ADVERTISEMENT

ಹೂವಿನಹಡಗಲಿ: ಪುರಸಭೆ ಸದಸ್ಯರ ವಿರುದ್ಧ ಪ್ರತಿಭಟನೆ ಜ. 28ಕ್ಕೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 15:07 IST
Last Updated 26 ಜನವರಿ 2025, 15:07 IST
ಹೂವಿನಹಡಗಲಿ ಪುರಸಭೆ ಕಾಂಗ್ರೆಸ್ ಸದಸ್ಯ ಚಂದ್ರನಾಯ್ಕ
ಹೂವಿನಹಡಗಲಿ ಪುರಸಭೆ ಕಾಂಗ್ರೆಸ್ ಸದಸ್ಯ ಚಂದ್ರನಾಯ್ಕ   

ಹೂವಿನಹಡಗಲಿ: ಕಾಂಗ್ರೆಸ್ ಪಕ್ಷದೊಂದಿಗೆ ಸಂಪರ್ಕ ಕಡಿದುಕೊಂಡಿರುವ ಪಕ್ಷದ ಆರು ಜನ ಪುರಸಭೆ ಸದಸ್ಯರು ತಮ್ಮ ನಿಲುವು ಬದಲಿಸದಿದ್ದರೆ ಜ. 28 ರಂದು ಪಟ್ಟಣದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಹಡಗಲಿ ಮತ್ತು ಇಟ್ಟಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಜ.30 ರಂದು ನಿಗದಿಯಾಗಿದೆ. ಪಕ್ಷದಿಂದ ಆಯ್ಕೆಯಾಗಿರುವ ಎಲ್ಲರೂ ಅಧಿಕೃತ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿದೆ. ಅವರು ತಮ್ಮ ನಿರ್ಧಾರ ಬದಲಿಸಿ ಮರಳಿ ಬಂದರೆ ಸ್ವಾಗತಿಸುತ್ತೇವೆ. ಇಲ್ಲದಿದ್ದರೆ 28 ರಂದು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಗ್ರಾಮದೇವತೆ ಮಹಾದ್ವಾರದಿಂದ ಶಾಸ್ತ್ರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಭಾಗವಹಿಸಲಿದ್ದಾರೆ. ಆ ಸದಸ್ಯರು ಪಕ್ಷದ ಸೂಚನೆ ಧಿಕ್ಕರಿಸಿದರೆ 30 ರಂದು ಪುರಸಭೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ಮುಖಂಡರಾದ ಪಿ.ವಿಜಯಕುಮಾರ್, ಸೋಗಿ ಹಾಲೇಶ, ಬಸವನಗೌಡ ಪಾಟೀಲ್, ಪಿ.ಟಿ.ಭರತ್, ಜ್ಯೋತಿ ಮಲ್ಲಣ್ಣ, ಶಾಂತನಗೌಡ, ಕೆ.ಗೌಸ್ ಮೊಹಿದ್ದೀನ್, ಎಸ್.ದೂದನಾಯ್ಕ, ಜಿ.ವಸಂತ, ಚಂದ್ರನಾಯ್ಕ, ಗುರುವಿನ ರಾಜು ಇತರರು ಇದ್ದರು.

ಎಲ್ಲೂ ಹೋಗಿಲ್ಲ, ಇಲ್ಲೇ ಇರುವೆ: ‘ನಾನು ಎಲ್ಲಿಗೂ ಹೋಗಿಲ್ಲ. ನಾಪತ್ತೆಯಾಗುವ ಜಾಯಮಾನ ನನ್ನದಲ್ಲ. ಪಟ್ಟಣದಲ್ಲೇ ಓಡಾಡಿಕೊಂಡಿದ್ದೇನೆ. ಹಾಗಿದ್ದರೂ ನನ್ನ ತೇಜೋವಧೆ ಮಾಡುವುದು ಎಷ್ಟು ಸರಿ’ ಎಂದು ಪುರಸಭೆ ಕಾಂಗ್ರೆಸ್ ಸದಸ್ಯ ಚಂದ್ರನಾಯ್ಕ ಪ್ರಶ್ನಿಸಿದರು.

ADVERTISEMENT

ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವಿಚಾರದ ಯಾವ ಸಭೆಗಳಿಗೂ ನನ್ನನ್ನು ಕರೆದಿಲ್ಲ. ಎರಡು ವರ್ಷದಿಂದ ಕಾಂಗ್ರೆಸ್ ಸಭೆಗಳಿಗೆ ನನ್ನನ್ನು ಕರೆಯದೇ ಆ ಪಕ್ಷದವರೇ ಸಂಪರ್ಕ ಕಡಿದುಕೊಂಡಿದ್ದಾರೆ. ವಿಪ್ ಜಾರಿ ಮಾಡಿರುವುದು ನನಗೆ ತಿಳಿದಿಲ್ಲ. ನಾನು ಕಾಂಗ್ರೆಸ್ ಸದಸ್ಯ, ಚುನಾವಣೆಯಲ್ಲೂ ನಾನು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.