ADVERTISEMENT

ಹೊಸಪೇಟೆ: ಪುಸ್ತಕಗಳ ಬದಲಿಗೆ ಮಕ್ಕಳಿಗೆ ಪಿಡಿಎಫ್‌

ಎರಡು ತಿಂಗಳಾದರೂ ಶಾಲೆಗೆ ತಲುಪದ ಕನ್ನಡ ಪುಸ್ತಕಗಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 31 ಜುಲೈ 2022, 19:30 IST
Last Updated 31 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸಪೇಟೆ (ವಿಜಯನಗರ): ಶಾಲೆ ಆರಂಭವಾಗಿ ಎರಡು ತಿಂಗಳಾದರೂ ಜಿಲ್ಲೆಯ ಹೆಚ್ಚಿನ ಶಾಲೆಗಳಿಗೆ ಇದುವರೆಗೆ ಕನ್ನಡ ಪಠ್ಯ ಪುಸ್ತಕಗಳೇ ತಲುಪಿಲ್ಲ.

ಮಕ್ಕಳಿಗೆ ಪುಸ್ತಕಗಳು ಸಿಗದ ಕಾರಣ ಅವರು ಮಾತೃಭಾಷೆ ಶಿಕ್ಷಣ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ. ಒಂದರಿಂದ ಹತ್ತನೇ ತರಗತಿ ವರೆಗೆ ಕನ್ನಡ ಭಾಷೆ ಹೊರತುಪಡಿಸಿ ಮಿಕ್ಕುಳಿದ ವಿಷಯಗಳೊಂದಿಗೆ ತರಗತಿಗಳನ್ನು ನಡೆಸಿಕೊಂಡು ಹೋಗಲಾಗುತ್ತಿದೆ. ಮಾತೃಭಾಷೆಯ ಕಲಿಕೆಯಲ್ಲಿ ಮಕ್ಕಳು ಹಿಂದೆ ಬೀಳುತ್ತಿದ್ದಾರೆ. ಇದಕ್ಕೆ ಅಸಮಾಧಾನಗೊಂಡಿರುವ ಮಕ್ಕಳ ಪೋಷಕರು ಶಾಲೆಗಳವರನ್ನು ಮೇಲಿಂದ ಮೇಲೆ ಪ್ರಶ್ನಿಸುತ್ತಿದ್ದಾರೆ. ಪೋಷಕರ ಕೆಂಗಣ್ಣಿನಿಂದ ಪಾರಾಗಲು ಶಾಲಾ ಆಡಳಿತ ಮಂಡಳಿಗಳು ಮಕ್ಕಳ ಪೋಷಕರ ವಾಟ್ಸ್ಯಾಪ್‌ಗಳಿಗೆ ಕನ್ನಡ ಪಠ್ಯದ ಪಿ.ಡಿ.ಎಫ್‌.ಗಳನ್ನು ಕಳುಹಿಸುತ್ತಿದ್ದಾರೆ. ಇದಕ್ಕೆ ಪೋಷಕರು ಮತ್ತಷ್ಟು ಅಸಮಾಧಾನಗೊಂಡಿದ್ದಾರೆ.

‘ಶಾಲೆ ಆರಂಭಗೊಂಡಾಗ ಕನ್ನಡ ಹೊರತುಪಡಿಸಿ ಎಲ್ಲ ಪುಸ್ತಕಗಳನ್ನು ಕೊಟ್ಟಿದ್ದಾರೆ. ಕನ್ನಡ ಯಾವಾಗ ಬರುತ್ತದೆ ಎಂದು ಕೇಳಿದಾಗ ಎರಡು ವಾರಗಳಲ್ಲಿ ಬರುತ್ತದೆ ಎಂದು ಹೇಳಿದ್ದರು. ಎರಡು ತಿಂಗಳಾದರೂ ಬಂದಿಲ್ಲ. ಎಲ್ಲ ವಿಷಯಗಳ ಯುನಿಟ್‌ ಟೆಸ್ಟ್‌ ನಡೆಸಲಾಗುತ್ತಿದೆ. ಕನ್ನಡದಲ್ಲಿ ಮಕ್ಕಳು ಹಿಂದೆ ಬೀಳುತ್ತಿದ್ದಾರೆ. ಈ ಕುರಿತು ಮೇಲಿಂದ ಮೇಲೆ ಕೇಳಿದರೆ ಈಗ ವಾಟ್ಸ್ಯಾಪ್‌ಗೆ ಪಿ.ಡಿ.ಎಫ್‌. ಕಳಿಸಿದ್ದಾರೆ’ ಎಂದು ಶಾಲೆ ವಿದ್ಯಾರ್ಥಿನಿಯ ತಂದೆ ಬಸವರಾಜ ತಿಳಿಸಿದರು.

