ADVERTISEMENT

ನಿವೃತ್ತರಿಗೆ ಸಕಾಲಕ್ಕೆ ಪಿಂಚಣಿ ಕೊಡಿ: ಡಿ.ಸಿ

ಪಿಂಚಣಿ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 13:33 IST
Last Updated 8 ಆಗಸ್ಟ್ 2019, 13:33 IST
ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಮಾತನಾಡಿದರು.   

ಬಳ್ಳಾರಿ: ‘ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಸಕಾಲಕ್ಕೆ ಪಿಂಚಣಿ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆಗಸ್ಟ್‌ 23ರಂದು ನಡೆಯಲಿರುವ ಪಿಂಚಣಿ ಅದಾಲತ್‍ಗೆ ಸಂಬಂಧಿಸಿ ನಗರದಲ್ಲಿ ಗುರುವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ನಿವೃತ್ತರಾಗುವ ನೌಕರರಿಗೆ ಸಂಬಂಧಿಸಿದ ಪಿಂಚಣಿ ಪ್ರಸ್ತಾವಿತ ದಾಖಲಾತಿಗಳನ್ನು 3 ತಿಂಗಳ ಮುಂಚೆಯೇ ಸಿದ್ಧಪಡಿಸಿ ಪಿಂಚಣಿ ಸಕಾಲದಲ್ಲಿ ಸಿಗುವಂತೆ ಮಾಡಬೇಕು. ಈ ಕುರಿತು ಇಲಾಖೆಗಳಿಗೆ ಸೂಚನೆ ನೀಡಲಾಗುವುದು’ ಎಂದರು.

‘ನಿವೃತ್ತ ನೌಕರರ ಸೇವಾವಹಿಗಳನ್ನು ಸಮರ್ಪಕವಾಗಿ ನಿರ್ವಹಣೆ ನಡೆಯುತ್ತಿಲ್ಲ’ ಎಂಬ ನಿವೃತ್ತ ನೌಕರರ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಲಾಗುವುದು’ ಎಂದರು.

ADVERTISEMENT

‘ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿವೃತ್ತ ನೌಕರರಿಗೆ ಸಂಬಂಧಿಸಿದ ಪಿಂಚಣಿ ಕಡತಗಳನ್ನು ಸಮರ್ಪಕವಾಗಿ ಕಳುಹಿಸಿಕೊಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕು. ಚೆಕ್‍ಲಿಸ್ಟ್ ಅನುಸಾರವೇ ಕಳುಹಿಸಿಕೊಡಬೇಕು. ಇತ್ತೀಚೆಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲಾಗಿದ್ದು ಅವರ ಸೇವಾವಹಿಗಳನ್ನು ಚಾಲನೆಗೊಳಿಸಿ’ ಎಂದು ಸ್ಪಷ್ಟಪಡಿಸಿದರು.

ಆರೋಗ್ಯ ಸೇವೆ ವಿಸ್ತರಿಸಿ: ‘ಕಾರ್ಯನಿರತ ಸರ್ಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ಸೇವೆಗಳನ್ನು ನಿವೃತ್ತರಿಗೂ ವಿಸ್ತರಿಸಬೇಕು’ ಎಂದು ಇದೇ ಸಂದರ್ಭದಲ್ಲಿ ನಿವೃತ್ತ ನೌಕರ ವೀರಯ್ಯ ಕೂಡ್ಲಿಗಿ ಮನವಿ ಮಾಡಿದರು.

‘ಬಸ್‍ ಪ್ರಯಾಣ ಮಾಡುವವರಿಗೆ ಟಿಕೆಟ್ ದರದಲ್ಲಿ ಶೇ.50ರಷ್ಟು ರಿಯಾಯ್ತಿ ಕಲ್ಪಿಸಬೇಕು. ಪಿಂಚಣಿ ಪಡೆಯುವವರಿಗಾಗಿಯೇ ತಿಂಗಳ ಮೊದಲ ವಾರ ಬ್ಯಾಂಕ್‍ಗಳಲ್ಲಿ ಪ್ರತ್ಯೇಕ ಕೌಂಟರ್ ತೆರೆಯಬೇಕು. ನಿವೃತ್ತರಿಗಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿವೇಶನ ಒದಗಿಸಬೇಕು’ ಎಂದು ಇದೇ ಸಂದರ್ಭದಲ್ಲಿ ಎಂದು ನೌಕರರು ಮನವಿ ಮಾಡಿದರು.

ಪಿಂಚಣಿಯನ್ನು ಸಕಾಲಕ್ಕೆ ದೊರಕಿಸಲು ಅಗತ್ಯ ಸಹಕಾರ ನೀಡಲಾಗುವುದು’ ಎಂದು ಜಿಲ್ಲಾ ಖಜಾನಾಧಿಕಾರಿ ರವಿ ಹಕಾರಿ ತಿಳಿಸಿದರು. ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಸಹಾಯಕ ನಿರ್ದೇಶಕಿ ಸಾವಿತ್ರಿ, ಪಿಂಚಣಿ ಅದಾಲತ್ ಉದ್ದೇಶಗಳ ಕುರಿತು ವಿವರಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.