ADVERTISEMENT

KREIS: ಅನಾಥ ಮಕ್ಕಳಿಗೆ ಇನ್ನು ‘ಕ್ರೈಸ್‌’ ಆಸರೆ

6ನೇ ತರಗತಿಗೆ ಪ್ರವೇಶ ಪಡೆದರೆ 12ನೇ ತರಗತಿಯವರೆಗೆ ಉಚಿತ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 5:39 IST
Last Updated 18 ಫೆಬ್ರುವರಿ 2025, 5:39 IST
ಎಚ್.ಸಿ. ಮಹದೇವಪ್ಪ 
ಎಚ್.ಸಿ. ಮಹದೇವಪ್ಪ    

ಬಳ್ಳಾರಿ: ತಂದೆ ತಾಯಿಯರಿಲ್ಲದ ಅನಾಥ ಮಕ್ಕಳು ಭಿಕ್ಷಾಟನೆಯಂಥ ಶೋಷಣೆಗೆ ಈಡಾಗುವುದನ್ನು ತ‍ಪ್ಪಿಸಲು ಮುಂದಾಗಿರುವ ಸಮಾಜ ಕಲ್ಯಾಣ ಇಲಾಖೆ, ಅವರನ್ನು ‘ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್‌)’ದ ವಸತಿ ಶಾಲೆಗಳಿಗೆ ನೇರವಾಗಿ ಸೇರಿಸಿಕೊಳ್ಳಲು ತೀರ್ಮಾನಿಸಿದೆ. 

ಈ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾ.ಮಣಿವಣ್ಣನ್‌ ಫೆ.12ರಂದು ‘ಕ್ರೈಸ್‌’ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. 

‘ಅನಾಥ ಮಕ್ಕಳನ್ನು ಭಿಕ್ಷಾಟನೆ ಮತ್ತು ಇತರೆ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ, ‘ಕ್ರೈಸ್‌’ ಅಧೀನದಲ್ಲಿ ಬರುವ ವಸತಿ ಶಾಲೆಗಳ 6ನೇ ತರಗತಿಗೆ ಮಕ್ಕಳಿಗೆ ನೇರವಾಗಿ ಪ್ರವೇಶಾತಿ ಕಲ್ಪಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆದೇಶಿಸಿದ್ದಾರೆ. 

ADVERTISEMENT

‘ಕ್ರೈಸ್‌ ವಸತಿ ಶಾಲೆಗಳಿಗೆ ಶನಿವಾರವಷ್ಟೇ ಪ್ರವೇಶ ಪರೀಕ್ಷೆ ನಡೆದಿದೆ. ಆದರೂ, ಅನಾಥ ಮಕ್ಕಳಿಗೆ ಯಾವುದೇ ಪ್ರವೇಶ ಪರೀಕ್ಷೆ ಇರದು. ಯಾವಾಗ ಬೇಕಾದರೂ ಈ ಮಕ್ಕಳಿಗೆ ಪ್ರವೇಶ ಕೊಡಲಾಗುತ್ತದೆ’ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  

ಕ್ರೈಸ್‌ ಅಧೀನದ ವಸತಿ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯ, ನೋಟ್ ಪುಸ್ತಕ, ಲೇಖನ ಸಾಮಗ್ರಿ, ಶೂ, ಸಾಕ್ಸ್, ಟೈ–ಬೆಲ್ಟ್, ಶುಚಿ ಸಂಭ್ರಮ ಕಿಟ್, ಶಾಲಾ ಬ್ಯಾಗ್‌ಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಜತೆಗೆ, ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುತ್ತದೆ. 

ಇಲಾಖೆ ಸೂಚನೆಯಂತೆ ಅನಾಥ ಮಕ್ಕಳು ಒಂದು ಬಾರಿ 6ನೇ ತರಗತಿಗೆ ಪ್ರವೇಶ ಪಡೆದರೆ, 12ನೇ ತರಗತಿಯವರೆಗೆ ಉಚಿತ ಶಿಕ್ಷಣ ಪಡೆಯುವ ಅವಕಾಶ ಸಿಗಲಿದೆ. 

