ADVERTISEMENT

ಶಿಕ್ಷಣದ ಕೇಸರೀಕರಣ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಮೇ 2022, 13:47 IST
Last Updated 25 ಮೇ 2022, 13:47 IST
ಪಿಎಫ್‌ಐ ಕಾರ್ಯಕರ್ತರು ಬುಧವಾರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು
ಪಿಎಫ್‌ಐ ಕಾರ್ಯಕರ್ತರು ಬುಧವಾರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ಪಠ್ಯ ಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಕ್ಯಾಂಪಸ್‌ ಫ್ರಂಟ್‌ ಆಪ್‌ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ್‌ ಬಲಿರಾಮ್‌ ಹೆಡಗೇವಾರ್‌ ಅವರ ಭಾಷಣವನ್ನು ಹತ್ತನೇ ತರಗತಿಯ ಪಠ್ಯಕ್ರಮದಲ್ಲಿ ಸೇರಿಸಿರುವುದು ಶಿಕ್ಷಣದ ಕೇಸರೀಕರಣದ ಭಾಗ. ದೇಶದಾದ್ಯಂತ ನರಮೇಧ ನಡೆಸಿ, ಅನೇಕ ಸಲ ನಿಷೇಧಕ್ಕೆ ಒಳಗಾಗಿರುವ ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್‌ ಆದರ್ಶ ಪುರುಷರಾಗಲು ಹೇಗೆ ಸಾಧ್ಯ? ಉದ್ದೇಶಪೂರ್ವಕವಾಗಿ ಅವರ ಭಾಷಣ ಪಠ್ಯಕ್ರಮದಲ್ಲಿ ಸೇರಿಸುವುದಕ್ಕಾಗಿಯೇ ರೋಹಿತ್‌ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ಅರಿತು ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಕಲಿಕೆ, ವಿದ್ಯೆಯನ್ನು ನೀಡಬೇಕು. ಹಿಂದೂ ರಾಷ್ಟ್ರವೆಂದು ಸಂವಿಧಾನಕ್ಕೆ ಅಪಚಾರವೆಸಗುವ ದೇಶವಿರೋಧಿ ಆಲೋಚನೆ ಹೊಂದಿದ್ದ ವ್ಯಕ್ತಿಗಳ ಭಾಷಣಗಳನ್ನು ಪಠ್ಯದಲ್ಲಿ ಸೇರಿಸಿರುವುದು ಸ್ವಾತಂತ್ರ್ಯ ಹೋರಾಟಗಾರರರಿಗೆ ಅಪಮಾನ ಮಾಡಿದಂತಿದೆ. ಇದು ದೇಶದ್ರೋಹದ ನಡೆಯಾಗಿದೆ. ಕೂಡಲೇ ಪಠ್ಯದಿಂದ ಅದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ADVERTISEMENT

ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಲ್ತಾಫ್, ಜಿಲ್ಲಾ ಅಧ್ಯಕ್ಷ ಸೊಹೆಲ್, ಜಿಲ್ಲಾ ಕಾರ್ಯದರ್ಶಿ ಫೈಜ್, ಜಿಲ್ಲಾ ಸಮಿತಿ ಸದಸ್ಯ ಶೇಕ್ಷಾವಲಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.