ADVERTISEMENT

‘ಹಂಪಿ ಆನ್‌ ವೀಲ್ಸ್‌’ಗೆ ನೀರಸ ಪ್ರತಿಕ್ರಿಯೆ

ವಾರಾಂತ್ಯಕ್ಕೂ ಚಲಿಸದ ಡೀಸೆಲ್‌ ಚಾಲಿತ ರೈಲು; ಪ್ರಚಾರದ ಕೊರತೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 17 ಡಿಸೆಂಬರ್ 2021, 19:30 IST
Last Updated 17 ಡಿಸೆಂಬರ್ 2021, 19:30 IST
ಹಂಪಿ
ಹಂಪಿ   

ಹೊಸಪೇಟೆ (ವಿಜಯನಗರ): ‘ಹಂಪಿ ಆನ್‌ ವೀಲ್ಸ್‌’ ಡೀಸೆಲ್‌ ಚಾಲಿತ ರೈಲು ಸೇವೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣ ಪ್ರಾಧಿಕಾರವು ಬೆಂಗಳೂರಿನ ‘ಪ್ರಿವಿಲೆನ್ಸ್‌’–1 ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಹಂಪಿಯಲ್ಲಿ ಏಪ್ರಿಲ್‌ನಲ್ಲಿ ರೈಲು ಮಾದರಿಯ ವಾಹನ ಆರಂಭಿಸಿತು. ಆದರೆ, ಕಳೆದ ಎಂಟು ತಿಂಗಳಲ್ಲಿ ಅದು ಹಂಪಿ ಪರಿಸರದಲ್ಲಿ ಓಡಾಡಿದ್ದೇ ಕಮ್ಮಿ.

ಎಂಜಿನ್‌ ಸೇರಿದಂತೆ ಎರಡು ಬೋಗಿಗಳನ್ನು ಒಳಗೊಂಡಿದೆ. ಒಂದೇ ಸಲಕ್ಕೆ 30 ಜನ ಪ್ರಯಾಣಿಸಬಹುದು. ರಥಬೀದಿಯಿಂದ ಹೊರಟು ವಿಜಯ ವಿಠಲ ದೇವಸ್ಥಾನದ ವರೆಗೆ ಕರೆದೊಯ್ಯುತ್ತದೆ. ಆದರೆ, ರೈಲು ಜನರಿಂದ ಭರ್ತಿಯಾಗಿ ಓಡಾಡಿದ್ದೇ ಅಪರೂಪ.

ADVERTISEMENT

ಸೂಕ್ತ ಪ್ರಚಾರದ ಕೊರತೆ, ಹೆಚ್ಚಿನ ಟಿಕೆಟ್‌ ದರ, ಟಿಕೆಟ್‌ ಪಡೆಯಲು ಪ್ರತ್ಯೇಕ ಕೌಂಟರ್‌ ವ್ಯವಸ್ಥೆ ಇಲ್ಲದೇ ಇರುವುದರಿಂದ ಹೊರಗಿನಿಂದ ಬರುವ ಪ್ರವಾಸಿಗರಿಗೆ ಅದರ ಬಗ್ಗೆ ಅರಿವೇ ಇಲ್ಲ. ನಿತ್ಯ ಹಂಪಿ ರಥಬೀದಿಯಲ್ಲಿ ರೈಲು ಬಂದು ನಿಲ್ಲುತ್ತದೆ. ಇದು ಹಂಪಿ ನೋಡುವುದಕ್ಕಾಗಿಯೇ ಇರುವ ರೈಲು ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಹೀಗಾಗಿ ಪ್ರವಾಸಿಗರು ಅದರ ಬಗ್ಗೆ ವಿಚಾರಿಸಲು ಹೋಗುತ್ತಿಲ್ಲ.