ಕ್ರೈಸ್‌ ಅಡಿಯಲ್ಲಿ ರಾಜ್ಯದಾದ್ಯಂತ 833 ವಶತಿ ಶಾಲೆ, ಕಾಲೇಜುಗಳಿವೆ. ಇದರಲ್ಲಿ ಪರಿಶಿಷ್ಟ ಜಾತಿಯ 503, ಪ.ಪಂಗಡ–156, ಹಿಂದುಳಿದ ವರ್ಗ–174 ಸಂಸ್ಥೆಗಳಿವೆ.

ಬಳ್ಳಾರಿ ಘಟನೆ ಸಚಿವರಿಗೆ ಪ್ರೇರಣೆ  

ಬಳ್ಳಾರಿ ಹೊಸ ಬಸ್‌ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿಯೊಬ್ಬಳ ಫೋಟೊವನ್ನು ಮುಕ್ಕಣ್ಣ ಎಂಬ ಟ್ವಿಟರ್‌ ಬಳಕೆದಾರರೊಬ್ಬರು ಟ್ವಿಟರ್‌ನಲ್ಲಿ ಫೆ.6ರಂದು ರಾತ್ರಿ 8.48ರ ಸುಮಾರಿನಲ್ಲಿ ಪೋಸ್ಟ್‌ ಮಾಡಿದ್ದರು. ಬಾಲಕಿಯೊಂದಿಗೆ ಆಕೆಯ ಸೋದರಿಯೂ ಇರುವುದನ್ನು ಅವರು ತಿಳಿಸಿದ್ದರು.

ಪೋಸ್ಟ್‌ ಗಮನಿಸಿದ್ದ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌ ಮಕ್ಕಳನ್ನು ರಕ್ಷಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡಿದ್ದರು. ರಾತ್ರಿ ಇಡೀ ಹುಡುಕಾಟ ನಡೆಸಿದ್ದ ಅಧಿಕಾರಿಗಳು ಮರುದಿನ ಬೆಳಗ್ಗೆ 11 ಗಂಟೆಗೆ ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಅವರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿತ್ತು.

‘ಈ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ ಗಮನಿಸಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಸಿ ಮಹದೇವಪ್ಪ ‘ಮಕ್ಕಳು ಶಾಲೆಗಳಲ್ಲಿರಬೇಕೇ ಹೊರತು ಭಿಕ್ಷಾಟನೆ ಮಾಡಬಾರದು. ಅನಾಥ ಮಕ್ಕಳಿಗೆ ಕ್ರೈಸ್‌ ಅಡಿ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ನೇರ ಪ್ರವೇಶ ನೀಡಬೇಕು’ ಎಂದು ಸೂಚಿಸಿದ್ದಾಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವರದಿ ಆಧರಿಸಿ ಸಚಿವರು ನೀಡಿದ ಸೂಚನೆ ಮೇರೆಗೆ ಸದ್ಯ ಈ ಆದೇಶ ಹೊರಡಿಸಲಾಗಿದೆ’ ಎಂದು ಅವರು ಖಚಿತಪಡಿಸಿದ್ದಾರೆ.

ಭಿಕ್ಷಾಟನೆ ಮಾಡಿಕೊಂಡಿರುವ ಮಕ್ಕಳನ್ನು ನಮ್ಮ ವಸತಿ ಶಾಲೆಗೆ ಸೇರಿಸಿ ಅವರಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಸಂಪನ್ಮೂಲವಾಗಿಸುವುದು ನಮ್ಮ ಸರ್ಕಾರದ ಉದ್ದೇಶ.
ಡಾ ಎಚ್. ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ
ಇಬ್ಬರು ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಿಸಿದ್ದರ ಕುರಿತು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ವರದಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.