ್ನಡ ವಿಶ್ವವಿದ್ಯಾಲಯ ಕ್ಕೆ ರಾಜ್ಯ ಸರ್ಕಾರ ಅನುದಾನ ನೀಡದೇ ಇರುವುದನ್ನು ವಿರೋಧಿಸಿ 24 ಗಂಟೆಗಳ ಕಾಲ ನಿರಂತರ ಸಂಗೀತ ಮತ್ತು ಭಾಷಣಗಳ ಸಾಂಸ್ಕೃತಿಕ ಪ್ರತಿರೋಧವನ್ನು ಏರ್ಪಡಿಸಲಾಗುವುದು' ಎಂದು ಸಮುದಾಯ ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಮುನಿರಾಜು ತಿಳಿಸಿದರು
'ಹೊಸಪೇಟೆಯಲ್ಲಿ ಭಾನುವಾರ ನಡೆದ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಂಡಾಯ ಸಾಹಿತ್ಯ ಸಂಘಟನೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಜಿಲ್ಲೆಯ ಪ್ರಗತಿಪರ ಸಾಂಸ್ಕೃತಿಕ ಸಂಘಟನೆಗಳ ಸಹಯೋಗ ಪಡೆಯಲಾಗುವುದು. ಈ ಸಂಬಂಧ ಜ 22 ರಂದು ಪೂರ್ವಸಿದ್ಧತೆ ಸಭೆ ನಡೆಸಲಾಗುವುದು' ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ದೆಹಲಿಯಲ್ಲಿ ರೈತರ ಹೋರಾಟ ಐವತ್ತೆರಡು ದಿನಗಳನ್ನು ಪೂರೈಸಿದ್ದು, ಅದನ್ನು ಬೆಂಬಲಿಸಿ ರಾಜ್ಯದಲ್ಲಿ ಪ್ರಜಾಸತ್ತಾತ್ಮಕ ಸಂಘಟನೆಗಳು ಹಮ್ಮಿಕೊಂಡಿರುವ ನಾಲ್ಕು ವಲಯಗಳ ಜಾಥಾ ಬಳ್ಳಾರಿಯಲ್ಲಿ 29 ರಂದು ಉದ್ಘಾಟನೆಯಾಗಲಿದೆ. ಅದರ ಅಂಗವಾಗಿ ಸಮಿತಿಯು ಮಧ್ಯ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಲು ಸಂಚರಿಸಲಿದೆ. ಪೂರ್ವಸಿದ್ಧತೆಯ ಭಾಗವಾಗಿ ಜ. 27 ಮತ್ತು 28ರಂದು ಜಾಗೃತಿ ಗೀತೆ ಗಾಯನ ತರಬೇತಿ ಕಾರ್ಯಾಗಾರ ವನ್ನು ಏರ್ಪಡಿಸಲಾಗುವುದು' ಎಂದರು.
ಸಮೀಕ್ಷೆ ನಡೆಸಲಿ: 'ಜಿಲ್ಲೆಯ ಎಲ್ಲ ಪ್ರಕಾರಗಳ ಕಲಾವಿದರ ಸಮೀಕ್ಷೆಯನ್ನು ಜಿಲ್ಲಾಡಳಿತ ಹಮ್ಮಿಕೊಳ್ಳಬೇಕು. ಕಲಾವಿದರಿಗೆ ಪ್ರತಿ ತಿಂಗಳು ₹ 8 ಸಾವಿರ ಮಾಸಾಶನ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೆರವಾಗಲು ಗ್ರಾಮ ಪಂಚಾಯ್ತಿಗಳಲ್ಲಿ ಅನುದಾನವನ್ನು ಮೀಸಲಿಡಬೇಕು' ಎಂದು ಆಗ್ರಹಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಕಮ್ಮಾರ, ಬಂಡಾಯ ಸಾಹಿತ್ಯ ಸಂಘಟನೆಯ ಪಿ.ಆರ್.ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.