ADVERTISEMENT

ವಿಜಯನಗರ ರಚನೆಯ ಸಚಿವ ಸಂಪುಟ ನಿರ್ಧಾರಕ್ಕೆ ವಿರೋಧ

ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಬೇಸರ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 1:40 IST
Last Updated 19 ನವೆಂಬರ್ 2020, 1:40 IST
ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ತರಲು ಸಂಪುಟದಲ್ಲಿ ಕೈಗೊಂಡಿರುವ ನಿರ್ಧಾರ ಖಂಡಿಸಿ ಹರಪನಹಳ್ಳಿಯಲ್ಲಿ ಜಿಲ್ಲಾ ಹೋರಾಟ ಸಮಿತಿ ಕಾರ್ಯಕರ್ತರು ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದರು
ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ತರಲು ಸಂಪುಟದಲ್ಲಿ ಕೈಗೊಂಡಿರುವ ನಿರ್ಧಾರ ಖಂಡಿಸಿ ಹರಪನಹಳ್ಳಿಯಲ್ಲಿ ಜಿಲ್ಲಾ ಹೋರಾಟ ಸಮಿತಿ ಕಾರ್ಯಕರ್ತರು ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದರು   

ಹರಪನಹಳ್ಳಿ: ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ತರಲು ಸಂಪುಟದಲ್ಲಿ ಕೈಗೊಂಡಿರುವ ನಿರ್ಧಾರಕ್ಕೆ ಹರಪನಹಳ್ಳಿ ತಾಲ್ಲೂಕು ಜಿಲ್ಲಾ ಹೋರಾಟ ಸಮಿತಿ ಕಾರ್ಯಕರ್ತರು ಬುಧವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಹರಪನಹಳ್ಳಿ ಜಿಲ್ಲಾ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರವಾಸಿ ಮಂದಿರದಲ್ಲಿ ತುರ್ತು ಸಭೆ ನಡೆಸಿ, ಬಳಿಕ ಐಬಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ನಿಲುವು ಖಂಡಿಸಿ ತೀವ್ರ ಹೋರಾಟ ಹಮ್ಮಿಕೊಳ್ಳಲು ತೀರ್ಮಾನಿಸಿದರು. ಸುದೀರ್ಘ ಚರ್ಚೆಯ ಬಳಿಕ ಹೋರಾಟದ ರೂಪುರೇಷೆ ತಯಾರಿಸಲು ನ. 19ರಂದು ಬೆಳಿಗ್ಗೆ 10ಕ್ಕೆ ವಿವಿಧ ಸಂಘಟನೆಯ ಮುಖಂಡರ ಸಭೆ ಕರೆಯಲು ನಿರ್ಧರಿಸಿದರು.

ADVERTISEMENT

ಜಿಲ್ಲಾ ಸಮಿತಿ ಸಂಚಾಲಕ ಇದ್ಲಿ ರಾಮಪ್ಪ ಮಾತನಾಡಿ, ‘ಬಳ್ಳಾರಿ ಜಿಲ್ಲಾ ಕೇಂದ್ರದಿಂದ ಪಶ್ಚಿಮ ತಾಲ್ಲೂಕುಗಳಾದ ಹರಪನಹಳ್ಳಿ, ಹೂವಿನ ಹಡಗಲಿ, ಕೂಡ್ಲಿಗಿ, ಕೊಟ್ಟೂರು, ಹಗರಿ ಬೊಮ್ಮನಹಳ್ಳಿಗಳನ್ನು ಒಳಗೊಂಡು ಹರಪನಹಳ್ಳಿ ಜಿಲ್ಲೆ ಮಾಡಲು ಈ ಹಿಂದೆ ಮನವಿ ಸಲ್ಲಿಸಿ, ವಿವಿಧ ಬಗೆಯ ಹೋರಾಟ ಮಾಡಿ ಮುಖ್ಯಮಂತ್ರಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗಿತ್ತು. ಆದರೆ ಬಿ.ಎಸ್. ಯಡಿಯೂರಪ್ಪ ಅವರು ಗಣಿ ಹಗರಣದಲ್ಲಿ ಸಿಲುಕಿರುವ ಆನಂದ್‍ ಸಿಂಗ್ ಅವರನ್ನು ಓಲೈಸಲು ವಿಜಯನಗರ ಜಿಲ್ಲೆ ಘೋಷಣೆಗೆ ಹುಚ್ಚು ನಿರ್ಧಾರ ಕೈಗೊಂಡಿದ್ದಾರೆ’ ದೂರಿದರು.

