ಕೂಡ್ಲಿಗಿ: ‘ನಾವೆಲ್ಲ ರಾಜಕಾರಣದಲ್ಲಿದ್ದು, ರಾಜ್ಯದಾದ್ಯಂತ ಕಮಲ ಅರಳಬೇಕು ಎಂಬುದು ನಮ್ಮ ಗುರಿಯಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 160 ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ಕಾರಣಕ್ಕೆ ಪಾದಯಾತ್ರೆ ಕೈಗೊಳ್ಳುತ್ತಿದ್ದೇವೆ’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಪಟ್ಟಣದಲ್ಲಿ ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕೊಟ್ಟೂರಿಗೆ ಕೈಗೊಂಡ ಪಾದಯಾತ್ರೆ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉತ್ತಮ ಮಳೆಯಾಗಿ ಬೆಳೆ ಬರಬೇಕು, ಇದರಿಂದ ಕ್ಷೇತ್ರದಲ್ಲಿನ ಜನತೆಗೆ ಒಳ್ಳೆಯದಾಗಬೇಕು. ಅದರಲ್ಲೂ ನಮ್ಮ ರಾಜಕಾರಣ ಕೂಡ ಇದ್ದು, ಮುಂದಿನ ದಿನಗಳಲ್ಲಿ ಒಳ್ಳೆಯದಾಬೇಕು ಎಂಬ ಕಾರಣಕ್ಕೆ ಪಾದಯಾತ್ರೆ ಮಾಡುತ್ತಿದ್ದೇವೆ’ ಎಂದರು.
‘ನನಗೆ 30 ವರ್ಷಗಳ ರಾಜಕಾರಣದಲ್ಲಿ ಬೇರೆ ಬೇರೆ ರೀತಿಯ ಪಾದಯಾತ್ರೆಯ ಅನುಭವವಿದೆ. ಆದರೆ, ಮುಂದಿನ ದಿನಗಳಲ್ಲಿ ನಿಮ್ಮ ಸಂಕಲ್ಪ ಕೈಗೂಡುತ್ತಿದೆ ಎಂದು ಹಲವಾರು ಜನರು ಹೇಳಿದ್ದರಿಂದ ಇದೇ ಮೊದಲ ಬಾರಿಗೆ ಕೊಟ್ಟೂರೇಶ್ವರ ರಥೋತ್ಸವದ ಪಾದಯಾತ್ರೆ ಕೈಗೊಳ್ಳಲಾಗಿದೆ. ಕೊಟ್ಟೂರೇಶ್ವರ ಸಾನ್ನಿಧ್ಯದಲ್ಲಿ ಆರ್ಶೀವಾದ ಪಡೆದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು ಸಂಕಲ್ಪ ಹೊಂದಲಾಗಿದೆ’ ಎಂದು ಹೇಳಿದರು.
‘ಲಕ್ಷಾಂತರ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಅವರಲ್ಲಿ ನಾನು ಹಾಗೂ ಸೂರ್ಯಪಾಪಣ್ಣ ಕೂಡ ಇಬ್ಬರು. ಅವರವರ ಸಮಯಕ್ಕೆ ತಕ್ಕಂತೆ ಯಾತ್ರೆ ಕೈಗೊಳ್ಳುತ್ತಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ’ ಎಂದರು.
‘ತಾಲ್ಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಕುರಿತು ಯಾತ್ರೆ ಕೈಗೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಎನ್.ವೈ. ಗೋಪಾಲಕೃಷ್ಣ ಶಾಸಕರಾಗಿದ್ದಾಗ, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ ಮಾಡಿದ್ದರು. ಆದರಲ್ಲಿ ಶೇ 95ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೇ 5ರಷ್ಟು ಮಾತ್ರ ಬಾಕಿ ಇದೆ. ಬೇರೆ ಬೇರೆ ಕಾರಣಗಳಿಂದ ಸರ್ಕಾರ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನಾನು ಯಾರನ್ನೂ ಟೀಕಿಸುವುದಿಲ್ಲ. ಕೆರೆಗೆ ನೀರು ತುಂಬಿಸುವ ವಿಚಾರಕ್ಕೆ ಮೊದಲ ಆದ್ಯತೆ ಸಿಗಬೇಕು. ಈ ವಿಷಯ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ, ಒತ್ತಾಯದ ಮನವಿ ಮಾಡುತ್ತೇನೆ. ಅದು ಸಾಧ್ಯವಾಗದೆ ಹೋದರೆ ಮುಂದಿನ ಯೋಜನೆ ರೂಪಿಸಲಾಗಿವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.