ADVERTISEMENT

ಸಂಪುಟವಿಲ್ಲದ ಏಕವ್ಯಕ್ತಿ ಸರ್ಕಾರ ಕಾನೂನುಬಾಹಿರ: ವಿ.ಎಸ್‌. ಉಗ್ರಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 14:31 IST
Last Updated 5 ಆಗಸ್ಟ್ 2019, 14:31 IST
ವಿ.ಎಸ್‌. ಉಗ್ರಪ್ಪ
ವಿ.ಎಸ್‌. ಉಗ್ರಪ್ಪ   

ಹೊಸಪೇಟೆ: ‘ಸಚಿವ ಸಂಪುಟವಿಲ್ಲದ ರಾಜ್ಯದ ಏಕವ್ಯಕ್ತಿ ಸರ್ಕಾರ ಸಂವಿಧಾನ ಹಾಗೂ ಕಾನೂನುಬಾಹಿರವಾದುದು’ ಎಂದು ಮಾಜಿಸಂಸದ ವಿ.ಎಸ್‌. ಉಗ್ರಪ್ಪ ಟೀಕಿಸಿದರು.

ಸೋಮವಾರ ಸಂಜೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನೈತಿಕವಾಗಿ ಕಾಂಗ್ರೆಸ್‌–ಜೆ.ಡಿ.ಎಸ್‌. ಶಾಸಕರಿಂದ ರಾಜೀನಾಮೆ ಕೊಡಿಸಿ ಸಮ್ಮಿಶ್ರ ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯುವಂತೆ ಮಾಡಿದ ಬಿಜೆಪಿ, ಸರ್ಕಾರ ರಚಿಸಿದೆ. ಬಿ.ಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಹಲವು ದಿನಗಳು ಕಳೆದರೂ ಸಚಿವ ಸಂಪುಟ ರಚಿಸಿಲ್ಲ. ಸಂಪುಟವಿಲ್ಲದೆ ಮುಖ್ಯಮಂತ್ರಿಯೊಬ್ಬರೇ ಕೈಗೊಳ್ಳುವ ನಿರ್ಧಾರ ಸಂವಿಧಾನಕ್ಕೆ ವಿರುದ್ಧವಾದುದು’ ಎಂದು ಹೇಳಿದರು.

‘ಸಂಪುಟ ಸಹಮತವಿಲ್ಲದೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ. ಆದರೆ, ಯಡಿಯೂರಪ್ಪನವರು ಮನಸ್ಸಿಗೆ ಬಂದಂತೆ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ಉತ್ತಮ ಆಡಳಿತ ಕೊಡಲು ಅವರಿಗೆ ಆಗುತ್ತಿಲ್ಲ. ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಒಂದು ಕಡೆ ನೆರೆ, ಇನ್ನೊಂದೆಡೆ ಬರ ಇದೆ. ಜನ ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ. ಆ ಪ್ರದೇಶಗಳಿಗೆ ಭೇಟಿ ಕೊಟ್ಟು ಸ್ಪಂದಿಸುವ ಕೆಲಸವಾಗಬೇಕಿದೆ. ಆದರೆ, ಅದು ಸರ್ಕಾರದಿಂದ ಆಗುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಅನ್ಯ ಪಕ್ಷದ ಶಾಸಕರನ್ನು ರಾಜೀನಾಮೆ ಕೊಡಿಸಿ ಬಿಜೆಪಿ ಸರ್ಕಾರ ರಚಿಸಿದ ಹುಮ್ಮಸ್ಸಿನಲ್ಲಿದೆ. ಆದರೆ, ಭವಿಷ್ಯದಲ್ಲಿ ಇದು ಅವರಿಗೆ ತಿರುಗುಬಾಣವಾಗಲಿದೆ. ಯಾರು ಅವರ ಕ್ಷೇತ್ರದ ಮತದಾರರು, ಅವರು ಪ್ರತಿನಿಧಿಸುವ ಪಕ್ಷಕ್ಕೆ ಗೌರವ ಕೊಡಲಿಲ್ಲವೋ ಅಂತಹವರು ಬಿಜೆಪಿಗೆ ನಿಷ್ಠರಾಗಿ ಇರುತ್ತಾರೋ ಎನ್ನುವುದಕ್ಕೆ ಏನು ಖಾತ್ರಿ’ ಎಂದು ಪ್ರಶ್ನಿಸಿದರು.

‘ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವುದು, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು, ರಾಮಜನ್ಮಭೂಮಿ ವಿವಾದದ ಬಗ್ಗೆ ಜನಸಂಘದ ಮುಖಂಡರು ಆರಂಭದ ದಿನಗಳಿಂದಲೂ ಮಾತನಾಡುತ್ತಿದ್ದರು. ಈಗ ಆ ಕಾರ್ಯಸೂಚಿಯನ್ನು ಒಂದೊಂದಾಗಿ ಕಾರ್ಯರೂಪಕ್ಕೆ ತರುತ್ತಿದ್ದಾರೆ. 370ನೇ ವಿಧಿ ರದ್ದುಗೊಳಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಅದನ್ನು ಈಗ ಮಾಡಿದ್ದಾರೆ. ಕಾಶ್ಮೀರದಲ್ಲಿ ಪಿ.ಡಿ.ಪಿ. ಪಕ್ಷದೊಂದಿಗೆ ಸೇರಿ ಬಿಜೆಪಿ ಸರ್ಕಾರ ರಚಿಸಿತ್ತು. ಅವರದೇ ಸರ್ಕಾರ ಇದ್ದಾಗಲೂ ಕಾಶ್ಮೀರ ಸಮಸ್ಯೆ ಬಗೆಹರಿಸಲು ಅವರಿಗೆ ಆಗಿಲ್ಲ. ಈಗ ಆ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಗೃಹಬಂಧನದಲ್ಲಿ ಇರಿಸಿ, ಈ ತೀರ್ಮಾನ ಕೈಗೊಂಡಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಬಿ.ವಿ. ಶಿವಯೋಗಿ, ಮುಖಂಡರಾದ ತಾರಿಹಳ್ಳಿ ವೆಂಕಟೇಶ, ಮೊಹಮ್ಮದ್‌ ಇಮಾಮ್‌ ನಿಯಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.