ADVERTISEMENT

ಚಿಕ್ಕಜಾಯಿಗನೂರು: ಮಳೆಗೆ ಮಾಗಾಣಿ ರಸ್ತೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 4:25 IST
Last Updated 24 ಜುಲೈ 2025, 4:25 IST
ಕಂಪ್ಲಿ ತಾಲ್ಲೂಕು ಚಿಕ್ಕಜಾಯಿಗನೂರು ಹಳೆಮಾಗಾಣಿ ರಸ್ತೆ ಮತ್ತು ಭತ್ತದ ಗದ್ದೆ ಮಳೆ ನೀರಿನಿಂದ ಜಲಾವೃತವಾಗಿರುವ ದೃಶ್ಯ
ಕಂಪ್ಲಿ ತಾಲ್ಲೂಕು ಚಿಕ್ಕಜಾಯಿಗನೂರು ಹಳೆಮಾಗಾಣಿ ರಸ್ತೆ ಮತ್ತು ಭತ್ತದ ಗದ್ದೆ ಮಳೆ ನೀರಿನಿಂದ ಜಲಾವೃತವಾಗಿರುವ ದೃಶ್ಯ   

ಕಂಪ್ಲಿ: ತಾಲ್ಲೂಕಿನ ಚಿಕ್ಕಜಾಯಿಗನೂರು ಹಳೆಮಾಗಾಣಿ ರಸ್ತೆ ಮಳೆ ನೀರಿನಿಂದ ಜಲಾವೃತವಾಗಿ ಅಡಚಣೆಯಾಗಿದ್ದರಿಂದ ತಹಶೀಲ್ದಾರ್ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಜೆ. ಭರಮರೆಡ್ಡಿ ಮಾತನಾಡಿ, ರಾಜಮ್ಮ ಕ್ಯಾಂಪ್‍ನಿಂದ ಎಸ್‌ಸಿ ಕಾಲೊನಿಯವರೆಗೆ ರಸ್ತೆ ಬದಿಗೆ ಹೆಚ್ಚುವರಿ ಮಣ್ಣು ಹಾಕಿರುವುದರಿಂದ ರಸ್ತೆ ಜಲಾವೃತವಾಗುವುರ ಜೊತೆಗೆ ಹತ್ತಿರದ ಭತ್ತದ ಗದ್ದೆಗೆ ಮತ್ತು ಭತ್ತದ ಸಸಿ ಮಡಿಗೆ ನೀರು ನುಗ್ಗಿ ಹಾನಿಯಾಗಿದೆ ಎಂದು ದೂರಿದರು.

ಈ ಕಾಲೊನಿಯಲ್ಲಿ ಕೊಳಾಯಿ ನೀರು ವ್ಯರ್ಥವಾಗಿ ರಸ್ತೆಗೆ ಹರಿಬಿಡುತ್ತಿರುವುದರಿಂದ ರಸ್ತೆ ತುಂಬಾ ನೀರು ಸದಾ ತುಂಬಿರುವುದು ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ. ಈ ಕುರಿತು ತಾಲ್ಲೂಕು ಪಂಚಾಯಿತಿ ಇಒ ಮತ್ತು ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಅನೇಕ ಬಾರಿ ದೂರವಾಣಿ ಕರೆ ಮಾಡಿದರು ಸ್ವೀಕರಿಸಲಿಲ್ಲ ಎಂದು ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿದರು.

ADVERTISEMENT

ರಸ್ತೆ ಬದಿ ಮತ್ತು ರಸ್ತೆಗೆ ಹಾಕಿದ ಹೆಚ್ಚುವರಿ ಮಣ್ಣನ್ನು ಕೂಡಲೇ ತೆರವುಗೊಳಿಸಬೇಕು. ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಕೊಳಾಯಿ ನೀರು ವ್ಯರ್ಥವಾಗಿ ರಸ್ತೆಗೆ ಹರಿದು ಬರದಂತೆ ಕ್ರಮವಹಿಸಬೇಕು. ಮುಂದಿನ ದಿನ ಹೊಲಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾದಲ್ಲಿ ಅಧಿಕಾರಿಗಳೇ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಜೂಗಲ ಮಂಜುನಾಯಕ ಸ್ಥಳ ವೀಕ್ಷಿಸಿ ಸಮಸ್ಯೆ ಪರಿಹಾರಕ್ಕೆ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಸೂಚಿಸುವುದಾಗಿ ಸ್ಪಷ್ಟಪಡಿಸಿದರು.

ಗ್ರಾಮಾಡಳಿತ ಅಧಿಕಾರಿ ರಾಘವೇಂದ್ರ, ಪ್ರಮುಖ ಜಿ. ಪಂಪನಗೌಡ, ರೈತರಾದ ಡಿ. ಗೋಪಾಲ, ರಾಮಯ್ಯ, ರಾಜಾ, ಶಿವರಾಜ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.