ಹರಪನಹಳ್ಳಿ ಜಿಲ್ಲೆ ರಚನೆಗೆ ಪ್ರಯತ್ನ ಪಡದೇ ನೆಪ ಮಾತ್ರಕ್ಕೆ ವಿರೋಧಿಸುತ್ತಿರುವ ಶಾಸಕರಾದ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಸಹೋದರರು ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೀದಿಗಿಳಿದು ಪ್ರತಿಭಟಿಸಬೇಕು. ಬಳ್ಳಾರಿ, ಹೊಸಪೇಟೆ ನಗರಗಳು ಸಮಾನ ದೂರದಲ್ಲಿವೆ ಎಂಬ ವೈಜ್ಞಾನಿಕ ಸತ್ಯವನ್ನು ಮರೆಮಾಚಿ, ಹೊಸಪೇಟೆಗೆ ಜಿಲ್ಲಾ ಸ್ಥಾನಮಾನ ಕೊಟ್ಟಿದ್ದಾರೆ. ಇದಕ್ಕೆ ಪಶ್ಚಿಮ ತಾಲ್ಲೂಕಿನ ಜನರ ಸಹಮತವಿಲ್ಲ. ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದರು. ಸಭೆಯಲ್ಲಿ ಹೊಸಳ್ಳಿ ಮಲ್ಲೇಶ್, ಚಂದ್ರನಾಯ್ಕ, ಗೋಣೆಪ್ಪ, ಗುಡಿಹಳ್ಳಿ ಹಾಲೇಶ್, ಸಂದೇರ ಮತ್ತಿತರರು ಪಾಲ್ಗೊಂಡಿದ್ದರು.

ಏಕಾಏಕಿ ನಿರ್ಧಾರ: ಬೇಸರ

ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ನಿರ್ಧರಿಸಿರುವುದು ನನಗೆ ಬೇಸರ ತರಿಸಿದೆ. ಕಳೆದ ಬಾರಿಯ ಶಾಸಕರ ಸಭೆಯಲ್ಲಿ ಸಿ.ಎಂ ಯಡಿಯೂರಪ್ಪ ಅವರು ‘ಹೊಸ ಜಿಲ್ಲೆ ಬಗ್ಗೆ ಸದ್ಯಕ್ಕೆ ನಿರ್ಧಾರ ಕೈಗೊಳ್ಳುವುದಿಲ್ಲ, ಮುಂದೆ ಸಭೆ ನಡೆಸಿ ಅಭಿಪ್ರಾಯ ಪಡೆದು ಘೋಷಣೆ ಮಾಡಲಾಗುವುದು’ ಎಂದು ತಿಳಿಸಿದ್ದರು. ಆದರೆ ನಮ್ಮನ್ನು ಕರೆದು ಮಾತನಾಡದೇ ಏಕಾಏಕಿ ನಿರ್ಧಾರ ಕೈಗೊಂಡಿದ್ದಾರೆ. ಜಿಲ್ಲಾ ಕೇಂದ್ರದಿಂದ ದೂರ ಇರುವ ಹರಪನಹಳ್ಳಿಯನ್ನು ಜಿಲ್ಲೆ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಶೀಘ್ರ ಸಿಎಂ ಅವರನ್ನು ಭೇಟಿ ಮಾಡುತ್ತೇನೆ.

– ಜಿ.ಕರುಣಾಕರ ರೆಡ್ಡಿ, ಶಾಸಕ, ಹರಪನಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.