ADVERTISEMENT

ಪದೇ ಪದೇ ಭದ್ರತಾ ಲೋಪ | ಹಂಪಿಯಲ್ಲಿ ಇನ್ನೂ ಖಚಿತವಾಗದ ಭದ್ರತೆ

ಹಳೆಯ ಘಟನೆಗಳಿಂದ ಎಚ್ಚೆತ್ತುಕೊಳ್ಳದ ಪುರಾತತ್ವ ಇಲಾಖೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 20 ಸೆಪ್ಟೆಂಬರ್ 2019, 19:31 IST
Last Updated 20 ಸೆಪ್ಟೆಂಬರ್ 2019, 19:31 IST
ಹಂಪಿ ವಿಜಯ ವಿಠಲ ದೇವಸ್ಥಾನ ಹಿಂಭಾಗದಲ್ಲಿ ಸಾಲು ಕಂಬಗಳನ್ನು ಸೆ. 18ರಂದು ಬೀಳಿಸಿ, ಭಗ್ನಗೊಳಿಸಿರುವುದು
ಹಂಪಿ ವಿಜಯ ವಿಠಲ ದೇವಸ್ಥಾನ ಹಿಂಭಾಗದಲ್ಲಿ ಸಾಲು ಕಂಬಗಳನ್ನು ಸೆ. 18ರಂದು ಬೀಳಿಸಿ, ಭಗ್ನಗೊಳಿಸಿರುವುದು   

ಹೊಸಪೇಟೆ: ಹಳೆಯ ಘಟನೆಗಳಿಂದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಪಾಠ ಕಲಿತಂತಿಲ್ಲ.

ಒಂದುವೇಳೆ ಅದು ಎಚ್ಚೆತ್ತುಕೊಂಡಿದ್ದರೆ ತಾಲ್ಲೂಕಿನ ಹಂಪಿಯಲ್ಲಿ ಪದೇ ಪದೇ ಭದ್ರತಾ ಲೋಪಗಳು ಉಂಟಾಗುತ್ತಿರಲಿಲ್ಲ. ಸ್ಮಾರಕಗಳನ್ನು ಭಗ್ನಗೊಳಿಸುವ ಪ್ರಕರಣಗಳು ಆಗುತ್ತಿರಲಿಲ್ಲ. ಭದ್ರತೆ ಖಚಿತವಾಗಿರದ ಕಾರಣಕ್ಕಾಗಿಯೇ ಸ್ಮಾರಕಗಳು ಭಗ್ನಗೊಳ್ಳುತ್ತಿವೆ. ಅದಕ್ಕೆ ಇತ್ತೀಚಿನ ತಾಜಾ ನಿದರ್ಶನ ವಿಜಯ ವಿಠಲ ದೇಗುಲದ ಬಳಿ ಸಾಲುಕಂಬವನ್ನು ಪ್ರವಾಸಿಗರೊಬ್ಬರು ಉರುಳಿಸಿ, ಭಗ್ನಗೊಳಿಸಿರುವುದು.

ಫೆ. 18ರಂದು ಬೆಂಗಳೂರಿನ ಪ್ರವಾಸಿ ನಾಗರಾಜ ಎಂಬುವರು ಸಾಲುಕಂಬ ಉರುಳಿಸಿದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದರು. ’ತನಗೆ ಅರಿವಿಲ್ಲದೆ ನಾಗರಾಜ ಅವರಿಂದ ಈ ಕೃತ್ಯ ನಡೆದು ಹೋಗಿದೆ‘ ಎಂದು ಪೊಲೀಸರು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಆದರೆ, ಭದ್ರತಾ ಲೋಪವಾಗಿದೆ ಎಂದು ಒಪ್ಪಿಕೊಂಡಿಲ್ಲ.

