ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ 6 ತಿಂಗಳ ವೇತನ ಬಾಕಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮಂಗಳವಾರ ಶಾಸಕ ಕೆ.ನೇಮರಾಜನಾಯ್ಕ ಅವರಿಗೆ ಪಟ್ಟಣದಲ್ಲಿ ಮನವಿ ಸಲ್ಲಿಸಿದರು.
ಸಂಘದ ಮುಖಂಡ ಕೆ.ವಿಷ್ಣುವರ್ಧನ್ ಮಾತನಾಡಿ, ‘ಈ ಯೋಜನೆ ಕೂಲಿ ಕಾರ್ಮಿಕರಿಗೆ ಕೂಲಿ ಒದಗಿಸುವ ಬಡವರಿಗೆ ವರದಾನವಾದ ಮಹತ್ವದ ಯೋಜನೆಯಾಗಿದೆ. ಸಿಬ್ಬಂದಿ ಎಲ್ಲ ಸರ್ಕಾರದ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಲಾಗುತ್ತಿದೆ. ವಿವಿಧ ಪದವಿಗಳ ಅನುಸಾರ ಕೆಲಸ ನಿರ್ವಹಿಸುತ್ತಿದ್ದು ಜಿಲ್ಲೆಯಲ್ಲಿ 158 ಹೊರ ಗುತ್ತಿಗೆ ನೌಕರರು ಕಳೆದ 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ, ಇದರ ಮೇಲೆ ಇಡೀ ಕುಟುಂಬ ಅವಲಂಬಿತವಾಗಿದ್ದು, ಬದುಕು ಕಟ್ಟಿಕೊಳ್ಳಲಾಗಿದೆ. ಆದರೆ ಕಳೆದ 6 ತಿಂಗಳುಗಳಿಂದ ವೇತನ ಬಾಕಿ ಇದೆ, ಜೀವನ ನಿರ್ವಹಣೆ ಕಷ್ಟಕರವಾಗಿದೆ, ಜತೆಗೆ ಕ್ಷೇತ್ರ ಭೇಟಿಗೆ ಸಾಧ್ಯವಾಗದಾಗಿದೆ’ ಎಂದು ನೋವು ತೋಡಿಕೊಂಡರು.
ನರೇಗಾ ಯೋಜನೆಯ ಸಿಬ್ಬಂದಿಗೆ ನಿಗದಿತ ಸಮಯದಲ್ಲಿ ವೇತನ ಪಾವತಿ ಮಾಡಬೇಕು, ಆರೋಗ್ಯ ವಿಮೆ, ಸೇವಾ ಭದ್ರತೆ ಒದಗಿಸಿ ರಾಜ್ಯ ಸರ್ಕಾರದಿಂದ ಸೊಸೈಟಿ ರಚನೆ ಮಾಡಬೇಕು ಎಂದು ಆಗ್ರಹಿಸಿದರು. ಈ ಕುರಿತಂತೆ ಶಾಸಕರು ಸರ್ಕಾರದ ಗಮನ ಸೆಳೆಯುವಂತೆ ವಿನಂತಿಸಿಕೊಂಡರು.
ಶಾಸಕ ನೇಮರಾಜನಾಯ್ಕ ಪ್ರತಿಕ್ರಿಯಿಸಿ, ‘ಈ ಬೇಡಿಕೆಗಳ ಕುರಿತಂತೆ ಮುಂದಿನ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು, ಕೂಡಲೇ 6 ತಿಂಗಳ ವೇತನ ಬಿಡುಗಡೆ ಮಾಡುವಂತೆ ಸಂಬಂಧಿಸಿದ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು’ ಎಂದರು.
ಸಂಘದ ಪದಾಧಿಕಾರಿಗಳಾದ ದೇವೇಂದ್ರನಾಯ್ಕ, ಶಿವಬಸಪ್ಪ, ಮುಜಾಮಿಲ್, ರಾಘವೇಂದ್ರ, ಚಂದ್ರಶೇಖರ್, ವಿಶ್ವನಾಥ, ಗಿರೀಶ್, ಶಿವಕುಮಾರ್, ಮೈಲಪ್ಪ, ರಾಹುಲ್, ದೊಡ್ಡಬಸಪ್ಪ, ಮಾರುತಿ, ಶಿಲ್ಪಾ, ವಿದ್ಯಾ, ಲಕ್ಷ್ಮೀದೇವಿ, ಪದ್ಮ, ಜೆಡಿಎಸ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಮಲ್ಲಿಕಾರ್ಜುನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.