ADVERTISEMENT

ಕಾಲುವೆಗೆ 20ರಿಂದ ನೀರು ಹರಿಸಲು, ಕಬ್ಬಿಗೆ ಎಫ್‌ಆರ್‌ಪಿ ಬೆಲೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 8:50 IST
Last Updated 12 ಡಿಸೆಂಬರ್ 2018, 8:50 IST
   

ಬಳ್ಳಾರಿ: ‘ತುಂಗಭದ್ರಾ ಬಲದಂಡೆಯ ಮೇಲ್ಮಟ್ಟದ ಕಾಲುವೆಗೆ ಡಿ.20ರಿಂದ ಜ.5 ರವರೆಗೆ ನೀರು ಹರಿಸಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಗೋಣಿಬಸಪ್ಪ ಆಗ್ರಹಿಸಿದರು.

‘ಮೆಣಸಿನಕಾಯಿ, ಹತ್ತಿ, ಜೋಳಕ್ಕೆ ನೀರು ಬೇಕಿದೆ. ನೀರು ಹರಿಸದಿದ್ದರೆ ಎಚ್ಎಲ್ ಸಿ ಕಾಲುವೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ’ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ರಾಜ್ಯ ಸರ್ಕಾರವು ಹೋರಾಟಕ್ಕೆ ಮಣಿದು ಹಂತ ಹಂತವಾಗಿ ರೈತರ ಸಾಲಮನ್ನಾ ಮಾಡುತ್ತಿದೆ. ಕೇಂದ್ರ ಸರ್ಕಾರವೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಸಾಲ ಮನ್ನಾ ವಿಚಾರದಲ್ಲಿ ಆಸಕ್ತಿ ವಹಿಸಿ ರೈತರ ಹಿತ ಕಾಪಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕಬ್ಬಿನ ಬೆಲೆ ವಿಚಾರದಲ್ಲಿ ಕಾರ್ಖಾನೆ ಮಾಲೀಕರು ವಿಳಂಬ ಮಾಡುತ್ತಿದ್ದಾರೆ. ಕಬ್ಬಿನಲ್ಲಿ ಸಕ್ಕರೆ ಅಂಶದ ಪ್ರಮಾಣದ ಮೇಲೆ ಬೆಲೆ ನಿಗದಿ ಮಾಡಿ 12 ತಿಂಗಳೂ ಖರೀದಿಸಬೇಕು. ಕಬ್ಬಿನ ಖರೀದಿಯಲ್ಲಿ ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸಿ, ಪ್ರಮಾಣವನ್ನು ಪರಿಶೀಲಿಸಬೇಕು’ ಎಂದರು.

‘ಕೇಂದ್ರ ಸರ್ಕಾರ ಪ್ರತಿ ಟನ್‌ ಕಬ್ಬಿಗೆ ₹ 2750ಬೆಲೆ ಘೋಷಿಸಿದ್ದು, ಬೆಳೆಗಾರರಿಗೆ ₹ 2,500 ಮಾತ್ರ ಕೊಟ್ಟು ವಂಚಿಸಲಾಗುತ್ತಿದೆ. ಜಿಲ್ಲಾಧಿಕಾರಿಯು ತಂಡ ರಚಿಸಿ, ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ ನಿಗದಿತ ಬೆಲೆಯನ್ನು ಕೊಡುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಮರಳಿನ ಕೊರತೆಯಿಂದ ಬಡವರಿಗೆ ಮನೆ ಕಟ್ಟಿಸಿಕೊಳ್ಳಲು ಅಗುತ್ತಿಲ್ಲ. ಪಕ್ಕದ ಆಂಧ್ರದಲ್ಲಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಉಚಿತ ಮರಳು ನೀಡುತ್ತಿರುವಂತೆ ರಾಜ್ಯ ಸರ್ಕಾರವೂ ಕೂಡ ಮರಳಿನ ಕೊರತೆ ನೀಗಿಸಿ, ಬಿಪಿಎಲ್ ಕಾರ್ಡುದಾರರು ಮತ್ತು ಸಣ್ಣ ರೈತರಿಗೆ ಉಚಿತ ಮರಳು ನೀಡಬೇಕು’ ಎಂದು ಆಗ್ರಹಿಸಿದರು.

‘ಜಿಂದಾಲ್ ಕಂಪನಿ ತುಂಗಭದ್ರ ಜಲಾಶಯದಿಂದ ನೀರು ಬಳಸಿಕೊಂಡು ಸರ್ಕಾರಕ್ಕೆ ವಿದ್ಯುತ್ ಮಾರಾಟ ಮಾಡುತ್ತಿದೆ. ಆದರೆ, ಮೂರು ರಾಜ್ಯಗಳ ಲೋಕಸಭಾ ಸದಸ್ಯರು ಹೂಳು ತೆಗೆಯುವ ಬಗ್ಗೆ ಮಾತನಾಡುತ್ತಿಲ್ಲ. ಸಮಾನಾಂತರ ಜಲಾಶಯ ನಿರ್ಮಿಸಿ ವಿದ್ಯುತ್ ಉತ್ಪಾದನೆ ಬಗ್ಗೆ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಕೃಷ್ಣ, ಎಂ.ಎಲ್‌.ಕೆ.ನಾಯಡು, ಬಿ.ವಿ.ಯರ್ರಿಸ್ವಾಮಿ, ಎಂ.ಈಶ್ವರಪ್ಪ, ಅಡವಿ ಸ್ವಾಮಿ, ಹೊನ್ನೂರ್ ಸ್ವಾಮಿ, ಯರ್ರಿಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.