ADVERTISEMENT

ಹೊಸಪೇಟೆ: ಬಿಟಿಪಿಎಸ್ ಪೈಪ್‌ಲೈನ್‌ ಕಾಮಗಾರಿಗೆ ಅಪಸ್ವರ

ಪುರಾತನ ಕೋಟೆ ಗೋಡೆ ರಕ್ಷಿಸಲು ಸ್ಮಾರಕಪ್ರಿಯರ ಆಗ್ರಹ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 27 ಅಕ್ಟೋಬರ್ 2020, 19:47 IST
Last Updated 27 ಅಕ್ಟೋಬರ್ 2020, 19:47 IST
ಹೊಸಪೇಟೆ ತಾಲ್ಲೂಕಿನ ನಲ್ಲಾಪುರ ಬಳಿಯ ಕೋಟೆ ಗೋಡೆಗೆ ಹೊಂದಿಕೊಂಡಂತೆ ನೆಲ ಅಗೆದಿರುವುದು
ಹೊಸಪೇಟೆ ತಾಲ್ಲೂಕಿನ ನಲ್ಲಾಪುರ ಬಳಿಯ ಕೋಟೆ ಗೋಡೆಗೆ ಹೊಂದಿಕೊಂಡಂತೆ ನೆಲ ಅಗೆದಿರುವುದು   

ಹೊಸಪೇಟೆ: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರವು (ಬಿಟಿಪಿಎಸ್‌) ಕೈಗೆತ್ತಿಕೊಂಡಿರುವ, ನಾರಾಯಣಪುರ ಜಲಾಶಯದಿಂದ ಕುಡಿತಿನಿ ಬಿಟಿಪಿಎಸ್‌ವರೆಗೆ ನೀರಿನ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿಗೆ ಅಪಸ್ವರ ಕೇಳಿ ಬಂದಿದೆ.

ತಾಲ್ಲೂಕಿನ ಕಮಲಾಪುರ, ನಲ್ಲಾಪುರ, ಚಿನ್ನಾಪುರ ಮೂಲಕ ಬಿಟಿಪಿಎಸ್‌ವರೆಗೆ ಭರದಿಂದ ಕೆಲಸ ನಡೆಯುತ್ತಿದೆ. ಸದ್ಯ, ಕಾಮಗಾರಿ ಭಾಗವಾಗಿ ನಲ್ಲಾಪುರ ಬಳಿಯ ಕೋಟೆ ಗೋಡೆಗೆ ಹೊಂದಿಕೊಂಡಂತೆ ನೆಲ ಅಗೆದಿರುವುದಕ್ಕೆ ಸ್ಮಾರಕಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯಿಂದ ಗೌರಮ್ಮನ ಕೆರೆಗೂ ಧಕ್ಕೆಯಾಗಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

‘ಇತಿಹಾಸಕಾರರು ಹೇಳುವ ಪ್ರಕಾರ ವಿಜಯನಗರ ಸಾಮ್ರಾಜ್ಯದ ಅರಸ ಅಚ್ಯುತದೇವರಾಯನ ಆಳ್ವಿಕೆಯಲ್ಲಿ ನಲ್ಲಾಪುರ ಬಳಿ ಅಚ್ಯುತಪುರ ಎಂಬ ಗ್ರಾಮ ನಿರ್ಮಿಸಲಾಗಿತ್ತು. ಆ ಗ್ರಾಮದ ರಕ್ಷಣೆಗೆ ಸುತ್ತಲೂ ಕೋಟೆ ಗೋಡೆ ನಿರ್ಮಿಸಲಾಗಿತ್ತು. ಈಗ ಅದೇ ಕೋಟೆ ಗೋಡೆಯ ಬಳಿ ಕಾಮಗಾರಿ ನಡೆಯುತ್ತಿದ್ದು, ಅದನ್ನು ತಡೆಯಬೇಕು’ ಎಂದು ಸ್ಮಾರಕಪ್ರಿಯರು ಒತ್ತಾಯಿಸಿದ್ದಾರೆ.

