ADVERTISEMENT

ಹಂಪಿಯಲ್ಲಿ ಹೊಸ ರಸ್ತೆಗೆ ಸಿದ್ಧತೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 11 ಸೆಪ್ಟೆಂಬರ್ 2020, 6:05 IST
Last Updated 11 ಸೆಪ್ಟೆಂಬರ್ 2020, 6:05 IST
ಹಂಪಿಯ ಕಲ್ಲಿನ ರಥ
ಹಂಪಿಯ ಕಲ್ಲಿನ ರಥ   

ಹೊಸಪೇಟೆ: ಹಂಪಿಯಲ್ಲಿ ಬಿಡುವಿಲ್ಲದಂತೆ ನಿರ್ಮಾಣ ಕಾಮಗಾರಿಗಳು ಮುಂದುವರೆದಿವೆ. ಈಗ ಅದಕ್ಕೆ ಹೊಸ ಸೇರ್ಪಡೆ ನೂತನ ರಸ್ತೆ ನಿರ್ಮಾಣ ಯೋಜನೆ. ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣ ಪ್ರಾಧಿಕಾರವು ಹಂಪಿಯ ಹೃದಯ ಭಾಗದಲ್ಲಿ ಒಂದು ಕಿ.ಮೀ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.

40 ಅಡಿ ಅಗಲದ ಒಂದು ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಜಮೀನು ಸ್ವಾಧೀನ ಪ್ರಕ್ರಿಯೆ ಇನ್ನಷ್ಟೇ ಆಗಬೇಕಿದೆ. ಜಮೀನು ಮಾಲೀಕರಿಗೆ ಮಾರುಕಟ್ಟೆ ದರದಲ್ಲಿ ಬೆಲೆ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎಎಸ್‌ಐ) ಶುಲ್ಕ ಹಾಗೂ ರಸ್ತೆ ನಿರ್ಮಾಣಕ್ಕೆ ಒಟ್ಟು ₹4.50 ಕೋಟಿ ವೆಚ್ಚವಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯು ಅಂದಾಜು ಮೊತ್ತದ ಯೋಜನೆ ತಯಾರಿಸಿದೆ. ಪ್ರಸ್ತಾವನೆಯ ಅನುಮೋದನೆಗೆ ಕಡತವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತಕ್ಕೆ ಕಳಿಸಿಕೊಡಲಾಗಿದೆ.

ಆದರೆ, ಈ ಯೋಜನೆಗೆ ಸ್ಮಾರಕ ಪ್ರಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಹಂಪಿ ಒಂದು ಬಯಲು ವಸ್ತು ಸಂಗ್ರಹಾಲಯ. ಪುರಾತತ್ವದ ದೃಷ್ಟಿಯಿಂದ ಬಹಳ ಮಹತ್ವದ ಸ್ಥಳ. ಇಲ್ಲಿ ಯಾವುದೇ ರೀತಿಯ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಬಾರದು. ಕೃಷ್ಣ ದೇವಸ್ಥಾನದ ಹಿಂಭಾಗ, ಗೆಜ್ಜಲ ಮಂಟಪದ ಬಳಿ ಈಗಾಗಲೇ ಟಿಕೆಟ್‌ ಕೌಂಟರ್‌, ಕ್ಯಾಂಟೀನ್‌ ನೆಪದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈಗ ಹೊಸ ರಸ್ತೆ ನಿರ್ಮಿಸುತ್ತಿರುವುದು ಸರಿಯಲ್ಲ. ಇದರಿಂದ ಹಂಪಿಯ ಒಟ್ಟಾರೆ ಮೂಲ ಸ್ವರೂಪಕ್ಕೆ ಧಕ್ಕೆ ಉಂಟಾಗಿ ಅದರ ಪ್ರಾಮುಖ್ಯತೆ ಕಳೆದು ಹೋಗಬಹುದು’ ಎಂದು ವೈ. ಶಶಿಧರ್‌, ಜೆ. ಶಿವಕುಮಾರ ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಆದರೆ, ಪ್ರಾಧಿಕಾರದ ಆಯುಕ್ತರು ಹೇಳುವುದೇ ಬೇರೆ. ‘ಹಂಪಿಯ ಕೃಷ್ಣ ದೇವಸ್ಥಾನದ ಮಂಟಪದ ಒಳಗಿನಿಂದ ಹಾದು ಹೋಗುವ ಮಾರ್ಗ ಕಿರಿದಾಗಿದೆ. ವಾಹನ ಸಂಚಾರಕ್ಕೆ ತೊಡಕಾಗಿದೆ. ಅನೇಕ ಸಲ ಸ್ಮಾರಕಕ್ಕೂ ಧಕ್ಕೆಯಾಗಿದೆ. ಅದನ್ನು ತಪ್ಪಿಸುವುದಕ್ಕಾಗಿ ಅಕ್ಕ ತಂಗಿಯರ ಗುಡ್ಡದಿಂದ ಕಡ್ಡಿರಾಂಪುರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಲು ಯೋಜಿಸಲಾಗಿದೆ’ ಎಂದು ಪ್ರಾಧಿಕಾರದ ಆಯುಕ್ತ ಪಿ.ಎನ್‌. ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.


ಹೊಸ ರಸ್ತೆ ನಿರ್ಮಾಣಕ್ಕೆ ಪ್ರಾಧಿಕಾರದಿಂದ ಪ್ರಸ್ತಾವ ಸಲ್ಲಿಕೆಯಾಗಿದೆ. ಈ ಕುರಿತು ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
ಪಿ. ಕಾಳಿಮುತ್ತು, ಡೆಪ್ಯುಟಿ ಸೂಪರಿಟೆಂಡೆಂಟ್‌, ಪುರಾತತ್ವ ಇಲಾಖೆ ಹಂಪಿ ವೃತ್ತ

ಸುಗಮ ವಾಹನ ಸಂಚಾರದ ದೃಷ್ಟಿಯಿಂದ ಹೊಸ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ. ಇದರಿಂದ ಹಂಪಿ ಮೂಲ ಸ್ವರೂಪಕ್ಕೆ ಧಕ್ಕೆಯಾಗುವುದಿಲ್ಲ.
ಶೇಕ್‌ ತನ್ವೀರ್‌ ಆಸಿಫ್‌, ಅಧ್ಯಕ್ಷ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.