ADVERTISEMENT

2017ರ ಜೂನ್‌ 28ರಂದು ಕೋಟಿಲಿಂಗ ಭಗ್ನಗೊಳಿಸಲಾಗಿತ್ತು. ಅದಾದ ಎರಡು ದಿನಗಳ ಬಳಿಕ ಪಾನ್‌ ಸುಪಾರಿ ಬಜಾರ್‌ನಲ್ಲಿ ಅಂತಹುದೇ ಕೃತ್ಯ ನಡೆದಿತ್ತು. ಈ ವಿಷಯ ಜನ ಮರೆಯುತ್ತಿದ್ದಂತೆ 2019ರ ಫೆ. 2ರಂದು ಆನೆಸಾಲು ಮಂಟಪ ಬಳಿಯ ವಿಷ್ಣು ಸ್ಮಾರಕದ ಕಲ್ಲುಕಂಬಗಳನ್ನು ನಾಲ್ವರು ಯುವಕರು ಬೀಳಿಸಿದ್ದರು. ಅಷ್ಟೇ ಅಲ್ಲ, ಅದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ವಿಶೇಷ ತನಿಖಾ ತಂಡ ರಚಿಸಿ, ಪೊಲೀಸರು ಕೃತ್ಯ ಎಸಗಿದವರನ್ನು ಬಂಧಿಸಿದ್ದರು. ಬಳಿಕ ‘ಹಂಪಿ ಪರಿಸರದಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗುವುದು’ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ಆದರೆ, ಏಳು ತಿಂಗಳ ಒಳಗಾಗಿ ಮತ್ತೊಂದು ಸ್ಮಾರಕದ ಅವಶೇಷಗಳನ್ನು ಭಗ್ನಗೊಳಿಸಲಾಗಿದೆ. ಭದ್ರತಾ ವ್ಯವಸ್ಥೆಯ ಮುಖವನ್ನು ಇದು ಬೆತ್ತಲುಗೊಳಿಸಿದೆ.

ನಾಲ್ಕು ರೀತಿ ಭದ್ರತಾ ವ್ಯವಸ್ಥೆ:

ಹಂಪಿಯಲ್ಲಿ ನಾಲ್ಕು ಹಂತದ ಭದ್ರತಾ ವ್ಯವಸ್ಥೆ ಇದೆ. ಪೊಲೀಸರು, ಗೃಹರಕ್ಷಕ ಸಿಬ್ಬಂದಿ, ಪ್ರವಾಸಿ ಮಿತ್ರ ಹಾಗೂ ಎ.ಎಸ್‌.ಐ.ಗೆ ಸೇರಿದ ಖಾಸಗಿ ಭದ್ರತಾ ಸಿಬ್ಬಂದಿ ಇದ್ದಾರೆ. ಹೀಗಿದ್ದರೂ ಪದೇ ಪದೇ ಭದ್ರತೆಯನ್ನು ಭೇದಿಸಿ, ಸ್ಮಾರಕಗಳನ್ನು ಭಗ್ನಗೊಳಿಸುವ ಕೃತ್ಯಗಳು ಜರುಗುತ್ತಿವೆ.

’ಎ.ಎಸ್‌.ಐ., ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ, ರಾಜ್ಯ ಪುರಾತತ್ವ ಇಲಾಖೆಯಂತಹ ಪ್ರಮುಖ ಕಚೇರಿಗಳು ಅಲ್ಲೇ ಇವೆ. ಅವುಗಳ ನಡುವೆ ಸಮನ್ವಯದ ಕೊರತೆ ಇದೆ. ಒಟ್ಟಿಗೆ ಕೆಲಸ ಮಾಡಿದರೆ ಇಂತಹ ಘಟನೆಗಳನ್ನು ತಪ್ಪಿಸಬಹುದು’ ಎನ್ನುತ್ತಾರೆ ಹಂಪಿ ಮಾರ್ಗದರ್ಶಿಗಳು.

’ಹಂಪಿ ಪರಿಸರದಲ್ಲಿ ನಿರಂತರವಾಗಿ ಗಸ್ತು ತಿರುಗುತ್ತಿರಬೇಕು. ಆಯಾಕಟ್ಟಿನ ಜಾಗಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕು. ಸ್ಮಾರಕಗಳ ಸುತ್ತಮುತ್ತ ಅವುಗಳ ಮಹತ್ವ, ಅವುಗಳನ್ನು ಭಗ್ನಗೊಳಿಸಿದರೆ ಅದರ ಶಿಕ್ಷೆಯ ಪ್ರಮಾಣದ ಫಲಕಗಳನ್ನು ಅಳವಡಿಸಬೇಕು. ಆಗ ಯಾರು ಕೂಡ ಅದರ ಪ್ರಾಮುಖ್ಯತೆ ಎಷ್ಟಿದೆ ಎಂಬುದು ಗೊತ್ತಿಲ್ಲದೆ ಮಾಡಿದೆ ಎಂದು ಹೇಳಲು ಆಗುವುದಿಲ್ಲ‘ ಎಂದು ಮಾರ್ಗದರ್ಶಿ ರಾಜೇಶ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.