ಹೊಸಪೇಟೆ: ವಲಸೆ ಕಾರ್ಮಿಕರಿಗೆ ಸಮಗ್ರ ಪರಿಹಾರ ಯೋಜನೆ ರೂಪಿಸಬೇಕೆಂದು ಆಗ್ರಹಿಸಿ ‘ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಶನ್ (ಎ.ಐ.ಡಿ.ವೈ.ಒ.) ಕಾರ್ಯಕರ್ತರು ಬುಧವಾರ ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಸಲ್ಲಿಸಿದರು.
‘ಲಾಕ್‌ಡೌನ್ 4.0 ಮತ್ತು ಅನ್‌ಲಾಕ್ 2.0 ನಡುವೆ ದೇಶದ ಯುವಜನರು ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ. ಕಟ್ಟಡ ಕಾರ್ಮಿಕರು, ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರು ಸೇರಿದಂತೆ ವಿವಿಧ ವಲಯದ ಒಟ್ಟು 15 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಈಗ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ 40 ಕೋಟಿಗೂ ಅಧಿಕವಾಗಿದೆ. ಮಹಾನಗರಗಳಿಂದ ಹಳ್ಳಿಗಳಿಗೆ ಮಹಾವಲಸೆ ಶುರುವಾಗಿದೆ. ಭವಿಷ್ಯದಲ್ಲಿ ಇನ್ನೂ ಗಂಭೀರ ಪರಿಸ್ಥಿತಿ ಸೃಷ್ಟಿಯಾಗಬಹುದು. ಅದಕ್ಕೂ ಮುನ್ನ ಸರ್ಕಾರ ಅವರ ರಕ್ಷಣೆಗೆ ಬರಬೇಕು’ ಎಂದು ಆಗ್ರಹಿಸಿದ್ದಾರೆ.
‘ಉದ್ಯೋಗ ಖಾತ್ರಿ ಕೂಲಿಯನ್ನು ₹600ಕ್ಕೆ ಹೆಚ್ಚಿಸಿ, ದುಡಿಮೆ ದಿನಗಳನ್ನು 100ರಿಂದ 200ಕ್ಕೆ ಏರಿಸಬೇಕು. ರಾಜ್ಯದ ನಿರುದ್ಯೋಗಿ ಯುವಕರಿಗೆ ಮಾಸಿಕ ₹5,000 ಭತ್ಯೆ ನೀಡಬೇಕು. ಮದ್ಯ ನಿಷೇಧಿಸಿ, ಅಶ್ಲೀಲ ವೈಬ್‌ಸೈಟ್‌ಗಳ ಮೇಲೆ ನಿರ್ಬಂಧ ಹೇರಬೇಕು. ಖಾಸಗಿ ವಲಯದಲ್ಲಿ ಉದ್ಯೋಗ ಕಡಿತ, ವೇತನ ಕಡಿತಕ್ಕೆ ಕಡಿವಾಣ ಹೇರಬೇಕು. ಕೃಷಿ ಕ್ಷೇತ್ರಕ್ಕೆ ಸಮಗ್ರವಾದ ಪರಿಹಾರ ಪ್ಯಾಕೇಜ್ ಘೋಷಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಬಡಿಗೇರ್, ಮುಖಂಡರಾದ ಎಚ್. ಹುಲುಗಪ್ಪ, ಎನ್. ಪಂಪಾಪತಿ, ಅಭಿಷೇಕ್ ಕಾಳೆ, ಮುನಿರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.