ADVERTISEMENT

ಜನಸಾಮಾನ್ಯರ ಪರಿಷತ್ತು ಮಾಡುವೆ: ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 15:34 IST
Last Updated 7 ಜನವರಿ 2021, 15:34 IST
ಹೊಸಪೇಟೆಯಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ದೂರದರ್ಶನ ಚಂದನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಮಹೇಶ ಜೋಶಿ ಅವರನ್ನು ವಿಜಯನಗರ ಕಾಲೇಜಿನ ಪ್ರಾಚಾರ್ಯ ವಿ.ಎಸ್‌. ಪ್ರಭಯ್ಯ ಸತ್ಕರಿಸಿದರು. ಮೃತ್ಯುಂಜಯ ರುಮಾಲೆ, ಲಿಂಗಾರೆಡ್ಡಿ ಇದ್ದಾರೆ
ಹೊಸಪೇಟೆಯಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ದೂರದರ್ಶನ ಚಂದನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಮಹೇಶ ಜೋಶಿ ಅವರನ್ನು ವಿಜಯನಗರ ಕಾಲೇಜಿನ ಪ್ರಾಚಾರ್ಯ ವಿ.ಎಸ್‌. ಪ್ರಭಯ್ಯ ಸತ್ಕರಿಸಿದರು. ಮೃತ್ಯುಂಜಯ ರುಮಾಲೆ, ಲಿಂಗಾರೆಡ್ಡಿ ಇದ್ದಾರೆ   

ಹೊಸಪೇಟೆ: ‘ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಾನು ಗೆದ್ದರೆ ನನ್ನ ಅವಧಿಯಲ್ಲಿ ಪರಿಷತ್‌ ಅನ್ನು ಜನಸಾಮಾನ್ಯರ ಪರಿಷತ್ತು ಮಾಡುವೆ’ ಎಂದು ದೂರದರ್ಶನ ಚಂದನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಮಹೇಶ ಜೋಶಿ ಭರವಸೆ ನೀಡಿದರು.

ಇಲ್ಲಿನ ವಿಜಯನಗರ ಕಾಲೇಜಿನಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಸೇವಾಕಾಂಕ್ಷಿ. ನಿವೃತ್ತಿ ಹೊಂದಿದ ನಂತರ ಪುನರ್ವಸತಿಗಾಗಿ ಈ ಕ್ಷೇತ್ರಕ್ಕೆ ಬರುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ರಾಜಕೀಯ ಕ್ಷೇತ್ರಕ್ಕೆ ಬರುವಂತೆ ನನ್ನ ಮೇಲೆ ಸಾಕಷ್ಟು ಒತ್ತಡವಿತ್ತು. ಆದರೆ, ಅದನ್ನು ನಾನು ನಿರಾಕರಿಸಿದೆ. ಕನ್ನಡದ ಸೇವೆ ಮಾಡಬೇಕೆಂದು ಮನಸ್ಸು ಬಯಸಿದೆ. ಹಾಗಾಗಿ ಸ್ಪರ್ಧೆಗೆ ಮನಸ್ಸು ಮಾಡಿರುವೆ. ಎಲ್ಲರ ಬೆಂಬಲ ಯಾಚಿಸಲು ಇಲ್ಲಿಗೆ ಬಂದಿರುವೆ’ ಎಂದು ಹೇಳಿದರು.

ADVERTISEMENT

‘ಸಾಹಿತ್ಯ ಪರಿಷತ್ತು ಜನಪರ ಆಗಬೇಕು ಎನ್ನುವುದು ನನ್ನ ಬಯಕೆ. ಒಂದುವೇಳೆ ಬರುವ ಚುನಾವಣೆಯಲ್ಲಿ ನಾನು ಗೆದ್ದರೆ, ಪರಿಷತ್ತಿನ ಸದಸ್ಯತ್ವದ ಶುಲ್ಕ ₹500ರಿಂದ ₹250ಕ್ಕೆ ಇಳಿಸುವೆ. ಯುವಕರ ಪಾಲ್ಗೊಳ್ಳುವಿಕೆಗೆ ಹೆಚ್ಚಿನ ಕಾರ್ಯಕ್ರಮ ರೂಪಿಸುವೆ. ಶಾಲಾ, ಕಾಲೇಜುಗಳಲ್ಲಿ ಕನ್ನಡ ಕಾರ್ಯಕ್ರಮ ಸಂಘಟಿಸುವೆ. ಆ್ಯಪ್‌ ಮೂಲಕ ಸದಸ್ಯತ್ವ ಪಡೆಯುವುದು, ಸ್ಮಾರ್ಟ್‌ ಕಾರ್ಡ್‌ ಪರಿಚಯಿಸಲಾಗುವುದು. ಸರ್ಕಾರಿ ಶಾಲೆಗಳನ್ನು ಉಳಿಸಲು ಶ್ರಮಿಸುವೆ’ ಎಂದು ತಿಳಿಸಿದರು.

‘ಬಳ್ಳಾರಿ ಜಿಲ್ಲೆಯಲ್ಲಿ ಇದುವರಗೆ ಐದು ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗಿವೆ. ಆರು ದಶಕಗಳಿಂದ ಮತ್ತೆ ಸಮ್ಮೇಳನ ನಡೆದಿಲ್ಲ. ಪುನಃ ಇಲ್ಲಿ ಸಮ್ಮೇಳನ ನಡೆಸಲು ಶ್ರಮಿಸುವೆ. ನಗರದಲ್ಲಿ ಕನ್ನಡ ಭವನ ನಿರ್ಮಿಸುವ ಯೋಜನೆ ನನೆಗುದಿಗೆ ಬಿದ್ದಿದ್ದು, ಅದನ್ನು ಪೂರ್ಣಗೊಳಿಸಲು ದುಡಿಯುತ್ತೇನೆ’ ಎಂದರು.

ವಿಜಯನಗರ ಕಾಲೇಜಿನ ಪ್ರಾಚಾರ್ಯ ವಿ.ಎಸ್‌. ಪ್ರಭಯ್ಯ, ಹಿರಿಯ ಪ್ರಾಧ್ಯಾಪಕ ಮೃತ್ಯುಂಜಯ ರುಮಾಲೆ, ಹುಡಾ ಅಧ್ಯಕ್ಷ ಅಶೋಕ ಜೀರೆ, ಲಿಂಗಾರೆಡ್ಡಿ, ಸುಜಾತ ರೇವಣಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.