ADVERTISEMENT

‘ಕಮಲಾಪುರ, ನಲ್ಲಾಪುರ ಸುತ್ತಮುತ್ತ ವಿಜಯನಗರ ಕಾಲದ ಅನೇಕ ಸ್ಮಾರಕಗಳು, ಅವಶೇಷಗಳಿವೆ. ಈ ಪೈಕಿ ಕೋಟೆ ಗೋಡೆ ಒಂದು. ಸದ್ಯ ಪೆನುಗೊಂಡ ಮಹಾದ್ವಾರದ ಬಳಿ ಪೈಪ್‌ಲೈನ್‌ಗೆ ಜೆಸಿಬಿಯಿಂದ ನೆಲ ಅಗೆಯಲಾಗಿದೆ. 10 ರಿಂದ 12 ಅಡಿಗಳಷ್ಟು ಆಳಕ್ಕೆ ಪೈಪ್‌ಲೈನ್‌ ಹಾಕಲಾಗುತ್ತಿದೆ. ಇದೇ ಮಾರ್ಗವಾಗಿ ಪೈಪ್‌ಲೈನ್‌ ಕಾಮಗಾರಿ ಮುಂದುವರಿಯಲಿದೆ. ಅದಕ್ಕಾಗಿ ಕೋಟೆ ಗೋಡೆ ಒಡೆಯಬೇಕಾಗುತ್ತದೆ. ಅಲ್ಲದೇ ಕೆಲ ಮಧ್ಯವರ್ತಿಗಳು ಕೋಟೆಯೊಳಗೆ ನಿವೇಶನಕ್ಕೆ ಜಾಗ ಗುರುತಿಸಿ, ಅವುಗಳನ್ನು ಮಾರಾಟ ಮಾಡಿ, ಜನರಿಗೆ ವಂಚಿಸುತ್ತಿದ್ದಾರೆ. ಕೂಡಲೇ ಪುರಾತತ್ವ ಇಲಾಖೆಯವರು ಅದನ್ನು ತಡೆಯಬೇಕು’ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ಆಗ್ರಹಿಸಿದ್ದಾರೆ.

‘ಸರ್ಕಾರದ ಅಂಗ ಸಂಸ್ಥೆಯೊಂದು ಅವೈಜ್ಞಾನಿಕವಾಗಿ ಕಾಮಗಾರಿ ಕೈಗೆತ್ತಿಕೊಂಡಿರುವುದು ಸರಿಯಲ್ಲ. ಕೇವಲ ಮಾರ್ಕಿಂಗ್‌ ಮಾಡಿ ಪೈಪ್‌ಲೈನ್‌ಗೆ ನೆಲ ಅಗೆದರೆ ಸಾಲದು. ಮಾರ್ಗದಲ್ಲಿ ಸ್ಮಾರಕ, ದೇವಸ್ಥಾನಗಳಿವೆಯೇ ಎನ್ನುವುದನ್ನು ನೋಡಬೇಕು. ಈಗ ಕಾಮಗಾರಿ ನಿಲ್ಲಿಸಿ, ಬೇರೊಂದು ಮಾರ್ಗದ ಮೂಲಕ ಪೈಪ್‌ಲೈನ್‌ ಹಾಕಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕಮಲಾಪುರ, ನಲ್ಲಾಪುರದಲ್ಲಿ ನಡೆಯುತ್ತಿರುವ ಕಾಮಗಾರಿ ನೋಡಿದರೆ ಗೌರಮ್ಮನ ಕೆರೆ ಮೂಲಕ ಹಾದು ಹೋಗುವ ಸಾಧ್ಯತೆ ಇದೆ. ಇದರಿಂದ ಕೆರೆಯ ಅಸ್ತಿತ್ವ ನಾಶವಾಗಬಹುದು’ ಎನ್ನುತ್ತಾರೆ ರೈತರಾದ ಹುಲಿಗೆಪ್ಪ, ರಾಮಣ್ಣ, ಜಂಬಯ್ಯ.

ಈ ಸಂಬಂಧ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.