ADVERTISEMENT

ತುಂಗಭದ್ರಾ ಒಳಹರಿವು ಹೆಚ್ಚಳ; ಮುಂದುವರಿದ ಜಿಟಿಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 5:23 IST
Last Updated 2 ಆಗಸ್ಟ್ 2019, 5:23 IST
   

ಹೊಸಪೇಟೆ: ಗುರುವಾರ ರಾತ್ರಿ ಆರಂಭಗೊಂಡಿದ್ದ ಜಿಟಿಜಿಟಿ ಮಳೆ ಶುಕ್ರವಾರ ಕೂಡ ಮುಂದುವರಿದಿದೆ.

ರಾತ್ರಿ ಪ್ರಾರಂಭಗೊಂಡಿದ್ದ ಮಳೆ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಕೆಲ ನಿಮಿಷ ಬಿಡುವು ನೀಡಿತು. ನಂತರ ಆರಂಭವಾದ ಮಳೆ ಸತತವಾಗಿ ಸುರಿಯುತ್ತಿದೆ.

ಎಡೆಬಿಡದೆ ಮಳೆ ಸುರಿಯುತ್ತಿರುವ ಕಾರಣ ಶಾಲಾ-ಕಾಲೇಜು, ದೈನಂದಿನ ಕಚೇರಿ ಕೆಲಸಗಳಿಗೆ ತೊಂದರೆಯಾಯಿತು. ಕೆಲವರು ಮಳೆ ಲೆಕ್ಕಿಸದೆ ಕೊಡೆಗಳನ್ನು ಹಿಡಿದುಕೊಂಡು ನಿತ್ಯದ ಕೆಲಸಕ್ಕೆ ಹೋಗುತ್ತಿರುವ ದೃಶ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಕಂಡು ಬಂತು.

ADVERTISEMENT

ತಾಲ್ಲೂಕಿನ ಹಂಪಿ, ಕಮಲಾಪುರ, ಹೊಸೂರು, ನಾಗೇನಹಳ್ಳಿ, ಬಸವನದುರ್ಗ, ವ್ಯಾಸನಕೆರ, ಬೈಲುವದ್ದಿಗೇರಿ, ರಾಮಸಾಗರ, ಮಲಪನಗುಡಿ, ಸೀತಾರಾಮ ತಾಂಡ, ನಲ್ಲಾಪುರ, ಚಿನ್ನಾಪುರ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿಯಲ್ಲೂ ಮಳೆಯಾಗುತ್ತಿದೆ.

ಮಳೆಗಾಲ ಆರಂಭಗೊಂಡ ನಂತರ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿರುವುದು ಇದೇ ಮೊದಲು. ಇದರಿಂದ ರೈತರು ಬಿತ್ತಕೆ ಕೂಡ ತಡವಾಗಿ ಮಾಡಿದ್ದರು.

ಒಳಹರಿವು ಭಾರಿ ಹೆಚ್ಚಳ:

ಎರಡು ದಿನಗಳಿಂದ ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯದಲ್ಲಿ 30 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿದೆ. 30 ಸಾವಿರ ಕ್ಯುಸೆಕ್ ಗೂ ಅಧಿಕ ನೀರು ಅಣೆಕಟ್ಟೆಗೆ ಹರಿದು ಬರುತ್ತಿದೆ. ಎರಡು ದಿನಗಳ ಹಿಂದೆ ಒಳಹರಿವು 14 ಸಾವಿರ ಕ್ಯುಸೆಕ್ ಇತ್ತು.

ಹೋದ ವರ್ಷ ಈ ದಿನ ಜಲಾಶಯದಲ್ಲಿ 90 ಟಿ.ಎಂ.ಸಿ.ಅಡಿಗೂ ಅಧಿಕ ನೀರು ಸಂಗ್ರಹವಿತ್ತು. ಈ ಸಲ ನೀರಿಲ್ಲದ ಕಾರಣ ಕಾಲುವೆಗಳಿಗೆ ನೀರು ಹರಿಸಿಲ್ಲ. ಎರಡು ವಾರಗಳಿಂದ ಜಲಾಶಯದ ನಿತ್ಯ ನೀರು ಬರುತ್ತಿರುವುದರಿಂದ ರೈತರಲ್ಲಿ ಭರವಸೆ ಮೂಡಿದೆ. ಆಗಸ್ಟ್ ನಲ್ಲಾದರೂ ಕಾಲುವೆಗಳಿಗೆ ನೀರು ಹರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.