ADVERTISEMENT

ಹಬ್ಬದ ಸಂಭ್ರಮ ಕುಗ್ಗಿಸದ ಬೆಲೆಯೇರಿಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 13:34 IST
Last Updated 6 ಅಕ್ಟೋಬರ್ 2019, 13:34 IST
ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತದಲ್ಲಿ ಭಾನುವಾರ ಜನ ಹೂ, ಹಣ್ಣು ಸೇರಿದಂತೆ ಹಬ್ಬಕ್ಕೆ ಅಗತ್ಯವಾದ ವಸ್ತುಗಳನ್ನು ಖರೀದಿಸಿದರು–ಪ್ರಜಾವಾಣಿ ಚಿತ್ರ
ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತದಲ್ಲಿ ಭಾನುವಾರ ಜನ ಹೂ, ಹಣ್ಣು ಸೇರಿದಂತೆ ಹಬ್ಬಕ್ಕೆ ಅಗತ್ಯವಾದ ವಸ್ತುಗಳನ್ನು ಖರೀದಿಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಆಯುಧಪೂಜೆ, ವಿಜಯದಶಮಿ ಹಬ್ಬದ ಪ್ರಯುಕ್ತ ಭಾನುವಾರ ದಿನವಿಡೀ ಮಾರುಕಟ್ಟೆಯಲ್ಲಿ ಜನ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಹೂ, ಹಣ್ಣು, ಕಾಯಿ, ಬಾಳೆದಿಂಡು, ಬೂದುಗುಂಬಳಕಾಯಿ, ತರಕಾರಿ, ತಳಿರು ತೋರಣ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬಂತು.ನಗರದ ಮಹಾತ್ಮ ಗಾಂಧಿ ವೃತ್ತ, ಮೇನ್‌ ಬಜಾರ್‌, ಸೋಗಿ ಮಾರುಕಟ್ಟೆ, ರಾಮ ಟಾಕೀಸ್‌, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಭಾನುವಾರ ದಿನವಿಡೀ ಜನದಟ್ಟಣೆ ಕಂಡು ಬಂತು.

ಹಬ್ಬದ ಹಿನ್ನೆಲೆಯಲ್ಲಿ ಹೂ, ಹಣ್ಣು ಹಾಗೂ ತರಕಾರಿಗಳ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಆದರೆ, ಹಬ್ಬದ ಸಂಭ್ರಮ ಅದು ಜನರ ಲೆಕ್ಕಕ್ಕೆ ಬಂದಿಲ್ಲ.

ADVERTISEMENT

ಇನ್ನೊಂದೆಡೆ ಕಾಲೇಜು ರಸ್ತೆ, ಕೌಲ್‌ಪೇಟೆ, ರಾಣಿಪೇಟೆಯಲ್ಲಿ ಅಲಂಕಾರಿಕ ವಸ್ತುಗಳ ಖರೀದಿ, ಹೊಸ ಬಟ್ಟೆಗಳನ್ನು ಖರೀದಿಸುತ್ತಿರುವ ದೃಶ್ಯ ಕಂಡು ಬಂತು. ಹಬ್ಬಕ್ಕೆ ಒಂದೇ ದಿನ ಬಾಕಿ ಉಳಿದಿರುವುದರಿಂದ ವ್ಯಾಪಾರಿಗಳು ಚೌಕಾಸಿಗೆ ಅವಕಾಶ ಮಾಡಿಕೊಡದೆ ಅವರ ಹೇಳಿದ ಬೆಲೆಗೆ ಮಾರಾಟ ಮಾಡಿದರು.

ವಾರದ ಹಿಂದೆಸೇಬಿನ ಬೆಲೆ ₹70ರಿಂದ ₹80 ಇತ್ತು. ಈಗ ಅದು ₹90ರಿಂದ ₹100ಕ್ಕೆ ಏರಿಕೆಯಾಗಿದೆ. ಕಿತ್ತಳೆ ₹90ರಿಂದ ₹100, ದಾಳಿಂಬೆ ₹80 ರಿಂದ ₹90, ದ್ರಾಕ್ಷಿ ₹80ರಿಂದ ₹90, ಪೇರಲ ₹60ರಿಂದ ₹80, ಸೀತಾಫಲ ₹60ರಿಂದ ₹70, ಏಲಕ್ಕಿ ಬಾಳೆಹಣ್ಣು ₹60ರಿಂದ ₹80 ಕೆ.ಜಿ., ಮಧ್ಯಮ ಗಾತ್ರದ ತೆಂಗಿನಕಾಯಿ ₹20 ಬೆಲೆಗೆ ಮಾರಾಟ ಮಾಡಿದರು.

ಚೆಂಡು ಹೂ, ಸೇವಂತಿ, ಗುಲಾಬಿ, ಮಲ್ಲಿಗೆ ಸೇರಿದಂತೆ ಎಲ್ಲ ಬಗೆಯ ಹೂಗಳ ಬೆಲೆ ಎಂದಿಗಿಂತ ₹15ರಿಂದ ₹20 ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರು. ಪ್ರತಿ ಕೆ.ಜಿ. ಸೇವಂತಿ ಹೂ ₹250ರಿಂದ ₹260, ಗುಲಾಬಿ ₹220ರಿಂದ ₹230, ಚೆಂಡು ಹೂ ₹130ರಿಂದ ₹150 ಇತ್ತು.

‘ತರಕಾರಿ, ಹಣ್ಣು, ಹೂ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ, ವರ್ಷಕ್ಕೊಮ್ಮೆ ಹಬ್ಬ ಬರುವುದರಿಂದ ಯಾವುದೇ ರೀತಿಯ ಕೊರತೆ ಆಗದಂತೆ ಅನಿವಾರ್ಯವಾಗಿ ಖರೀದಿಸಿದ್ದೇವೆ. ವ್ಯಾಪಾರಿಗಳಿಗೂ ಈ ವಿಷಯ ಚೆನ್ನಾಗಿ ಗೊತ್ತಿರುವುದರಿಂದ ಅವರು ಯಾವುದೇ ಕಾರಣಕ್ಕೂ ಬೆಲೆ ಕಡಿಮೆ ಮಾಡುವುದಿಲ್ಲ. ಇದೇ ಸಂದರ್ಭವೆಂದು ಸ್ವಲ್ಪ ಬೆಲೆ ಹೆಚ್ಚಿಸಿರುತ್ತಾರೆ’ ಎಂದು ಬಸವೇಶ್ವರ ಬಡಾವಣೆಯ ರಾಜಶ್ರೀ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.