ADVERTISEMENT

ಶೌಚಾಲಯ, ದನದ ದೊಡ್ಡಿ ನೆಲಸಮ

ಪಂಚಾಯಿತಿಗೆ ಮುತ್ತಿಗೆ, ದನ ಕಟ್ಟಿ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 3:09 IST
Last Updated 7 ಜನವರಿ 2026, 3:09 IST
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ದನದ ದೊಡ್ಡಿ ನೆಲಸಮ ಮಾಡಿದ್ದನ್ನು ವಿರೋಧಿಸಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂದೆ ದನಗಳನ್ನು ಕಟ್ಟಿ, ಮುತ್ತಿಗೆ ಹಾಕಿ ಪ್ರತಿಭಟಿಸಿದರು
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ದನದ ದೊಡ್ಡಿ ನೆಲಸಮ ಮಾಡಿದ್ದನ್ನು ವಿರೋಧಿಸಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂದೆ ದನಗಳನ್ನು ಕಟ್ಟಿ, ಮುತ್ತಿಗೆ ಹಾಕಿ ಪ್ರತಿಭಟಿಸಿದರು   

ತೆಕ್ಕಲಕೋಟೆ: ಸಮೀಪದ ಕರೂರು ಗ್ರಾಮದ ಪಂಚಾಯಿತಿಯ ಸಾರ್ವಜನಿಕ ಶೌಚಾಲಯ ಹಾಗೂ ದನದ ದೊಡ್ಡಿ ನೆಲಸಮ ಮಾಡಿದ್ದನ್ನು ವಿರೋಧಿಸಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂದೆ ದನಗಳನ್ನು ಕಟ್ಟಿ, ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮದ 3ನೇ ವಾರ್ಡಿನ ಚೆಲುವಾದಿ ಕೇರಿ, ಹರಿಜನ ಕೇರಿ, ಕೊರಚ, ಕೊರಮ ಕೇರಿಯ ನಿವಾಸಿಗಳು ಕೊಟ್ರ ಬಸಪ್ಪ ಗುಡಿ ಹತ್ತಿರ ಇರುವ ಶೌಚಾಲಯ ಹಾಗೂ ಬಂಡಿ ದೊಡ್ಡಿಯನ್ನು ರಾತ್ರೋರಾತ್ರಿ ನೆಲಸಮಗೊಳಿಸಿದ್ದನ್ನು ವಿರೋಧಿಸಿ ಮಹಿಳೆಯರು
ಪ್ರತಿಭಟನೆ ನಡೆಸಿದರು.

‘ಸರ್ಕಾರದ ಆಸ್ತಿ ಒತ್ತುವರಿ ಮಾಡಿದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅವರಿಂದಲೇ ಶೌಚಾಲಯ ಕಟ್ಟಿಸಬೇಕು. ಘಟನೆ ನಡೆದು ವಾರ ಕಳೆದರೂ ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ಪಿಡಿಒ ಈರಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ವಿಶೇಷ ಸಭೆ: ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ವಿಶೇಷ ಸಭೆ ಕರೆದು ಚರ್ಚಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಲೋಕರೆಡ್ಡಿ, ಸದಸ್ಯೆ ಚಂದ್ರಕಲಾ ಆಕ್ರೋಶ ವ್ಯಕ್ತಪಡಿಸಿ, ‘ಸರ್ಕಾರಿ ಜಮೀನು ಅತಿಕ್ರಮಿಸಿ ಶೌಚಾಲಯ ಹಾಗೂ ದನದ ದೊಡ್ಡಿ ನೆಲಸಮಗೊಳಿಸಿದ್ದು ಯಾರು? ಸರ್ಕಾರದ ಜಾಗವನ್ನು ಖಾಸಗಿ ಬಳಕೆಗೆ ಅವಕಾಶ ಇದೆಯೇ. ನೆಲಸಮಗೊಳಿಸುವ ಬಗ್ಗೆ ಖಾಸಗಿಯವರು ಪಂಚಾಯಿತಿ ಗಮನಕ್ಕೆ ತಂದಿದ್ದಾರಾ?’ ಎಂದು ಪಿಡಿಒರನ್ನು ಪ್ರಶ್ನಿಸಿದರು.

‘ದನದ ದೊಡ್ಡಿ ಹಾಗೂ ಶೌಚಾಲಯ ತೆರವುಗೊಳಿಸಿ ಅಲ್ಲಿ ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪಂಚಾಯಿತಿ ದನದ ದೊಡ್ಡಿ ನಿರ್ಮಿಸುವವರೆಗೆ ದನಗಳನ್ನು ಪಂಚಾಯಿತಿಯಲ್ಲಿ ಕಟ್ಟಲು ಅನುಮತಿ ನೀಡಬೇಕು’ ಎಂದು ಸದಸ್ಯರು ಒತ್ತಾಯಿಸಿದರು.

ಈ ಕೃತ್ಯದ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಸಭೆ ಸರ್ವಾನುಮತದಿಂದ ನಿರ್ಧಾರ ಕೈಗೊಂಡಿತು.

ಇಷ್ಟಕ್ಕೆ ಒಪ್ಪದ ಗ್ರಾಮಸ್ಥರು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ನಿಮ್ಮನ್ನೂ ಬಿಡುವುದಿಲ್ಲ ಎಂದು ಪಿಡಿಒ ಅವರನ್ನು ಕೋಣೆಯಿಂದ ಹೊರ ಹೋಗದಂತೆ ತಡೆದರು.

ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ರತ್ನಮ್ಮ, ಶಾರದಮ್ಮ, ವಿ. ನಾರಾಯಣ, ವಿ. ದ್ಯಾವಪ್ಪ, ಪಂಪಾಪತಿ ಹಾಜರಿದ್ದರು.

ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ದನದ ದೊಡ್ಡಿ ನೆಲಸಮ ವಿರೋಧಿಸಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂದೆ ದನಗಳನ್ನು ಕಟ್ಟಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.