ಜಿಎಸ್‌ಟಿ ಸೇರಿದಂತೆ ಒಬ್ಬರಿಗೆ ತಲಾ ₹350 ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಕನಿಷ್ಠ ಐದರಿಂದ ಆರು ಜನ ಬಂದರಷ್ಟೇ ರೈಲು ಹೊರಡುತ್ತದೆ. ಪ್ರಯಾಣಿಕರು ಬರುವವರೆಗೆ ಕಾದು ನಿಲ್ಲಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ದೂರದಿಂದ ಬರುವ ಪ್ರವಾಸಿಗರು ಸಮಯ ವ್ಯಯ ಮಾಡದೆ ಸ್ಥಳೀಯ ಆಟೊಗಳಲ್ಲಿ ಹೋಗುತ್ತಾರೆ.

‘ರೈಲಿನ ಬಗ್ಗೆ ಇದುವರೆಗೆ ಸೂಕ್ತ ಪ್ರಚಾರ ಕೈಗೊಂಡಿಲ್ಲ. ರಥಬೀದಿಯಲ್ಲಿ ನಿತ್ಯ ಬಂದು ನಿಲ್ಲುತ್ತದೆ. ಇದು ಪ್ರವಾಸಿಗರಿಗೆ ಇರುವ ವಾಹನವೋ, ಗಣ್ಯರ ಓಡಾಟಕ್ಕಿರುವ ವಾಹನವೋ ಎಂಬ ಗೊಂದಲದಲ್ಲಿ ಜನ ನೋಡುತ್ತಾರೆ. ಚಿತ್ರೀಕರಣ ಉದ್ದೇಶಕ್ಕಾಗಿ ಬಂದಿರಬಹುದು ಎಂದು ಭಾವಿಸಿ ಪ್ರವಾಸಿಗರು ಅದರ ಬಳಿಯೇ ಸುಳಿದಾಡುವುದಿಲ್ಲ. ವಾರಾಂತ್ಯಕ್ಕೆ ಹಂಪಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಆದರೆ, ಆ ದಿನಗಳಲ್ಲೂ ಅದು ಸಂಚರಿಸುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ರಾಜು ತಿಳಿಸಿದರು.

‘ರೈಲಿನಲ್ಲಿ ಸಂಚರಿಸಲು ಒಬ್ಬರು ₹350 ಪಾವತಿಸಬೇಕು. ಆಟೊದವರು ಒಬ್ಬರಿಗೆ ₹125 ಪಡೆಯುತ್ತಾರೆ. ನಾಲ್ಕೈದು ಜನ ಸೇರಿಕೊಂಡು ಹೋದರೆ ಇನ್ನೂ ಕಡಿಮೆ ತೆಗೆದುಕೊಳ್ಳುತ್ತಾರೆ. ಹೀಗಾಗಿ ಹಣ ಉಳಿತಾಯದ ದೃಷ್ಟಿಯಿಂದ ಆಟೊಗಳು ಸೂಕ್ತವಾಗಿರುವುದರಿಂದ ರೈಲಿನ ಕಡೆ ಯಾರೂ ಮುಖ ಮಾಡುವುದಿಲ್ಲ’ ಎಂದು ಹೇಳಿದರು.

‘ಚುನಾವಣೆ ನೀತಿ ಸಂಹಿತೆ ಮತ್ತಿತರ ಕಾರಣಗಳಿಂದ ರೈಲು ಸೇವೆ ಕುರಿತು ದೊಡ್ಡ ಮಟ್ಟದ ಪ್ರಚಾರ ಕೊಡಲು ಸಾಧ್ಯವಾಗಿರಲಿಲ್ಲ.ಜನವರಿಯಲ್ಲಿ ಹಂಪಿ ಬೈ ನೈಟ್‌ಗೆ ಚಾಲನೆ ಕೊಡಲಾಗುತ್ತದೆ. ಈ ವೇಳೆ ರೈಲು ಸೇವೆ ಕುರಿತು ದೊಡ್ಡ ಮಟ್ಟದ ಪ್ರಚಾರ ಕೈಗೊಳ್ಳಲಾಗುತ್ತದೆ. ಅದಕ್ಕಾಗಿ ಪ್ರತ್ಯೇಕ ಕೌಂಟರ್‌ ಕೂಡ ಆರಂಭಿಸಲಾಗುತ್ತದೆ’ ಎಂದು ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.