ADVERTISEMENT

ಪೋಲಿಯೊ ಲಸಿಕೆಯಿಂದ ಮಕ್ಕಳು ವಂಚಿತರಾಗದಿರಲಿ

ಅಧಿಕಾರಿಗಳೊಂದಿಗೆ ಸಭೆ: ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 4:29 IST
Last Updated 24 ಫೆಬ್ರುವರಿ 2024, 4:29 IST
<div class="paragraphs"><p> ಪೋಲಿಯೊ ಲಸಿಕೆ</p></div>

ಪೋಲಿಯೊ ಲಸಿಕೆ

   

ಬಳ್ಳಾರಿ: ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವನ್ನು ಮಾರ್ಚ್ 3ರಂದು ಆಯೋಜಿಸಲಾಗಿದ್ದು, ಯಾವುದೇ ಅರ್ಹ ಮಕ್ಕಳು ಲಸಿಕೆಯಿಂದ ವಂಚಿತರಾಗಬಾರದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ADVERTISEMENT

‘ಪಲ್ಸ್ ಪೋಲಿಯೊ ಲಸಿಕಾ ಅಭಿಯಾನದಲ್ಲಿ ಎಲ್ಲ ಇಲಾಖೆಗಳ ಪಾತ್ರ ಮುಖ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಲಸಿಕೆ ಕಾರ್ಯಕ್ರಮ 2022ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದ್ದು, ಈ ಬಾರಿಯೂ ಶೇ.100 ಪ್ರಗತಿ ಸಾಧಿಸಲು ಶ್ರಮಿಸಬೇಕು’ ಎಂದು ತಿಳಿಸಿದರು.

ಪಲ್ಸ್ ಪೋಲಿಯೊ ಲಸಿಕೆ ಸುರಕ್ಷಿತವಾಗಿಡಲು ಹಾಗೂ ಶೀತಲ ಪ್ಯಾಕ್‍ಗಳನ್ನು ತಯಾರಿಸಲು ನಿರಂತರ ವಿದ್ಯುಚ್ಛಕ್ತಿ ಅಗತ್ಯ. ಮಾ.1ರಿಂದ 6 ರವರೆಗೆ ನಗರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ವಿದ್ಯುತ್‌ ಅನ್ನು ನಿರಂತರವಾಗಿ ಸರಬರಾಜು ಮಾಡಬೇಕು ಎಂದು ಕೆಪಿಟಿಸಿಎಲ್ ಅಧಿಕಾರಿಗಳಿಗೆ ತಿಳಿಸಿದರು.

ಪಲ್ಸ್ ಪೋಲಿಯೊ ಕಾರ್ಯಕ್ರಮದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಥಾ ಏರ್ಪಡಿಸಬೇಕು. ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ 5 ವರ್ಷದೊಳಗಿನ ಮಕ್ಕಳಿದ್ದಲ್ಲಿ ಲಸಿಕೆ ಹಾಕಲು ಪೋಷಕರಿಗೆ ಪ್ರೇರೇಪಿಸಬೇಕು. ಈ ಕುರಿತು ಡಿಡಿಪಿಐ ಮತ್ತು ಬಿಇಒಗಳು ಮುತುವರ್ಜಿ ವಹಿಸಬೇಕು ಎಂದರು.

ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಲಸಿಕೆ ನೀಡುವ ಸ್ಥಳ ಹಾಗೂ ದಿನಾಂಕವನ್ನು ಕರಪತ್ರದಲ್ಲಿ ಮುದ್ರಿಸಿ ಪ್ರಚಾರ ಕೈಗೊಳ್ಳಬೇಕು. ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಭಾಗವಹಿಸಬೇಕು. ಸ್ತ್ರೀ-ಶಕ್ತಿ ಗುಂಪುಗಳ ಪದಾಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸೂಚಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅನೀಲ್ ಕುಮಾರ್ ಮಾತನಾಡಿ, ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಮೊದಲನೇ ಹಂತ ಫೆ.24ರಂದು (ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ), ಎರಡನೇ ಹಂತ ಫೆ.27 ರಂದು (6-19 ಮಕ್ಕಳಿಗೆ ಶಾಲೆ ಮತ್ತು ಕಾಲೇಜು ಮಕ್ಕಳಿಗೆ) ಮತ್ತು ಮೂರನೇಯ ಹಂತ ಮಾ.08 ರಂದು(1 ರಿಂದ 5 ವರ್ಷದ ಮಕ್ಕಳು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ) ಜಂತು ಹುಳು ನಿವಾರಣಾ ಮಾತ್ರೆ (ಆಲ್ಬಂಡೋಜೋಲ್) ಮಾತ್ರೆಗಳನ್ನು ವಿತರಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನದ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.