ADVERTISEMENT

ರೈಲ್ವೆ ಖಾಸಗೀಕರಣ ವಿರೋಧಿಸಿ ಹೊಸಪೇಟೆಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 8:23 IST
Last Updated 17 ಜುಲೈ 2020, 8:23 IST
ರೈಲ್ವೆ ಖಾಸಗೀಕರಣ ವಿರೋಧಿಸಿ ‘ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌’ (ಸಿ.ಐ.ಟಿ.ಯು.) ಕಾರ್ಯಕರ್ತರು ಶುಕ್ರವಾರ ಹೊಸಪೇಟೆಯ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.
ರೈಲ್ವೆ ಖಾಸಗೀಕರಣ ವಿರೋಧಿಸಿ ‘ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌’ (ಸಿ.ಐ.ಟಿ.ಯು.) ಕಾರ್ಯಕರ್ತರು ಶುಕ್ರವಾರ ಹೊಸಪೇಟೆಯ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.   

ಹೊಸಪೇಟೆ: ರೈಲ್ವೆ ಖಾಸಗೀಕರಣ ವಿರೋಧಿಸಿ ‘ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌’ (ಸಿ.ಐ.ಟಿ.ಯು.) ಕಾರ್ಯಕರ್ತರು ಶುಕ್ರವಾರ ಇಲ್ಲಿನ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ಬಳಿಕ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿ ಪತ್ರವನ್ನು ಇಲ್ಲಿನ ರೈಲು ನಿಲ್ದಾಣದ ಅಧಿಕಾರಿ ಎಸ್‌.ಎಸ್‌. ಉಮೇಶ್‌ ಅವರಿಗೆ ಸಲ್ಲಿಸಿದರು.

‘ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ರೈಲ್ವೆ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ಈಗಾಗಲೇ 109 ರೈಲು ನಿಲ್ದಾಣಗಳನ್ನು ಖಾಸಗಿಯವರ ನಿರ್ವಹಣೆಗೆ ಒಪ್ಪಿಸಿ, 151 ಖಾಸಗಿ ರೈಲುಗಳನ್ನು ಓಡಿಸಲಾಗುತ್ತಿದೆ. ಭಾರತೀಯ ರೈಲ್ವೆ ಭಾರತೀಯರ ಜೀವನಾಡಿ. ಅದನ್ನು ಖಾಸಗಿಯವರ ಕೈಗೆ ಕೊಟ್ಟು ಜನಸಾಮಾನ್ಯರ ಹಿತ ಬಲಿಕೊಡುತ್ತಿರುವುದು ಸರಿಯಲ್ಲ. ಈ ಖಾಸಗಿ ರೈಲುಗಳ ಟಿಕೆಟ್‌ ದರ ದುಬಾರಿಯಾಗಿದ್ದು, ಸಾಮಾನ್ಯ ಜನರು ಪ್ರಯಾಣಿಸಲು ಆಗುವುದಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘ಖಾಸಗಿಯವರಿಗೆ ಒಪ್ಪಿಸಿರುವ 109 ರೈಲು ನಿಲ್ದಾಣಗಳಿಗೆ ಸೇರಿರುವ ಜಾಗದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸಲು ಯೋಜಿಸಲಾಗುತ್ತಿದೆ. ರೈಲ್ವೆ ಇಲಾಖೆಯಲ್ಲಿ ಲಕ್ಷಾಂತರ ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಭವಿಷ್ಯದಲ್ಲಿ ಅವರ ಕೆಲಸಕ್ಕೂ ಕುತ್ತು ಬರುವ ಸಾಧ್ಯತೆ ಇದೆ. ಅತಿ ಕಡಿಮೆ ದರದಲ್ಲಿ ದೂರದ ಊರುಗಳಿಗೆ ಪ್ರಯಾಣ ಮಾಡಲು, ಸರಕು ಸಾಗಣೆಗೆ ರೈಲುಗಳು ಬಹಳ ಸಹಕಾರಿಯಾಗಿವೆ. ಖಾಸಗೀಕರಣಗೊಂಡರೆ ಎಲ್ಲವೂ ದುಬಾರಿಯಾಗುತ್ತದೆ. ಜನಸಾಮಾನ್ಯರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಖಾಸಗೀಕರಣ ಪ್ರಕ್ರಿಯೆ ನಿಲ್ಲಿಸಬೇಕು’ ಎಂದು ಹಕ್ಕೊತ್ತಾಯ ಮಾಡಿದ್ದಾರೆ.

ಯೂನಿಯನ್ಸ್‌ ಜಿಲ್ಲಾ ಅಧ್ಯಕ್ಷ ಆರ್‌. ಭಾಸ್ಕರ್‌ ರೆಡ್ಡಿ, ತಾಲ್ಲೂಕು ಅಧ್ಯಕ್ಷೆ ಕೆ. ನಾಗರತ್ನ, ಕಾರ್ಯದರ್ಶಿ ಎಂ. ಗೋಪಾಲ್‌, ಖಜಾಂಚಿ ಯಲ್ಲಾಲಿಂಗ, ಮುಖಂಡರಾದ ಜಗನ್ನಾಥ ಎಚ್‌.ಬಿ. ಹಳ್ಳಿ, ಎ. ಕರುಣಾನಿಧಿ, ಎಲ್‌. ಮಂಜುನಾಥ, ಕೆ.ಎಂ. ಸಂತೋಷ್‌ ಕುಮಾರ್‌, ಕೆಂಚಮ್ಮ, ಜೆ. ಪ್ರಕಾಶ್‌, ಎಂ. ಜಂಬಯ್ಯ ನಾಯಕ, ಸಿದ್ದಲಿಂಗಪ್ಪ, ಅನಂತಶಯನ, ಜೆ.ಎಂ. ಚನ್ನಬಸಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.