
ಮರಿಯಮ್ಮನಹಳ್ಳಿ: ವಿವಿಧ ಬೇಡಿಕೆ ಈಡೇರಿಕೆಗಾಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಕಲಬುರಗಿ ಜಿಲ್ಲೆಯ ಕರದಾಳದಿಂದ ಬೆಂಗಳೂರುವರೆಗೆ ಹಮ್ಮಿಕೊಂಡ 41ದಿನಗಳ ಕಾಲ 700ಕಿ.ಮೀಗಳ ಪಾದಯಾತ್ರೆ ಭಾನುವಾರ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ಈಡಿಗ ಸಮಾಜದವರು ಸ್ವಾಗತಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಣವಾನಂದ ಸ್ವಾಮೀಜಿ, ರಾಜ್ಯದಲ್ಲಿ 40ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜದ ಕುಲಕಸಬನ್ನು ಸ್ಥಗಿತ ಮಾಡಿರುವುದರಿಂದ ಸಮಾಜ ಹಿಂದುಳಿಯಲು ಕಾರಣವಾಗಿದ್ದು, ವಿವಿಧ ರಾಜ್ಯಗಳಲ್ಲಿ ಸೇಂದಿ ಮಾರಾಟ ಇದೆ. ರಾಜ್ಯದಲ್ಲಿ ಮಂಗಳೂರು, ಉಡುಪಿಯಲ್ಲಿದ್ದು, ಉಳಿದ ಜಿಲ್ಲೆಗಳಲ್ಲಿ ಸ್ಥಗಿತ ಮಾಡಿದ್ದಾರೆ. ಈಡಿಗ ಸಮಾಜದವರ ಹಣಕಾಸಿನ ಆದಾಯ ಮೂಲವನ್ನು ನಿಲ್ಲಿಸಬೇಕೆಂದು ಮಲ್ಲಿಕಾರ್ಜುನ ಖರ್ಗೆ, ದಿವಂಗತ ಧರ್ಮಸಿಂಗ್ ಸೇರಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೇರಿಕೊಂಡು ಮಾಡಿರುವಂತ ರಾಜಕೀಯದ ಹುನ್ನಾರದ ಭಾಗವಾಗಿ ಈ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ₹500ಕೋಟಿ ರೂಪಾಯಿ ನೀಡುವುದು, ಈಗಿರುವ 2ಎಯಿಂದ ಎಸ್‍ಟಿ ಮೀಸಲಾತಿಗೆ ಸೇರ್ಪಡೆ ಸೇರಿದಂತೆ 18 ಬೇಡಿಕೆಗಳನಿಟ್ಟುಕೊಂಡು ಆರಂಭವಾದ ಪಾದಯಾತ್ರೆ 20ನೇ ದಿನಕ್ಕೆ ಕಾಲಿಟ್ಟಿದೆ ಎಂದರು.
ಕಾಂಗ್ರೆಸ್‍ನಲ್ಲಿ ಸಚಿವರು ಸೇರಿದಂತೆ 6ಜನ ಶಾಸಕರು ಹಾಗೂ ಬಿಜೆಪಿಯಲ್ಲಿ ಮೂವರು ಶಾಸಕರಿದ್ದರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ಆ ಶಾಸಕರೆಲ್ಲರೂ ಸಮಾಜದ ಸಮಸ್ಯೆಗಳನ್ನ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ, ಬಗೆಹರಿಸಿಲ್ಲ ಅಂದರೆ, ಅವರ ವಿರುದ್ಧ ಅವರ ಕ್ಷೇತ್ರದಲ್ಲಿ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಂಡು, ಅವರ ರಾಜಕೀಯ ನಾಟಕಗಳನ್ನು ನಿಲ್ಲಿಸುವ ಕೆಲಸ ಮಾಡುತ್ತೇನೆ ಎಂದರು.
ಮಠಾಧೀಶರನ್ನು ಸೊಂಬೇರಿಗಳನ್ನಾಗಿ ಮಾಡಿದ್ದು ರಾಜಕಾರಣಿಗಳು. ಯಡಿಯೂರಪ್ಪ ಅವರಿಂದ ಆರಂಭವಾದ ಅನುದಾನ ಹಂಚುವ ಕಾರ್ಯ, ಕೊಟ್ಟ ಮಠಗಳಿಗೆ ನೀಡುತ್ತಾ ಶ್ರೀಮಂತವನ್ನಾಗಿ ಮಾಡುತ್ತಿದೆ. ಆದರೆ, ಹಿಂದುಳಿದ ಮಠಗಳಿಗೆ ಅನ್ಯಾಯ ಮಾಡುತ್ತಿದ್ದು, ಎಲ್ಲ ಮಠಗಳಿಗೆ ನೀಡಬೇಕು ಎಂದರು.
ಈಡಿಗ ಸಮಾಜದ ಮುಖಂಡರಾದ ಈ.ನಾಗರಾಜ, ಈ.ರಮೇಶ್, ಈ.ಎರಿಸ್ವಾಮಿ, ಈ.ಮಂಜುನಾಥ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.