ADVERTISEMENT

‘ನನ್ನ ಮಗಳು ಒಂದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮೊಬೈಲ್‌ನಲ್ಲಿ ಪಿ.ಡಿ.ಎಫ್‌.ನಲ್ಲಿ ಓದಿಸಲು ಸಾಧ್ಯವಾಗುತ್ತದೆಯೇ? ಮೊದಲೇ ಮಕ್ಕಳ ಮನಸ್ಸು ಚಂಚಲವಾಗಿರುತ್ತದೆ. ಸಣ್ಣ ಪರದೆ ಮೇಲೆ ಏಕಾಗ್ರತೆಯಿಂದ ಓದಲು ಸಾಧ್ಯವಾಗುವುದಿಲ್ಲ. ಕರ್ನಾಟಕದಲ್ಲೇ ಮಾತೃಭಾಷೆ ಪಠ್ಯಕ್ಕೆ ಪರದಾಡುವ ಪರಿಸ್ಥಿತಿ ಬರಬಾರದಿತ್ತು’ ಎಂದು ಹೇಳಿದರು.

‘ನಮ್ಮ ಮಕ್ಕಳು ಆಂಗ್ಲ ಭಾಷೆ ಶಾಲೆಯಲ್ಲಿ ಓದುತ್ತಿರುವುದು ನಿಜ. ಆದರೆ, ಮಾತೃಭಾಷೆ ವಿಷಯವೂ ಆಯ್ಕೆ ಮಾಡಿಕೊಂಡಿದ್ದಾರೆ. ಇಂಗ್ಲಿಷ್‌ ಜೊತೆಗೆ ಕನ್ನಡವೂ ಕಲಿತರೆ ಅವರಲ್ಲಿ ಪ್ರೌಢಿಮೆ, ಭಾಷೆಯ ಮೇಲೆ ಹಿಡಿತ ಬರುತ್ತದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಪಿ.ಡಿ.ಎಫ್‌. ಮೇಲೆ ಕಾಲ ದೂಡುವುದು ಸರಿಯಲ್ಲ. ಮಕ್ಕಳಿಗೆ ಬೇಗ ಕನ್ನಡ ಪಠ್ಯಗಳನ್ನು ಪೂರೈಸಬೇಕು’ ಎಂದು ವಿದ್ಯಾರ್ಥಿಯ ತಾಯಿ ರಾಧಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶೇ 20ರಷ್ಟು ಶಾಲೆಗಳಲ್ಲಿ ಇಲ್ಲ’

‘ಈಗಾಗಲೇ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಪುಠ್ಯ ಪುಸ್ತಕ ಪೂರೈಸಲಾಗಿದೆ. ಶೇ 80ರಷ್ಟು ಖಾಸಗಿ ಶಾಲೆಗಳವರು ನಮ್ಮ ಬಳಿ ಬಂದು ಖರೀದಿಸಿ ತೆಗೆದುಕೊಂಡು ಹೋಗಿದ್ದಾರೆ. ಶೇ 20ರಷ್ಟು ಶಾಲೆಗಳಲ್ಲಿ ಇಲ್ಲ. ಇಲಾಖೆಯಲ್ಲಿ ಪುಸ್ತಕಗಳ ಲಭ್ಯತೆ ಇದ್ದು, ಖಾಸಗಿಯವರು ಬಂದು ಖರೀದಿಸಿ ಕೊಂಡೊಯ್ದು ಮಕ್ಕಳಿಗೆ ಕೊಡಬಹುದು. ಯಾವ ಶಾಲೆಯವರು ಇದುವರೆಗೆ ಪುಸ್ತಕಗಳನ್ನು ಖರೀದಿಸಿಲ್ಲವೋ ಅವರು ವ್ಯವಸ್ಥೆ ಆಗುವವರೆಗೆ ಹಳೆಯ ಪುಸ್ತಕಗಳ ಮೂಲಕ ಮಕ್ಕಳಿಗೆ ಓದಿಸಲು ಸೂಚನೆ ಕೊಡಲಾಗಿದೆ’ ಎಂದು ಡಿ.ಡಿ.ಪಿ.ಐ. ಜಿ. ಕೊಟ್ರೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.