ತೆಕ್ಕಲಕೋಟೆ ಸಮೀಪ ಉತ್ಖನನ ಕಾರ್ಯದಲ್ಲಿ ತಜ್ಞರ ತಂಡ ತೊಡಗಿರುವುದು
ಒಟ್ಟು 16 ಸಂಶೋಧನಾರ್ಥಿಗಳಿಂದ ಅಧ್ಯಯನ | ವಿವಿಧ ಗಾತ್ರಗಳ ಆಯುಧಗಳು ಪತ್ತೆ | ಪ್ರಾಗೈತಿಹಾಸಿಕ ಕಾಲದ ನೆಲೆಯ ಮಾಹಿತಿ
ತೆಕ್ಕಲಕೋಟೆ (ಬಳ್ಳಾರಿ): ಪಟ್ಟಣದ ದಕ್ಷಿಣ ದಿಕ್ಕಿನಲ್ಲಿನ ಬೆಟ್ಟಗುಡ್ಡಗಳಲ್ಲಿ ನಡೆಯುತ್ತಿರುವ ಉತ್ಖನನ ವೇಳೆ ಅಪರೂಪದ ವಸ್ತುಗಳು ಸಿಕ್ಕಿವೆ. ಅಮೆರಿಕದ ಹಾರ್ಟ್‌ವಿಕ್ ವಿ.ವಿಯ ಪ್ರೊ. ನಮಿತಾ ಎಸ್.ಸುಗಂಧಿ ನೇತೃತ್ವದ ಐವರು ತಜ್ಞರ ತಂಡ ಪ್ರಾಗೈತಿಹಾಸಿಕ ಕಾಲದ ನೆಲೆಗಳ ಅಧ್ಯಯನ ನಡೆಸಿದೆ.
ವಿವಿಧ ಗಾತ್ರದ ಅರೆಯುವ ಕಲ್ಲುಗುಂಡು, ಪ್ರಾಣಿಗಳ ಬೇಟೆಗೆ ಬಳಸುವ ಗುಂಡುಗಳು, ಚೂಪಾದ ಕೊಡಲಿಯಾಕಾರದ, ಚಪ್ಪಟೆ ಆಕಾರದ ಆಯುಧಗಳು, ಮಣ್ಣಿನ ಹೂಜಿಯ ತುಂಡು, ಮಣ್ಣಿನ ಪಾತ್ರೆಗಳ ಚೂರುಗಳು ಸಿಕ್ಕಿವೆ.
‘ತೆಕ್ಕಲಕೋಟೆ ಸುತ್ತಮುತ್ತಲ ಹಿರೇಹರ್ಲ, ಗೌಡರ ಮೂಲೆ ಹಾಗೂ ಬಾಳೇತೋಟ ಸ್ಥಳವು ಜಗತ್ತಿನ ನಾಗರಿಕತೆ ಚರಿತ್ರೆಯ ದೃಷ್ಟಿಯಿಂದ ಮಹತ್ವದ ಜಾಗ. ಆದಿಮಾನವರು ಹಣ್ಣು ಹೆಕ್ಕಿ ತಿನ್ನುವ ಮತ್ತು ಪ್ರಾಣಿ ಬೇಟೆಯಾಡುವ ಹಂತದಿಂದ ಸಾಗಿ, ಒಂದೆಡೆ ನೆಲೆ ನಿಂತು ಕೃಷಿ ಮಾಡುವ ಮತ್ತು ಪಶುಪಾಲನೆ ಮಾಡುವ ಹಂತಕ್ಕೆ ದಾಟಿದರು. ಆ ತಿರುವಿನ ಘಟ್ಟದಲ್ಲಿ ಉದಯಿಸಿದ ಜನವಸತಿಗಳಲ್ಲಿ ತೆಕ್ಕಲಕೋಟೆಯೂ ಒಂದು’ ಎಂದು ತಜ್ಞರು ತಿಳಿಸಿದರು.
ತೆಕ್ಕಲಕೋಟೆ ಸಮೀಪ ಉತ್ಖನನ ಸ್ಥಳದಲ್ಲಿ ಪತ್ತೆಯಾದ ವಸ್ತುಗಳು
ಇದು ಪೂರ್ವ-ಐತಿಹಾಸಿಕ ಮತ್ತು ನವಶಿಲಾಯುಗದ ತಾಣ. ಇಲ್ಲಿನ ಬೆಟ್ಟಗಳಲ್ಲಿ ಶಿಲಾ ವರ್ಣಚಿತ್ರ, ಕಲ್ಲಿನ ರೇಖಾಚಿತ್ರ ಮತ್ತು ಕುಟ್ಟು ಚಿತ್ರಗಳ ವಿವಿಧ ಅವಶೇಷಗಳು ಕಾಣಸಿಗುತ್ತವೆ. ಹಳೇ ಶಿಲಾಯುಗ, ಮಧ್ಯಯುಗ ಮತ್ತು ಲೋಹಯಗದಲ್ಲಿ ಜನರು ಇಲ್ಲಿ ನೆಲಿಸಿದ್ದರು ಎಂಬುದಕ್ಕೆ ಇಲ್ಲಿ ಪುರಾವೆಗಳಿವೆ.
‘ಸದ್ಯ ಉತ್ಖನನ ನಡೆದಿರುವ ಸ್ಥಳಗಳಲ್ಲಿ ಕೃಷಿ ಚಟುವಟಿಕೆ, ಪಶುಸಂಗೋಪನೆ, ಮಡಿಕೆ ಹಾಗೂ ಕಬ್ಬಿಣದ ಉತ್ಪನ್ನ, ಕಲ್ಲಿನ ಆಯುಧ ತಯಾರಿಕಾ ಘಟಕ ಇತ್ತು, ಜನರು ನೀರಿನ ಸದ್ಬಳಕೆ ಹಾಗೂ ನಿರ್ವಹಣೆ ತಿಳಿದ್ದಿದ್ದರು ಎಂಬುದು ಗೊತ್ತಾಗುತ್ತದೆ’ ಎಂದು ಪ್ರೊ. ನಮಿತಾ ಎಸ್.ಸುಗಂಧಿ ತಿಳಿಸಿದರು.
ತಂಡದಲ್ಲಿ ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ವಿನಾಯಕ, ಅಶೋಕ ವಿಶ್ವವಿದ್ಯಾಲಯದ ಆಕಾಶ್ ಶ್ರೀನಿವಾಸ, ಮೊಹಾಲಿಯ ಮಿಹಿರ್ ತಂಗಸಾಲಿ, ವೈಷಿ ರಾಯ್, ದೆಹಲಿಯ ದೇವೇಂದ್ರ ಸಿಂಗ್ ಚೌಧರಿ, ಸಂಶೋಧನಾರ್ಥಿ ಅಶೋಕ್ ಅಬಕಾರಿ ಅಲ್ಲದೆ ವಿವಿಧ ರಾಜ್ಯಗಳ 16 ಸಂಶೋಧನಾರ್ಥಿಗಳು ಇದ್ದಾರೆ.
ತೆಕ್ಕಲಕೋಟೆ ಸಮೀಪ ಉತ್ಖನನ ಕಾರ್ಯದಲ್ಲಿ ತಜ್ಞರ ತಂಡ ತೊಡಗಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.